ಆರ್‌ಎಸ್‌ಎಸ್‌ನ್ನು ಮಾಧ್ಯಮಗಳು ತಪ್ಪುಗ್ರಹಿಕೆಯೊಂದಿಗೆ ಅರ್ಥೈಸುತ್ತದೆ : ರತನ್ ಶಾರದಾ

Day 1 – 03-11-2018 at 3.30 pm @ Two Sides : RSS 360º – Facts Vs Fiction

ಮಂಗಳೂರು ಲಿಟ್ ಫೆಸ್ಟ್‌ನ ಸಂವಾದ ಕಾರ್ಯಕ್ರಮದಲ್ಲಿ ’ಆರ್‌ಎಸ್‌ಎಸ್ 360º-ಫ್ಯಾಕ್ಟ್ಸ್ ವರ್ಸಸ್ ಫಿಕ್ಷನ್’ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು.

’ಆರ್‌ಎಸ್‌ಎಸ್ 360º’ ಪುಸ್ತಕದ ಲೇಖಕ ರತನ್ ಶಾರದಾ ಅವರೊಂದಿಗೆ ರಘೋತ್ತಮ್ ಸುಂದರ್ ರಾಜನ್ ಅವರು ಸಂವಾದ ನಡೆಸಿದ್ದು, ಪುಸ್ತಕ ಬರೆಯಲು ಪ್ರೇರಣೆ, ಆರ್‌ಎಸ್‌ಎಸ್ ಒಳಹೊರಹುಗಳನ್ನು ಇಲ್ಲಿ ಹಂಚಿಕೊಳ್ಳಲಾಯಿತು. ಸೂರ್ಯನ ಮೇಲೆಯೇ ಯಾವತ್ತೂ ಸ್ಪಾಟ್ ಲೈಟ್ ಇಡುವಂತೆ, ಇಂದು ಎಲ್ಲಾ ವಿಷಯದಲ್ಲೂ ಆರ್‌ಎಸ್‌ಎಸ್‌ನ್ನು ಕೇಂದ್ರವಾಗಿಸಲಾಗುತ್ತಿದೆ. ಆರ್‌ಬಿಐಯಲ್ಲಿನ ಬಿಕ್ಕಟ್ಟಿನ ಬಗ್ಗೆ ಆರ್‌ಎಸ್‌ಎಸ್ ಏನು ಮಾಡಲಿದೆ ಎಂದು ಕೇಳುವ ಜನರೂ ಇದ್ದಾರೆ ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಯಿತು.

’ಆರ್‌ಎಸ್‌ಎಸ್ ಎಲ್ಲಾ ವಿಚಾರಗಳನ್ನು ಅತ್ಯಂತ ಸರಳವಾದ ಭಾಷೆಯಲ್ಲಿ ’ಆರ್‌ಎಸ್‌ಎಸ್ 360º’ ಪುಸ್ತಕದಲ್ಲಿ ವಿವರಿಸಲಾಗಿದೆ. ಇಂಗ್ಲೀಷ್ ಬಲ್ಲ ಯುವ ಜನತೆಯನ್ನು ಗುರಿಯಾಗಿರಿಸಿ ಇದನ್ನು ಬರೆಯಲಾಗಿದೆ. ಜನಸಾಮಾನ್ಯರಿಗೆ ಆರ್‌ಎಸ್‌ಎಸ್‌ನ್ನು ಅರ್ಥ ಮಾಡಿಸುವಲ್ಲಿ ಪುಸ್ತಕ ಸಹಾಯಕವಾಗಲಿದೆ.

ಸಂಘಕ್ಕಾಗಿ ಬದುಕು, ಕುಟುಂಬ, ಉದ್ಯೋಗ ಎಲ್ಲವನ್ನೂ ತ್ಯಾಗ ಮಾಡುವ ಕಾರ್ಯಕರ್ತರು ಮತ್ತು ಗ್ರಂಥಾಲಯಗಳಲ್ಲಿ, ದೊಡ್ಡ ದೊಡ್ಡ ಪುಸ್ತಕ ಮಳಿಗೆಗಳಲ್ಲಿ ಆರ್‌ಎಸ್‌ಎಸ್ ಪರವಾದ ಪುಸ್ತಕಗಳು ಇಲ್ಲದೇ ಇರುವುದು ಈ ಪುಸ್ತಕ ಬರೆಯಲು ಪ್ರೇರಣೆಯಾಯಿತು ಎಂದು ರತನ್ ಶಾರದಾ ಹೇಳಿದರು.

ಆರ್‌ಎಸ್‌ಎಸ್ ಯಾರೂ ಹೇಳದ್ದನ್ನು ಹೇಳಿಲ್ಲ, ತಳಮಟ್ಟದಿಂದ ಹಿಂದುತ್ವವನ್ನು ಅರ್ಥ ಮಾಡಿಕೊಂಡ ಸಂಘಟನೆ ಅದಾಗಿದೆ. ತಳಮಟ್ಟದಲ್ಲಿ ದುಡಿದರೆ ಮಾತ್ರ ಸಮಾಜದ ಸೇವೆ ಮಾಡಲು ಸಾಧ್ಯ ಎಂಬುದು ಅದರ ಧ್ಯೇಯವಾಗಿದೆ. ಬಡತನವನ್ನು ಅರ್ಥಮಾಡಿಕೊಳ್ಳಲು ಆರ್‌ಎಸ್‌ಎಸ್ ಕಾರ್ಯಕರ್ತರು ಜೋಪಡಿಗಳಿಗೂ ತೆರಳುತ್ತಾರೆ. ಕಾಲು ನೆಲದಲ್ಲಿ ಇಡದೆ ಸಾಮಾಜಿಕ ಕಾರ್ಯ ಅಸಾಧ್ಯ ಎಂಬುದನ್ನು ಅರಿತ ಸಂಘಟನೆಯಾಗಿದೆ’ ಎಂದರು.

ಶಾಖೆಗಳಲ್ಲಿ ಮೊದಮೊದಲು ಸಂಗೀತ, ಆಟಗಳಿಂದ ತರಬೇತಿ ಆರಂಭವಾಗುತ್ತದೆ, ನಿಧಾನಕ್ಕೆ ವ್ಯಕ್ತಿ ಅಲ್ಲಿ ಪರಿಪೂರ್ಣ ಸೇವಕನಾಗಿ ಹೊರಹೊಮ್ಮುತ್ತಾನೆ. ಶಾಖೆಗಳಿಂದ ನಾವು ಭಾತೃತ್ವವನ್ನು ಕಲಿಯುತ್ತೇವೆ. 2018ರ ಬಳಿಕ ಆರ್‌ಎಸ್‌ಎಸ್ ಸೇರುವವರ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ರಾಜಕೀಯ ಮೈಲಿ ಪಡೆಯಲು ಆರ್‌ಎಸ್‌ಎಸ್ ಸೇರುತ್ತಾರೆ ಎಂಬ ವಾದವಿದೆ. ಆದರೆ ಕೆಲವೇ ಜನ ಆ ರೀತಿ ಮಾಡುತ್ತಾರೆ. ಶಾಖೆಗಳಿಗೆ ಬಂದು ತಮ್ಮ ಬೇಳೆ ಇಲ್ಲಿ ಬೇಯುವುದಿಲ್ಲ ಎಂದು ತಿಳಿದ ಬಳಿಕ ಹಿಂದುರುಗುತ್ತಾರೆ. ಸೇವಾ ಮನೋಭಾವದವರು ಮಾತ್ರ ಇಲ್ಲಿ ಉಳಿಯುತ್ತಾರೆ ಎಂದರು.

ಅರವತ್ತು ವರ್ಷಗಳ ವರೆಗೆ ಆರ್‌ಎಸ್‌ಎಸ್ ಮಾಧ್ಯಮ ವಿಭಾಗವಿಲ್ಲದೇ ಕೆಲಸ ಮಾಡಿದೆ, ಆದರೂ ಸಂಘವನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿವೆ ಎನ್ನುವುದನ್ನು ಉದಾಹರಣೆಯೊಂದಿಗೆ ವಿವರಿಸಿದರು.

ಇದೀಗ ನಮ್ಮದೇ ಮಾಧ್ಯಮ ವಿಭಾಗವಿದ್ದು, ಇದೀಗ ನಾವು ಸಾಕಷ್ಟು ವೇಗವಾಗಿ ಹಾಗೂ ನೇರವಾಗಿ ಜನರನ್ನು ತಲುಪುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದುರುದ್ದೇಶದಿಂದ ಆರ್‌ಎಸ್‌ಎಸ್ ಮೇಲೆ ಹೊರಿಸಿದ ಎಲ್ಲಾ ಆರೋಪಗಳಿಂದಲೂ ಮುಕ್ತವಾಗಿದೆ. ಗುರೂಜಿಯವರ ಹಾಗೂ ಸರ್ದಾರ್ ಪಟೇಲರ ಸಂಬಂಧ ಅತ್ಯಂತ ಸೌಹಾರ್ದಯುತವಾಗಿತ್ತು. ಆದರೂ ಪಟೇಲರು ಸಂಘದ ವಿರುದ್ಧವಿದ್ದರು ಎನ್ನುವ ಸುದ್ದಿಗಳನ್ನು ಹರಡುತ್ತಿರುವುದು ದುರದೃಷ್ಟಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಕೇವಲ ಸಂಘಟನೆಯಾಗದೆ, ಸಮಾಜದ ಭಾಗವಾಗಿದೆ ಎಂದು ಅವರು ಪ್ರತಿಪಾದಿಸಿದರು.