Arya – Book Discussion

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ಶಿವಕುಮಾರ್‌ ಜಿ.ವಿ., ಮಂಜುಳಾ ತೇಕಲ್‌ ಮತ್ತು ಕ್ಷಮಾ ನರಗುಂದ ಅವರು ಆರ್ಯ ಪುಸ್ತಕ ಕುರಿತು ಸಂವಾದ ನಡೆಸಿದರು.

ಕ್ಷಮಾ ಅವರು ಮಾತನಾಡಿ, ಆರ್ಯ – ಪುಸ್ತಕ 10 ಮಹಿಳೆಯರ ಆಂಥಾಲಜಿ. ಈ ಪುಸ್ತಕ ಬರೆದ ಉದ್ದೇಶ ಏನು ಎಂದು ಶಿವಕುಮಾರ್‌ ಅವರನ್ನು ಪ್ರಶ್ನಿಸಿದರು.

ಶಿವಕುಮಾರ್ ಅವರು ಮಾತನಾಡಿ, ನನ್ನ ಒಂದು ವೈಯಕ್ತಿಕ ಅನುಭವದಿಂದ ಆರಂಭಿಸುತ್ತೇನೆ. ನಾನು ಬೆಳೆದ ವಾತಾವರಣದಲ್ಲಿ ಮಹಿಳೆಯರು ಮಾತ್ರ ಡಾಮಿನೆಂಟ್ ಆಗಿದ್ರು. ನಾನು ಓದಿದ ಮೊದಲ ಪುಸ್ತಕ, ಅಮರ ಚಿತ್ರಕಥೆಯ ‘ಸತಿ ಸಾವಿತ್ರಿ’. ಅದರಲ್ಲಿ ಸತಿ ಸಾವಿತ್ರಿಯನ್ನು ಬಹಳ ವೈಭವೀಕರಿಸಲಾಗಿದೆ. ಆದ್ರೆ ಇಂಡಸ್ಟ್ರಿಯಲ್ಲಿ ಮಹಿಳೆಯನ್ನು ಅಷ್ಟೊಂದು ದೊಡ್ಡದಾಗಿ ಬರೆದ ಉದಾಹರಣೆಗಳು ಕಡಿಮೆ. ಮಹಾಭಾರತದಲ್ಲಿ ಅನೇಕ ಮಹಿಳೆಯರು ಬರುತ್ತಾರೆ. ಆದರೆ ನಾಲ್ಕು ಪುಟಗಳಲ್ಲಿ ಅವರ ವಿವರಣೆ ಮುಗಿದುಬಿಡುತ್ತದೆ. ಆದರೆ ಅವರ ಪಾತ್ರ, ವ್ಯಕ್ತಿತ್ವ ಅದಕ್ಕಿಂತ ಎಷ್ಟೋ ದೊಡ್ಡದು. ಹೀಗಾಗಿ ಅಂಥ ಸಾಧಕ ಮಹಿಳೆಯರ ಬಗೆಗೆ ಬರೆಯಬೇಕೆಂಬ ಉದ್ದೇಶದಿಂದ ಈ ಪುಸ್ತಕ ತಂದಿದ್ದೇವೆ.

ಈ ಪುಸ್ತಕದ ಕಥೆಗಳು ಮೂಲಕ್ಕೆ ಹತ್ತಿರವಾಗಿವೆಯೇ? ಎಂಬ ಪ್ರಶ್ನೆಗೆ ಮಂಜುಳಾ ಅವರು, ಇದು ಮೂಲಕ್ಕೆ ಅಕ್ಷರಶಃ ಹತ್ತಿರವಾಗಿದೆ. ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ. ದಮಯಂತಿಯ ಕಥೆಯಲ್ಲಿ ಮಾತ್ರ ಒಂದು ಕಡೆ, ದಮಯಂತಿಯ ಅಂತರಾಳದ ಮಾತುಗಳನ್ನು ಹೀಗಿದ್ದಿರಬಹುದು ಅಂತ ಕಲ್ಪಿಸಿಕೊಂಡು ಬರೆಯಲಾಗಿದೆ ಎಂದರು.

ಯಾಕೆ ಇದನ್ನು ಆಂಥಾಲಜಿಯಾಗಿ ಮಾಡಿದ್ರಿ? ಒಬ್ಬ ಆಥರ್ ಆಗಿ ನೀವ್ಯಾಕೆ ಇಲ್ಲಿ ನಿಮ್ಮದೇ ಪುಸ್ತಕವಾಗಿ ಬರೆದಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್,  ನಾವು ನಮ್ಮ ಕಥೆಯನ್ನು ಮತ್ತೆ-ಹೇಳುವ ಅಗತ್ಯ ಇದೆ. ಇವು ಈಗಾಗಲೇ ಇರುವ ಕಥೆಗಳು. ಆದರೆ ನಮ್ಮ ಜನರೇಷನ್‌ಗೆ ಸರಿಯಾದ ರೀತಿಯಲ್ಲಿ ತಲುಪಿಲ್ಲ. ನಾನು ಅದನ್ನು ನನ್ನದು ಅಂತ ಹೇಳಲು ಸಾಧ್ಯವಿಲ್ಲ. ನಾವು ಒಂದು ತಂಡವಾಗಿ ಇದನ್ನು ಮಾಡಿದ್ದೇವೆ. ಈ ಪುಸ್ತಕವನ್ನು ದೇಶಾದ್ಯಂತ ಹಂಚಲು ಬಯಸುತ್ತೇನೆ. ಒಂದು ರಾಜ್ಯದಿಂದ ಐದು ಜನ ಇದರಿಂದ ಪ್ರೇರಣೆ ಪಡೆದು ಇಂಥ ಮತ್ತಷ್ಟು ಪುಸ್ತಕಗಳನ್ನು ಬರೆದರೆ ನಮ್ಮ ಪ್ರಯತ್ನ ಸಾರ್ಥಕ ಎಂದರು.

ಯಾರಿಗೋಸ್ಕರ ಈ ಪುಸ್ತಕ ತಂದಿರಿ? ಎಂಬ ಪ್ರಶ್ನೆಗೆ ಶಿವಕುಮಾರ್ ಅವರು, ಮೊದಲನೆದಾಗಿ, ನಾನು ನನ್ನ ಮಗಳಿಗಾಗಿ ಈ ಪುಸ್ತಕ ತಂದೆ. ಇಂಥ ಉತ್ಕೃಷ್ಟ ವ್ಯಕ್ತಿತ್ವಗಳ ಪರಿಚಯ ಅವಳಿಗೆ ಆಗಬೇಕು ಅಂತ. ಅದನ್ನು ಬಿಟ್ರೆ, ಕನ್ನಡದಲ್ಲಿ ಬೇಕಾದಷ್ಟು ಕಥೆಗಳು ಪುರಾಣ ಪುಸ್ತಕಗಳು ಇವೆ. ಬೇರ ಭಾಷೆಗಳಲ್ಲೂ ಇವೆ. ಆದ್ರೆ ಇಂಗ್ಲಿಷ್ ನಲ್ಲಿ ಈ ರೀತಿ ನರೇಟಿವ್ಸ್‌ ಇಲ್ಲ. ಹದಗೆಡ್ತಾ ಇದೆ. ಹಾಗಾಗಿ ೨೧ ವಯಸ್ಸು ಮೇಲ್ಪಟ್ಟ ಯಾವುದೇ ಯುವಸಮುದಾಯಕ್ಕೆ ನಮ್ಮಲ್ಲಿನ ಈ ಗ್ರೇಟ್ ವ್ಯಕ್ತಿತ್ವಗಳ ಪರಿಚಯ ಆಗ್ಬೇಕು. ಅಂಥವರು ಇದನ್ನು ಓದಬೇಕು. ವೇದಕಾಲದಿಂದ ಆರಂಭಿಸುವುದಾದರೆ, ಸಾವಿರಾರು ಸಾಧಕ ಮಹಿಳೆಯರ ಯಶೋಗಾಥೆ ನಮ್ಮ ಮುಂದಿದೆ ಎಂದರು.

ಮಂಜುಳ ಅವರು ಮಾತನಾಡಿ, ಶಾಲೆಗಳಲ್ಲಿ ಈಗಾಗಲೇ ಇಸಮ್‌ಗಳನ್ನೆಲ್ಲ ತರುವುದಕ್ಕೆ ಪ್ರಾರಂಭಿಸಿದ್ದಾರೆ.  ಈಗಿನ ಮಕ್ಕಳು ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದಾರೆ. ಹಾಗಾಗಿ ನಿಜವಾದ ಕಥೆಯನ್ನು ತಿಳಿಸೋದಕ್ಕೆ ಇದನ್ನು ಬರೆದಿದ್ದೇವೆ ಎಂದರು.

ಒಬ್ಬ ಲೇಖಕಿಯಾಗಿ, ನೀವು ಬಹಳಷ್ಟು ಮೈಂಡ್-ವರ್ಕ್ ಮಾಡಿರ್ತೀರ. ನಿಮಗಿದು ಸ್ವಾಭಾವಿಕವಾಗಿ ಸಾಧ್ಯವಾಯಿತೇ ಅಥವಾ ಸವಾಲುಗಳನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜುಳಾ ಅವರು, ನನ್ನ ತಾಯಿ ಬಹಳ ಧೈರ್ಯಸ್ಥ ಮಹಿಳೆ. ಪ್ರೇರಣಾದಾಯಕಿ. ನನ್ನ ತಂದೆ ನನಗೆ ಕನ್ನಡ ಮೀಡಿಯಂನಲ್ಲೇ ಕಲಿಸಿದ್ರು.ಆ ಮೂಲಕ ನನಗೆ ಈ ಪುರಾಣಗಳ ಜ್ಞಾನ ಸಿಗಲು ಸಾಧ್ಯವಾಯ್ತು. ಹಲವು ಜನ “ನಿಮ್ಗ ಯಾಕೆ ಬೇಕು ಇದೆಲ್ಲ?” ಅಂತ ಅನೇಕರು ಕೇಳಿದ್ದಾರೆ. ಆದರೆ ನನಗೆ ಬರೆಯಲು ಯಾವುದೇ ಕಷ್ಟ ಆಗ್ಲಿಲ್ಲ. ಸಹಜವಾಗಿ ಬರೆದೆ ಎಂದರು.

ಈ ಪುಸ್ತಕಕ್ಕೆ ಕಥೆಗಳನ್ನು ಆಯ್ಕೆ ಮಾಡುವಾಗ ಏನಾದ್ರೂ ವ್ಯವಸ್ಥಿತ ಪ್ರಕ್ರಿಯೆ ಅನುಸರಿಸಿದ್ದೀರಾ ಎಂಬ ಪ್ರಶ್ನೆಗೆ ಶಿವಕುಮಾರ್ ಅವರು, ನಾನೊಂದು ಪ್ರೊಪೋಸಲ್ ಮಾಡಿದೆ. ಭಾರತೀಯ ಸಾಧಕ ಮಹಿಳೆಯರ ನೈಜ ಕಥೆಯನ್ನು ಹೇಳುವವರು ಬೇಕು ಅಂತ ಕೇಳಿದೆವು. 47 ಕಥೆಗಳು ಬಂದವು. ಅವುಗಳಲ್ಲಿ ಅತ್ಯುತ್ಕೃಷ್ಟವಾದದ್ದನ್ನು ಕೆಲವನ್ನು ಹಾಗೆಯೇ ಸ್ವೀಕರಿಸಿದೆವು. ಕೆಲವನ್ನು ಮತ್ತಷ್ಟು ಚೆನ್ನಾಗಿ ಬರುವಂತೆ ಮಾಡಿ ತೆಗೆದುಕೊಂಡೆವು ಎಂದರು.

ಸ್ಥಳೀಯ ಭಾಷೆಯಲ್ಲಿ ಬರೆದಿದ್ರೆ ಇದೇ ರೀತಿಯ ಕೇರ್ ತಗೊಳ್ಬೇಕಾಗಿತ್ತಾ? ಎಂಬ ಪ್ರಶ್ನೆಗೆ  ಶಿವಕುಮಾರ್ ಅವರು, ಇಂಗ್ಲಿಷಿನಲ್ಲಿ ಬರೆಯುವುದಕ್ಕೂ ಕನ್ನಡದಲ್ಲಿ ಬರೆಯುವುದಕ್ಕೂ ಬಹಳ ವ್ಯತ್ಯಾಸಗಳಿವೆ. ಆ ಧ್ವನಿಯನ್ನು ಇಂಗ್ಲಿಷ್‌ನಲ್ಲಿ ತರುವುದು ಬಹಳ ಕಷ್ಟ. ಪದ ಪ್ರಯೋಗಗಳನ್ನು ಇಂಗ್ಲಿಷ್‌ನಲ್ಲಿ  ಮಾಡುವುದು ಬಹಳ ಸವಾಲಿನ ಕೆಲಸವಾಗಿತ್ತು. ನಾವು ಈ ಮಹಿಳೆಯರ ಎದುರು ನಮ್ಮ ತಲೆಬಾಗಿ ಈ ನರೇಟಿವ್‌ಗಳನ್ನ ಬರೆದಿದ್ದೇವೆ. ಆ ಥಾಟ್‌ಪ್ರಾಸೆಸ್ ನಮಗೆ ಸಹಾಯ ಮಾಡಿತು.

ವ್ಯಾಸಭಾರತ ಮತ್ತು ಬೇರೆ ಬೇರೆ ವರ್ಶನ್‌ಗಳು ಬೇರೆ ಬೇರೆ ರೀತಿ ಇವೆ. ಒಬ್ಬ ಕ್ಯುರೇಟರ್ ಆಗಿ, ಕಾಳಿದಾಸ ಯಾಕೆ ಶಾಕುಂತಲೆಯ ಕ್ಯಾರೆಕ್ಟರನ್ನು ಬದಲಾಯಿಸಿದ ಅಂತ ನಿಮಗನಿಸುತ್ತೆ ಎಂಬ ಪ್ರಶ್ನೆಗೆ ನಮ್ಮ ಇತಿಹಾಸ ಪುರಾಣಗಳಲ್ಲಿ ಹಾಗಿಲ್ಲ. ಧರ್ಮಾರ್ಥ ಕಾಮ ಮೋಕ್ಷ – ಧರ್ಮ-ಅರ್ಥಗಳ ನಡುವೆ ಏನು ಇರುತ್ತೆ? ಅರ್ಥ-ಕಾಮಗಳ ನಡುವೆ ಏನಿರುತ್ತೆ? ಮಹಾಭಾರತಕ್ಕೆ ಒಂದು ಡಿಸೈನ್ ಇದೆ. ಅದರೊಳಗೆ ಈ ಎಲ್ಲಾ ಕಥೆಗಳು ಬರುತ್ತವೆ. ಕ್ಲಾಸಿಕಲ್ ಕಾಲಘಟ್ಟದಲ್ಲಿ ಯಾವುದಾದರೊಂದು ವ್ಯಕ್ತಿಯನ್ನು ವೈಭವೀಕರಿಸಿ ಬರೆದಿದ್ದಾರೆ. ಕಾಳಿದಾಸ, ಶಾಕುಂತಲೆ ಬರೆದದ್ದಕ್ಕೂ ಇತರ ಕಾವ್ಯಗಳಿಗೂ ಪರಸ್ಪರ ಹೋಲಿಕೆಯೇ ಇಲ್ಲ. ಅವು ಪೂರ್ತಿ ವಿಭಿನ್ನವಾಗಿವೆ. ಕಾವ್ಯವನ್ನು ನಾವು ನಮ್ಮ ಕಾವ್ಯದ ಪರಿಕರಗಳೊಂದಿಗೆ ನೋಡಬೇಕು. ಕಾಲ-ದೇಶ-ವರ್ತಮಾನ ಮರೆತು, ಯಾವುದೋ ಗೊತ್ತಿಲ್ಲದ ವ್ಯಕ್ತಿಗೆ ಈ ಪುಸ್ತಕ ಕೊಟ್ರೆ, ಅವನು ಇದನ್ನು ಖುಷಿಪಟ್ಟು ಸ್ವೀಕರಿಸಬೇಕು. ಅದು ಇಲ್ಲಿನ ಮುಖ್ಯ ಉದ್ದೇಶ ಎಂದರು.