Day 2 – 04-11-2018 at 2.15 pm @ Two Sides : Regional Art Culture & Literature
ಮಂಗಳೂರು: ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ’ರೀಜಿನಲ್ ಆರ್ಟ್, ಕಲ್ಚರ್ ಆಂಡ್ ಲಿಟ್ರೇಚರ್’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಜರುಗಿದ್ದು ಇದರಲ್ಲಿ ಚಂದ್ರಶೇಖರ್ ದಾಂಬ್ಲೆ, ಡಾ. ನರೇಂದ್ರ ರೈ ದೇರ್ಲ, ಡಾ. ಮಂಟಪ್ ಪ್ರಭಾಕರ್ ಜೋಶಿ, ಗುರುದತ್ ಬಂಟ್ವಾಳ್ಕರ್ ಭಾಗವಹಿಸಿದ್ದರು.
ಭಾರತೀಯ ಕಲೆ, ಕೃಷಿ, ಸಾಹಿತ್ಯ, ಭಾಷೆಗಳಲ್ಲಿ ಭಾರತದ ಪರಿಕಲ್ಪನೆ ಅತ್ಯಂತ ಉದಾತ್ತವಾಗಿದೆ. ಸ್ಥಳೀಯವೆನಿಸಿದ ಕಲೆಗಳು ಒಂದೊಂದು ಬಗೆಯಲ್ಲಿ, ಒಂದೊಂದು ವಿಧಾನದಲ್ಲಿ ದೇಶದ ಎಲ್ಲಾ ಕಡೆಯೂ ಅಸ್ತಿತ್ವದಲ್ಲಿದೆ. ಪ್ರಾದೇಶಿಕ ಕಲೆಗಳ ಸ್ವರೂಪದಲ್ಲಿ ಭಾರತವನ್ನು ಕಾಣಲು ಸಾಧ್ಯವಿದೆ ಎಂಬ ಅನಿಸಿಕೆಗಳು ಈ ಸಂವಾದದಲ್ಲಿ ವ್ಯಕ್ತವಾದವು.
ಪ್ರಭಾಕರ್ ಜೋಶಿ ಮಾತನಾಡಿ, ದಕ್ಷಿಣ ಕನ್ನಡ ಜನತೆಗೆ ಹೆಚ್ಚಿನ ವೈಚಾರಿಕತೆ ಇದೆ. ಇದೇ ಕಾರಣಕ್ಕೆ ಯಕ್ಷಗಾನದಂತಹ ಕಲೆಗಳು ಇಲ್ಲಿ ಉಗಮವಾಗಿದೆ. ಭಾರತೀಯ ಪಾರಂಪರಿಕ ಕಲೆಗಳನ್ನು ಯಾವುದೇ ಕಾರಣಕ್ಕೂ ವರ್ಗೀಕರಣಗೊಳಿಸಲು ಸಾಧ್ಯವಿಲ್ಲ. ಅವೆಲ್ಲವೂ ಅಖಿಲ ಭಾರತದ ಕಲೆಗಳಾಗಿವೆ. ಇಡೀ ಭಾರತೀಯತೆಯನ್ನು ಕಟ್ಟಿಕೊಡುವ ಅದ್ಭುತ ಶಕ್ತಿ ಯಕ್ಷಗಾನದಂತಹ ಕಲೆಗಳಿವೆ. ನಮ್ಮ ಸಂಸ್ಕೃತಿಯಲ್ಲಿ ದೈವನಿಂದನೆಯೂ ಕಲೆಯ ಭಾಗವಾಗಿದ್ದು, ಇದರ ಧರ್ಮಗಳಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ. ಸ್ಥಳಿಯ ಕಲಾವಿದರನ್ನು ಸ್ಥಳಿಯವಾಗಿ ಪರಿಗಣಿಸಬಾರದು. ಅವರನ್ನು ಭಾರತೀಯ ಕಲಾವಿದರು ಎಂದು ಗೌರವಿಸಬೇಕು ಎಂದರು.
ನರೇಂದ್ರ ದೇರ್ಲ ಮಾತನಾಡಿ, ಅಪ್ಪಟ ಭಾರತೀಯ ಕೃಷಿಯಲ್ಲಿ ಭಾರತೀಯತೆ ಇದೆ. ಆದರೆ ಇಂದು ಕೃಷಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ. ಲ್ಯಾಟಿನ್‌ನಲ್ಲಿ ಕ್ಲಪ್ಚೋ ಎಂದರೆ ನೇಗಿಲ ತುದಿಗೆ ಕಟ್ಟಿದ ಕಬ್ಬಿಣದ ಸಲಾಕೆ. ಅದರಿಂದಲೇ ಕಲ್ಚರ್ ಎಂಬ ಶಬ್ದ ಬಂತು, ಬಳಿಕ ಅಗ್ರಿಕಲ್ಚರ್ ಎಂಬ ಶಬ್ದ ಬಂತು. ಆದರೆ ಈ ಭೂಮಿಯ ಮೊದಲ ಸಂಸ್ಕೃತಿಯೇ ಅಗ್ರಿಕಲ್ಚರ್. ದೇಗುಲದ ಕೊಡಿಮರಕ್ಕೆ ತುಳುನಾಡಿನ ಜನ ಭತ್ತದ ಬೀಜ ಕಟ್ಟುತ್ತಾರೆ, ದೇಗುಲ ಮುಳುಗಿದರೂ ಬದುಕುಳಿದ ಮಂದಿಗೆ ಕೊಡಿಮರದಲ್ಲಿನ ಬೀಜ ಬದುಕಿನ ಆಧಾರವಾಗಲಿ ಎಂಬ ಉದಾತ್ತ ಚಿಂತನೆ ಇದರಲ್ಲಿದೆ. ಭತ್ತದ ಕೃಷಿ ಜನಕೇಂದ್ರೀತ ಕೃಷಿಯಾಗಿದ್ದು, ಪಾಡ್ದನದಂತಹ ಜನಪದವನ್ನೂ ಇದು ಒಳಗೊಂಡಿದೆ. ಆದರೆ ಹಣ ಬಂದ ಬಳಿಕ ಕೃಷಿಗೂ ಬೇಲಿ ಹಾಕಲಾಗಿದೆ ಎಂದು ವಿಷಾದಿಸಿದರು.
ಬಂಟ್ವಾಳ್ಕರ್ ಮಾತನಾಡಿ, ಗೋವಾದಿಂದ ಬಂದ ಸಾರಸ್ವತರನ್ನು ಕರಾವಳಿಗರು ಎಂದೂ ಬೇರೆಯವರಾಗಿ ನೋಡಿಲ್ಲ, ಕೊಂಕಣಿಯರು ದೇಗುಲ ನಿರ್ಮಾಣ ಮಾಡಿದರೂ ಘರ್ಷಣೆಗಳು, ಗೊಂದಲಗಳು ಇಲ್ಲಿ ಸಂಭವಿಸಿಲ್ಲ. ಭಾರತೀಯತೆಯ ಪರಿಕಲ್ಪನೆ ಇದಕ್ಕೆ ಕಾರಣ ಎಂದರು.