ಸಾಹಿತ್ಯ, ಸಮಾಜಕ್ಕೆ ಹೊಸ ಬೆಳಕನ್ನು ಚೆಲ್ಲಬಲ್ಲುದು : ಸುನಿಲ್ ಕುಲಕರ್ಣಿ

ಮಂಗಳೂರು: ಸಾಹಿತ್ಯ, ಸಮಾಜ ಕ್ಕೆ ಹೊಸ ಬೆಳಕನ್ನು ಚೆಲ್ಲಬಲ್ಲುದು. ವಿಭಿನ್ನವಾಗಿ ಯೋಚನೆ ಮಾಡುವಂತೆ ಮಾಡಬಲ್ಲುದು. ನಮ್ಮ ಮಣ್ಣಿನ ಸಾಹಿತ್ಯ, ಸಂಸ್ಕೃತಿ ಉದಾತ್ತತೆಯನ್ನು ಯುವಜನರಿಗೆ ತಲುಪಿಸುವ ಉದ್ದೇಶದೊಂದಿಗೆ ಜ.11 ಮತ್ತು 12ರಂದು ಮಂಗಳೂರು ಲಿಟ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಭಾರತ್ ಫೌಂಡೇಶನ್‌ ಟ್ರಸ್ಟಿ ಸುನಿಲ್‌ ಕುಲಕರ್ಣಿ ಹೇಳಿದರು.

ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾರತ್ ಫೌಂಡೇಶನ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಸಹಯೋಗದಲ್ಲಿ ಮಂಗಳೂರು ಲಿಟ್ ಫೆಸ್ಟ್ ಪ್ರಯುಕ್ತ ನಡೆದ ಅಂತರ್ ಕಾಲೇಜು ರಸಪ್ರಶ್ನೆ ಮತ್ತು ಪುಸ್ತಕ ವಿಮರ್ಶಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಗಳೂರು ಲಿಟ್ ಫೆಸ್ಟ್ ಭಾರತೀಯ ಸಾಹಿತ್ಯ, ಸಂಸ್ಕೃತಿಯನ್ನು ತೆರೆದಿಡುವ ವೇದಿಕೆ. ಇದು ದೇಶ-ವಿದೇಶಗಳ ಸಂಪನ್ಮೂಲ ವ್ಯಕ್ತಿಗಳನ್ನು ಕೇಳುವ, ಅವರೊಂದಿಗೆ ಮುಖಾಮುಖಿ ಸಂವಾದ ನಡೆಸುವ ವೇದಿಕೆ. ಇದೊಂದು ಕಾರ್ಯಕ್ರಮವಲ್ಲ, ಬದಲಾಗಿ ಒಂದು ವೇದಿಕೆ ಎಂದು ಅವರು ಹೇಳಿದರು.

‘ಯುವಜನರಲ್ಲಿ ಸಾಹಿತ್ಯದ ಒಲವು’ ಕುರಿತು ಮಾತನಾಡಿದ, ವಿದ್ವಾನ್ ಡಾ.ರಾಘವೇಂದ್ರ ರಾವ್, ಅನ್ನದಷ್ಟೇ ಅಕ್ಷರವೂ ಜೀವನದಲ್ಲಿ ಮುಖ್ಯ. ಮಾನವೀಯ ಮೌಲ್ಯವನ್ನು ಜಗತ್ತಿಗೆ ತೋರಿಸಿದ್ದೇ ಸಾಹಿತ್ಯ, ಎಂದರು.

ನಿವೃತ್ತ ಪ್ರಾಧ್ಯಾಪಕ ವಿ. ಬಿ. ಕುಳಮರ್ವ, ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಗೌಡ, ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ವೇದಿಕೆಯಲ್ಲಿದ್ದರು. ಲತೇಶ್ ಕಾಂತ ಕಾರ್ಯಕ್ರಮ ನಿರೂಪಿಸಿ, ಕಾಜಲ್ ಧನ್ಯವಾದ ಸಮರ್ಪಿಸಿದರು. ಪುತ್ತೂರಿನ ವಿದುಷಿ ಅನಸೂಯ ಪಾಠಕ್, ಮತ್ತವರ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.

21 ತಂಡಗಳು ಭಾಗಿ
ಒಟ್ಟು 21 ತಂಡಗಳು ಪುಸ್ತಕ ವಿಮರ್ಶೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿವೇಕಾನಂದ ಬಿ.ಎಡ್ ಕಾಲೇಜಿನ ಅಕ್ಷಯ ನವೀನ ಎನ್ ಪ್ರಥಮ, ವಿವೇಕಾನಂದ ಕಾನೂನು ಕಾಲೇಜಿನ ಪ್ರಿಯಾ ಎಸ್ ದ್ವಿತೀಯ, ಹಾಗೂ ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ರದ್ಧಾ ತೃತೀಯ ಸ್ಥಾನ ಪಡೆದರು. ರಸಪ್ರಶ್ನೆ ಸ್ಪರ್ಧೆಯಲ್ಲಿ 24 ತಂಡಗಳು ಭಾಗವಹಿಸಿದ್ದು, ನ.22 ರಂದು ಫಲಿತಾಂಶ ಪ್ರಕಟಿಸಲಾಗುವುದು. ರಸಪ್ರಶ್ನೆಯಲ್ಲಿ ಆಯ್ಕೆಯಾದ 6 ತಂಡಗಳು ಮಂಗಳೂರು ಲಿಟ್ ಫೆಸ್ಟ್ ವೇದಿಕೆಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.