ಹಿಂದೂ ಮೌಲ್ಯ, ಭಾರತೀಯತೆಯ ನಾಶ ಕಮ್ಯೂನಿಷ್ಟ್, ಜಿಹಾದಿಗಳ ಗುರಿ

Day 2 – 04-11-2018 at 12.30 pm @ Two Sides : Engineered Violence in Kerala & Kashmir

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ’ಎಂಜಿನಿಯರ್‍ಡ್ ವೈಲೆನ್ಸ್ ಇನ್ ಕೇರಳ ಆಂಡ್ ಕಾಶ್ಮೀರ್’ ಎಂಬ ವಿಷಯದ ಬಗ್ಗೆ ಸಂವಾದ ಜರುಗಿದ್ದು, ಮೇಜರ್ ಗೌರವ್ ಆರ್ಯ, ಪ್ರಜ್ಞಾ ಪ್ರವಾಹದ ಸಂಚಾಲಕರಾದ ನಂದಕುಮಾರ್ ಹಾಗೂ ಸಂದೀಪ್ ಬಾಲಕೃಷ್ಣ ಭಾಗವಹಿಸಿದ್ದರು.

ನಂದಕುಮಾರ್ ಮಾತನಾಡಿ, ಕೇರಳದಲ್ಲಿ ಕಮ್ಯೂನಿಸ್ಟ್ ಕೃಪಾಪೋಷಿತ ಹಿಂಸಾಚಾರ ನಡೆಯುತ್ತಿದೆ. ಸಿರಿಯಾ, ಕಾಶ್ಮೀರಕ್ಕೆ ಹೋಗಲು ಸಿದ್ಧರಿರುವ ಪತ್ರಕರ್ತರು ಇಲ್ಲಿಗೆ ಬಂದು ಹಿಂಸಾಚಾರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ, ಅವರು ಕಮ್ಯೂನಿಸ್ಟ್ ಸರ್ಕಾರದ ಆದೇಶ ಪಾಲನೆ ಮಾಡುತ್ತಿದ್ದಾರೆ. ಕೇರಳದಲ್ಲಿ ಹಿಂದೂ ಧರ್ಮ, ಮೌಲ್ಯಗಳನ್ನು ನಾಶ ಮಾಡುವುದೇ ಕಮ್ಯೂನಿಷ್ಟರ ಪ್ರಮುಖ ಗುರಿಯಾಗಿದೆ. 1950ರಿಂದಲೂ ಶಬರಿಮಲೆ ಮೌಲ್ಯವನ್ನು ನಾಶ ಮಾಡುವ ಕಾರ್ಯ ಮಿಶನರಿ, ಕಮ್ಯೂನಿಷ್ಟರಿಂದ ನಡೆಯುತ್ತಿದೆ. ಈಗ ಇರುಮುಡಿಯನ್ನೂ ಬಿಚ್ಚಿ, ತನಿಖೆ ನಡೆಸುವ ವಾತಾವರಣ ಅಲ್ಲಿ ಇದೆ. ನಿರಂತರವಾಗಿ ಕೇರಳ ಹಿಂದೂಗಳಲ್ಲಿ ಭಯ ಬಿತ್ತುವ ಕಾರ್ಯ ನಡೆದಿದೆ ಎಂದರು.

ನಿರಂತರವಾಗಿ ಹಿಂದೂಗಳ ಮೇಲೆ ಆಕ್ರಮಣ ಜರುಗಿದ ಪರಿಣಾಮವಾಗಿ ಈಗ ಅಲ್ಲಿ ಹಿಂದೂ ಭಾವನೆಗಳು ಎಚ್ಚೆತ್ತಿದೆ. ಶಬರಿಮಲೆ ಪ್ರಕರಣದಲ್ಲಿ ಇದು ಸ್ಪಷ್ಟವಾಗಿದೆ. ಈ ಭಾವನೆ ಹೀಗೆ ಇದ್ದರೆ, ಶೀಘ್ರದಲ್ಲೇ ಕೇರಳದಲ್ಲಿ ರಾಜಕೀಯ ಚಿತ್ರಣ ಬದಲಾಗುವ ಸನ್ನಿವೇಶ ಸೃಷ್ಟಿಯಾಗಬಹುದು ಎಂದರು.

ಮೇಜರ್ ಗೌರವ್ ಆರ್ಯ ಮಾತನಾಡಿ, ಕಾಶ್ಮೀರದಲ್ಲಿ ಕೇವಲ ಮುಸ್ಲಿಮರು ಇದ್ದಾರೆ ಎಂಬ ಕಾರಣಕ್ಕೆ ಪಾಕಿಸ್ಥಾನಕ್ಕೆ ಕಾಶ್ಮೀರ ಬೇಕು. ಹಿಂದೆ ಪಾಕ್ ಸೇನೆಯ ಧ್ಯೇಯ ಏಕತೆ, ಶಿಸ್ತು ಆಗಿತ್ತು. ಆದರೀಗ ಜಿಹಾದ್ ಅದರ ಧ್ಯೇಯವಾಗಿದೆ. ಇಸ್ಲಾಂ ಮೂಲಭೂತವಾದಿಗಳಿಗಾಗಿ ಅದು ಹೋರಾಡುತ್ತಿದೆ. ಕಾಶ್ಮೀರಿ ಪಂಡಿತರನ್ನು ಓಡಿಸುವ ಕಾರ್ಯ ಹಿಂದಿನಿಂದಲೂ ವ್ಯವಸ್ಥಿತವಾಗಿಯೇ ನಡೆದಿದೆ. ಮತಾಂತರವಾಗುವ, ಓಡಿ ಹೋಗುವ ಮತ್ತು ಸಾಯುವ ಮೂರು ಆಯ್ಕೆಗಳನ್ನು ಅವರ ಮುಂದಿಟ್ಟು ಕ್ರೂರವಾಗಿ ನಡೆದುಕೊಳ್ಳಲಾಗಿದೆ ಎಂದರು.

ಕಾಶ್ಮೀರಕ್ಕೆ ಅದರದ್ದೇ ಆದ ಧ್ವಜವಿದೆ, ಸಂವಿಧಾನವಿದೆ. ಆದರೂ ಅಲ್ಲಿ ಇಸಿಸ್, ಪಾಕ್ ಧ್ವಜಗಳನ್ನು ಹಾರಿಸಲಾಗುತ್ತಿದೆ. ಇದು ಅಲ್ಲಿನ ಮೂಲಭೂತವಾದಿಗಳು ಉಗ್ರ ಸಂಘಟನೆಯೊಂದಿಗೆ ಸಂಪರ್ಕಿತರಾಗಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿದೆ. ಪುಟ್ಟ ಕಾಶ್ಮೀರವನ್ನು ಶರಿಯಾ ಕಾನೂನು ಒಳಗೊಂಡ ಇಸ್ಲಾಂ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಇವರ ಗುರಿಯಾಗಿದೆ. ಇನ್ನೊಂದು ವರ್ಷದಲ್ಲಿ ಅಲ್ಲಿ ಸುಸೈಡ್ ಬಾಂಬರ್‌ಗಳು ಹುಟ್ಟಿಕೊಂಡರೂ ಅಚ್ಚರಿಯಿಲ್ಲ ಎಂದರು.

ದೇಶದ ಹಿತದಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ಅಲ್ಲಿ ಎಲ್ಲವೂ ಸರಿ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾರಿಗೂ ಅನುಮಾನವಿಲ್ಲ, ಆದರೂ ಕೆಲವರು ಸರ್ಕಾರವನ್ನು ವಿರೋಧಿಸುವ ಉದ್ದೇಶದಿಂದ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರವನ್ನು ವಿರೋಧಿಸುವುದು ವಿರೋಧ ಪಕ್ಷಗಳ ಕರ್ತವ್ಯ ಎಂಬಂತಾಗಿದೆ ಎಂದರು.