ಸಾಹಿತ್ಯ ಉತ್ಸವದಲ್ಲಿ ಅರವಿಂದರ ನೆನಪು

Day 1 – 03-11-2018 at 12.30 pm @ Manthan : Sri Aurobindos Idea of Spiritual Nationalism – Going beyond European Idea of Nation States

ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವದ ಭಾಗವಾಗಿ ‘ಶ್ರೀ ಅರಬಿಂದೋ’ಸ್ ಐಡಿಯಾ ಆಫ್ ಸ್ಪಿರಿಚುವಲ್ ನ್ಯಾಷನಲಿಸಂ- ಗೋಯಿಂಗ್ ಬಿಯಾಂಡ್ ಯುರೋಪಿಯನ್ ಐಡಿಯಾ ಆಫ್ ನ್ಯಾಷನಲ್ ಸ್ಟೇಟ್ಸ್’ ಎನ್ನುವ ವಿಚಾರವಾಗಿ ಸಂವಾದ ಕಾರ್ಯಕ್ರಮವು ಜರುಗಿತು.

ಅರವಿಂದರು ಬರೆಯುತ್ತಿದ್ದ ಲೇಖನಗಳನ್ನು ನಿಲ್ಲಿಸುವಂತೆ ಎಂ.ಜಿ.ರಾನಡೆಯವರು ಒತ್ತಡ ಹೇರುವ ಮೂಲಕವೇ ಈ ದೇಶದಲ್ಲಿ ಅಭಿವ್ಯಕ್ತಿ‌ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಪ್ರಾರಂಭವಾಗಿತ್ತು ಎನ್ನುವ ಅಭಿಪ್ರಾಯ ಅಲ್ಲಿ ವ್ಯಕ್ತವಾಯಿತು.

ಅರವಿಂದರ ದೃಷ್ಟಿಯಲ್ಲಿ ಮನುಷ್ಯನಿಗೆ ಹೇಗೆ ದೇಹ, ಆತ್ಮ ಹಾಗೂ ಮನಗಳಿವೆಯೋ ಹಾಗೆಯೇ ಒಂದು ದೇಶಕ್ಕೂ ದೇಹ, ಆತ್ಮ ಮತ್ತು ಮನವಿರುತ್ತದೆ. ಒಂದು ದೇಶವೆಂದರೆ ಅದು ಕೇವಲ ಒಂದು ಅಳತೆಯ ಭೂಮಿಯಲ್ಲ. ಜನ, ಭೂಮಿ ಮತ್ತು ಸಂಸ್ಕೃತಿಗಳು ಒಟ್ಟಾಗಿ ಸೇರಿದಾಗ ಮಾತ್ರ ಅದು ಒಂದು ದೇಶವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಭಾರತದಲ್ಲಿ ರಾಷ್ಟ್ರೀಯತೆಯೆಂದರೆ ಅದು ಸನಾತನ ಧರ್ಮ ಎನ್ನುವುದನ್ನು ಅರವಿಂದರು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದರು. ಆಧ್ಯಾತ್ಮಿಕತೆಯೇ ಬೇರೆ ಮತ್ತು ಜೀವನವೇ ಬೇರೆ ಎನ್ನುವ ಕಲ್ಪನೆ ಅರವಿಂದರದ್ದಾಗಿರಲಿಲ್ಲ ಎಂದು  ಡಾ. ನಂದನ್ ಪ್ರಭು ಅವರು ಅರವಿಂದರ ಪರಿಕಲ್ಪನೆಗಳನ್ನು ಸಭಿಕರ ಮುಂದೆ ತೆರೆದಿಟ್ಟರು.

‘ಅಂತಾರಾಷ್ಟ್ರೀಯತೆ ಎನ್ನುವುದು ಒಂದು ವಿಶಾಲವಾದ ಮನೋಭಾವ’ ಎನ್ನುವ ಪ್ರತಿಪಾದನೆಗಳು ಕೇವಲ ಹೇರಿಕೆಯಾಗುತ್ತಿವೆ. ಆದರೆ ಆಧ್ಯಾತ್ಮಿಕ ರಾಷ್ಟ್ರೀಯತೆಯು ಜಗತ್ತನ್ನು ಒಂದುಗೂಡಿಸುತ್ತದೆ ಎನ್ನುವುದು ಪ್ಯಾನಲಿಸ್ಟ್­ಗಳ ಅಭಿಪ್ರಾಯವಾಗಿತ್ತು.

ಹಾಗೆಯೇ ಚರ್ಚಾ ಗೋಷ್ಠಿಯಲ್ಲಿ ಸಭಿಕರ ಹಲವು ಪ್ರಶ್ನೆಗಳಿಗೂ ಉತ್ತರಿಸಲಾಯಿತು. ಸಂವಾದ ಕಾರ್ಯಕ್ರಮದಲ್ಲಿ ಡಾ. ವಿನಯಚಂದ್ರ ಬಾನಾವತಿ ಮತ್ತು ಡಾ. ನಂದನ್ ಪ್ರಭು ಅವರು ಭಾಗವಹಿಸಿದ್ದರು.