ಲಿಟ್ ಫೆಸ್ಟ್‌ನಲ್ಲಿ ಇತಿಹಾಸದ ಹುಡುಕಾಟ

Day 2 – 04-11-2018 at 10.00 am @ Two Sides : Politics of Writing Indian History

ದ ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯೊಂದಿಗೆ ಪ್ರಾರಂಭವಾದ “ಮಂಗಳೂರು‌ ಲಿಟ್ ಫೆಸ್ಟ್ 2018” ಸಾಹಿತ್ಯ ಉತ್ಸವದ ಎರಡನೇ ದಿನದ ಇತಿಹಾಸದ ಕುರಿತ ಸಂವಾದ ಕಾರ್ಯಕ್ರಮ ಸಭಿಕರನ್ನು ಗಂಭೀರ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು.

ಇತ್ತೀಚಿನ ನ್ಯಾಯಾಲಯಗಳ ತೀರ್ಪುಗಳೂ ನೈಜ ಭಾರತೀಯ ಇತಿಹಾಸ ತಿಳಿಸದ ಪಠ್ಯಗಳಿಂದಲೇ ಪ್ರೇರಿತವಾದವು ಮತ್ತು ವಸಾಹತುಶಾಹಿ ಇತಿಹಾಸದ ನಿಜವಾದ ಉದ್ದೇಶವೇ ಇಲ್ಲಿನ ಸಂಸ್ಕೃತಿಯನ್ನು, ಇತಿಹಾಸವನ್ನು ಮುಚ್ಚಿಡುವುದೇ ಆಗಿತ್ತು ಎನ್ನುವ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು.

ಯಾವ ಇತಿಹಾಸವನ್ನು ನಾವು ಕಲಿಯಬೇಕೆನ್ನುವುದನ್ನು ಅಧಿಕಾರಶಾಹಿ ನಿರ್ಧರಿಸುತ್ತಿದೆ. ಭಾರತೀಯ ಸಾಂಪ್ರದಾಯಿಕ ಜ್ಞಾನ ಕಲೆ, ವೈದ್ಯಕೀಯ, ವಿಜ್ಞಾನ… ಹೀಗೆ ಎಲ್ಲಾ ವಿಭಾಗಗಳಲ್ಲೂ ಅಪಾರವಾಗಿದ್ದು ಆದರೆ ಅದನ್ನು ಕಡೆಗಣಿಸಲಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಯಿತು.

ಪರಕೀಯ ಕ್ರೌರ್ಯವನ್ನೇ ಆದರ್ಶವನ್ನಾಗಿ ತೆಗೆದುಕೊಂಡು ಅದನ್ನೇ ವಿದ್ಯಾರ್ಥಿಗಳಿಗೆ ಕಲಿಸಬೇಕೆಂದು ಯಾವುದೇ ಮುಜುಗರವೂ ಇಲ್ಲದೇ ಹೇಳಿಕೊಳ್ಳುತ್ತಿರುವವರ ಬಗ್ಗೆ ಅಚ್ಚರಿ ವ್ಯಕ್ತವಾಯಿತು. NCRT ಪಠ್ಯಗಳಲ್ಲಿ ಮೈಸೂರು ಒಡೆಯರ ಆಡಳಿತದ ಬಗ್ಗೆ ಪಾಠಗಳಿಲ್ಲ. ಆದರೆ ಪರಕೀಯರ ರಕ್ತ ಚರಿತ್ರೆಗಳಿಗೆ ಅಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಅದರ ಉದ್ದೇಶವೇನು ಎನ್ನುವ ಪ್ರಶ್ನೆ ಸಂವಾದದಲ್ಲಿ ಎದುರಾಯಿತು.

ಸಂವಾದ ಕಾರ್ಯಕ್ರಮದಲ್ಲಿ, ಸ್ವಾತಂತ್ರ್ಯಾನಂತರ ಕೂಡಾ ಇತಿಹಾಸವನ್ನು ಮುಚ್ಚಿಡುವ, ತಿರುಚುವ ಕೆಲಸವಾಗಿರುವ ಬಗ್ಗೆ ಉದಾಹರಣೆಗಳ ಸಮೇತ ಉತ್ತರ ಕಂಡುಕೊಳ್ಳಲಾಯಿತು.

ಯಾವುದೇ ಇತಿಹಾಸ ಪಠ್ಯಗಳನ್ನು ನಾವು ಇದುವರೆಗೂ ಬದಲಾಯಿಸಿಲ್ಲ ಎನ್ನುವುದನ್ನು ಕೇಂದ್ರ ಸಚಿವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಆದರೆ ಸತ್ಯವಾದ ಇತಿಹಾಸ ತಿಳಿಯಲೇ ಬೇಕು. ಅದಕ್ಕೆ ಸಾಕಷ್ಟು ಸಮಯ ಕೂಡಾ ಬೇಕಾಗುತ್ತದೆ. ಅಂತಹಾ ಕಾರ್ಯಗಳಿಗೆ ಇಂತಹಾ ಲಿಟ್ ಫೆಸ್ಟ್­ಗಳು ಪೂರಕವಾಗಿ ಕೆಲಸ ಮಾಡಬಹುದು ಎನ್ನುವ ಆಶಯ ವ್ಯಕ್ತವಾಯಿತು.

ಹಿಂದೂಯಿಸಂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಖ್ಯಾತ ಹಿಂದೂ ಚಿಂತಕ ಡೇವಿಡ್ ಫ್ರಾಲಿಯವರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ‌ ಕೂಡಾ ನಡೆಯಿತು.