ಸೆಲೆಕ್ಟೀವ್ ಆದ ಟೀಕೆಗಳಿಗೆ ಖಂಡನೆ

Day 1 – 03-11-2018 at 12.30 pm @ Two Sides : The Selective Outrage  – Good Dissent, Bad Dissent or Dissent of Convenience

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ‘ದಿ ಸೆಲೆಕ್ಟಿವ್ ಔಟ್ರೇಜ್ – ಗುಡ್ ಡಿಸೆಂಟ್, ಬ್ಯಾಡ್ ಡಿಸೆಂಟ್ ಆರ್ ಡಿಸೆಂಟ್ ಆಫ್ ಕನ್ವೀನಿಯನ್ಸ್’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಜರುಗಿದ್ದು, ಶಿಫಾಲಿ ವೈದ್ಯ, ಪ್ರಕಾಶ್ ಬೆಳವಾಡಿ, ಆನಂದ್ ರಂಗನಾಥನ್ ಮತ್ತು ಮಧು ಕಿಶ್ವರ್  ಭಾಗಿಯಾಗಿದ್ದರು.

ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಹೇಗೆ ಸೆಲೆಕ್ಟಿವ್ ಆಗಿ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು, ಖಂಡನೆಗಳನ್ನು ವ್ಯಕ್ತಪಡಿಸಲಾಗುತ್ತದೆ ಎಂಬ ಬಗ್ಗೆ ಇಲ್ಲಿ ಗಣ್ಯರು ಸಂವಾದಿಸಿದರು.

ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಅನಿಸಿಕೆ, ಕೆಟ್ಟ ಅನಿಸಿಕೆಗಳನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಯಾರ ಅಭಿಪ್ರಾಯವನ್ನೂ ಇನ್ನೊಬ್ಬರ ಮೇಲೆ ಹೇರಲು ಸಾಧ್ಯವಿಲ್ಲ. ಆದರೆ ಸೆಲೆಕ್ಟಿವ್ ಆಗಿ ಒಂದು ವ್ಯಕ್ತಿ, ಒಂದು ಸಿದ್ಧಾಂತಗಳ ವಿರುದ್ಧ ದುರುದ್ದೇಶಪೂರಿತ ಟೀಕೆಗಳನ್ನು ವ್ಯಕ್ತಪಡಿಸುವುದು ಸರಿಯಲ್ಲ ಎಂಬ ಅನಿಸಿಕೆಗಳು ಇಲ್ಲಿ ವ್ಯಕ್ತವಾದವು.

ಕೆಲ ವಿಚಾರವಾದಿಗಳಿಗೆ 2014ರ ಬಳಿಕ ದೇಶದಲ್ಲಿ ಎಲ್ಲವೂ ಕೆಟ್ಟು ಹೋಗಿದೆ ಎಂಬ ಅನಿಸಿಕೆ ಶುರುವಾಗಿದೆ. ಭ್ರಷ್ಟಾಚಾರ, ಹಿಂಸಾಚಾರ, ಗುಂಪುಹಲ್ಲೆ ಎಲ್ಲವೂ 2014ರ ಬಳಿಕವೇ ಆರಂಭವಾಯಿತು, ಅದಕ್ಕೂ ಮೊದಲು ಭಾರತದಲ್ಲಿ ಹಿಂಸೆ, ಗಲಾಟೆ ಯಾವುದು ಇರಲಿಲ್ಲ ಎಂಬಂತೆ ಇವರು ವರ್ತಿಸುತ್ತಿದೆ ಎಂದು ಲೇಖಕ ಆನಂದ್ ರಂಗನಾಥನ್ ಹೇಳಿದರು.

ಶಿಫಾಲಿ ವೈದ್ಯ ಮಾತನಾಡಿ, ಕೆಲವರು ನಮ್ಮ ಮೇಲೆ ಅವರ ಬ್ರಿಟಿಷ್ ದೇಶಪ್ರೇಮವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಎಲ್ಲರಿಗೂ ಭಯವಿಲ್ಲದೆ ಪ್ರಜಾಪ್ರಭುತ್ವದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಅವಕಾಶವಿದೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪರವಾದ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ತನಗೆ ಎದುರಾಗುತ್ತಿರುವ ಸವಾಲುಗಳ ಬಗ್ಗೆ ವಿವರಿಸಿದ ಅವರು, ನಾವು ಸ್ಟಾಪ್ ಮಾಡಿದರೆ ಅವರು ಸ್ಟಾರ್ಟ್ ಮಾಡುತ್ತಾರೆ. ಹಾಗಾಗೀ ನಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸುವುದನ್ನು ನಾವು ಯಾವತ್ತೂ ನಿಲ್ಲಿಸಬಾರದು ಎಂದರು.

ಮಧು ಕಿಶ್ವರ್ ಮಾತನಾಡಿ, ’ದೇಶದಲ್ಲಿ ಎಲ್ಲಾ ಘಟನೆಗಳನ್ನು ಎಡಪಂಥೀಯರ ದೃಷ್ಟಿಯಿಂದ ನೋಡುವ ಧೋರಣೆಯಿದೆ. ಕತ್ವಾದಂತಹ ಗ್ಯಾಂಗ್ ರೇಪ್ ಪ್ರಕರಣದಲ್ಲೂ ಮಾಧ್ಯಮಗಳು ನೈಜತೆಯನ್ನು ಅರಿಯದೆ ಒಂದು ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡಿವೆ. ಆದರೆ ನನ್ ರೇಪ್ ಕೇಸ್‌ನಲ್ಲಿ ಮಾಧ್ಯಮಗಳ ವರ್ತನೆ ಕತ್ವಾದ ರೀತಿ ಇರಲಿಲ್ಲ. ನರೇಂದ್ರ ಮೋದಿ ಪರವಾಗಿ ಬರೆದ ನನ್ನ ಪುಸ್ತಕವನ್ನು ಯಾರೂ ಪ್ರಕಟಿಸಲು ಮುಂದಾಗಿರಲಿಲ್ಲ, ಇದು ನಮ್ಮ ದೇಶದ ವಾಸ್ತವವಾಗಿದೆ. ಎಡಪಂಥೀಯರು ಭಾರತವನ್ನು ಜಗತ್ತಿನ ಮುಂದೆ ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ. ಯಾರೋ ಡಾಲರ್‌ಗಟ್ಟಲೆ ನೀಡಿ ನಿಮ್ಮ ತಾಯಿಯನ್ನು ಉಗಿಯಿರಿ ಎಂದು ಹೇಳಿಕೊಟ್ಟಂತೆ ಅವರ ವರ್ತನೆ ಇದೆ ಎಂದರು.

ಪ್ರಕಾಶ್ ಬೆಳವಾಡಿ ಮಾತನಾಡಿ, ರಂಗಭೂಮಿಯಲ್ಲಿ ಎಡಪಂಥೀಯ ವಿಚಾರಧಾರೆಯವರೇ ಇರುತ್ತಾರೆ. ನಮ್ಮಂತವರು ಅಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಈ ಹಿಂದೆ ರಾಜ್ಯಗಳ ಮೂಲೆಯಲ್ಲಿ ನಡೆಯುತ್ತಿದ್ದ ಘಟನೆಗಳ ಬಗ್ಗೆ ರಾಜ್ಯ ಸರ್ಕಾರವನ್ನು ದೂಷಿಸಲಾಗುತ್ತಿತ್ತು. ಮಂಗಳೂರು ಪಬ್ ಅಟ್ಯಾಕ್ ವೇಳೆ ಯಡಿಯೂರಪ್ಪ ಸರ್ಕಾರವನ್ನು ಟೀಕಿಸಲಾಗಿತ್ತು. ಆದರೆ ಇಂದು ಯಾವುದೇ ರಾಜ್ಯದ ಮೂಲೆಯಲ್ಲಿ ಯಾವುದೇ ಘಟನೆ ನಡೆದರೂ ಕೇಂದ್ರ ಸರ್ಕಾರವನ್ನೇ ದೂಷಿಸಲಾಗುತ್ತದೆ ಎಂದರು.