ದಕ್ಕಲ ಜಾಂಬವ ಪುರಾಣ

ಮಂಗಳೂರು ಲಿಟ್‌ಫೆಸ್ಟ್‌ 2023 ರ ಹರಟೆ ಕಟ್ಟೆಯಲ್ಲಿ ದಕ್ಕಲ ಮುನಿಸ್ವಾಮಿ, ಘನಶ್ಯಾಮ ಮತ್ತು ಸತ್ಯಭೋದ ಜೋಶಿ ಅವರು ದಕ್ಕಲ ಜಾಂಬವ ಪುರಾಣ ಕುರಿತು ಸಂವಾದ ನಡೆಸಿದರು.

ದಕ್ಕಲ ಮುನಿಸ್ವಾಮಿ ಅವರು ಕಿನ್ನರಿ ವಾದ್ಯ ನುಡಿಸುವುದರೊಂದಿಗೆ ಶುಭಾರಂಭ ಮಾಡಿದರು. ಬಳಿಕ ಸಾಂಪ್ರದಾಯಿಕ ರೀತಿಯಲ್ಲಿ ಎಲೆ ಅಡಿಕೆ ವೀಳ್ಯ ಸ್ವೀಕರಿಸಿ, ಎತ್ತುವಳಿ ಸ್ವೀಕರಿಸಿ ಆಶೀರ್ವಾದ ಮಾಡಿದರು.

ಘನಶ್ಯಾಮ ಅವರು ದಕ್ಕಲ ಜಾಂಬವ ಪುರಾಣವು, 18  ಯುಗದಿಂದ ಬಂದ ಕಥೆ. ಸರಳವಾದ ಕಾವ್ಯ. ಕಂದೆಲುಗು ಭಾಷೆಯಲ್ಲಿ ಇರುವಂಥ ಕಾವ್ಯ. ಇವರದ್ದು ಮುನಿಪರಂಪರೆಯ ಕುಟುಂಬ. ಮೂಲಮುನಿ ಜಾಂಬವ ಮುನಿ. ಸ್ವಂತ ಮನೆ ಇಲ್ಲದಿದ್ರೂ ದೇಶ ನಮ್ಮದು ಎಂಬ ಭಾವ. ಎಲ್ಲವೂ ನನ್ನದು ಎಲ್ಲವೂ ನಮ್ಮದು. ಈ ರೀತಿಯ ಜಾನಪದ ಪ್ರಾಕಾರಗಳು ಅಳಿವಿನಂಚಿನಲ್ಲಿವೆ. ಅದನ್ನು ದಾಖಲೀಕರಿಸುವ ಮುಂದುವರೆಸುವ ಪ್ರಯತ್ನಗಳು ಆಗಬೇಕು. ನಮ್ಮ ಭೂಮಿ ಹೇಗೆ ಹುಟ್ಟಿತು ಎಂಬ ಬಗ್ಗೆ ಅವರದ್ದೇ ಆದ ರೀತಿಯ ಪುರಾಣ ಕಥೆ ಇದೆ ಎಂದರು.

ದಕ್ಕಲ ಮುನಿಸ್ವಾಮಿ ಅವರು ಮಾತನಾಡಿ, ಸಮುದ್ರದಲ್ಲಿ ಹುಟ್ಟಿದವ ಜಾಂಬವಂತ. ಗಂಗಾದೇವಿ ತಾವರೆ ಎಲೆಯ ಮೇಲೆ ತಪಸ್ಸು ಮಾಡಿದ್ದ. ಆಗ ಬಂದ ಬೆವರನ್ನು ಸಮುದ್ರದ ನೀರಿಗೆ ಹಾಕಿದಾಗ ಅದೊಂದು ಕೋಳಿಮೊಟ್ಟೆಯ ಆಕಾರವಾಯ್ತು. ಆ ಮೊಟ್ಟೆಯೊಳಗೆ 7 ಮಕ್ಕಳು ಹುಟ್ಟುತ್ತಾರೆ. ೭ ಜನ ಗಂಡುಮಕ್ಕಳು. ಆಮೇಲೆ ಕೊಳಿಯೊಳಗೆ ಹೆಣ್ಣು ಗೊಂಬೆಯನ್ನು ಮಾಡ್ತಾನೆ. ಅವಳೇ ಆದಿಶಕ್ತಿ. ಹೀಗೆ ಜಾಂಬವಂತನ ಕಥೆ ಮುಂದುವರಿದು, ಸೂರ್ಯ ಚಂದ್ರರು, ಭೂಮಿ, ಆಕಾಶಗಳೆಲ್ಲ ಹುಟ್ಟಿದ ಕಥೆ, ಕುಲಗಳು, ಜಾತಿಗಳು ಹುಟ್ಟಿದ ಕಥೆ ಹೇಳಿದರು.

ಸಭಿಕರ ಕೋರಿಕೆಯ ಮೇರೆಗೆ, ತಾವೇ ಸ್ವತಃ ಸೋರೇಬುರುಡೆಯಿಂದ ತಯಾರಿಸಿದ ಕಿನ್ನರಿಯನ್ನು ಮತ್ತೊಮ್ಮೆ ನುಡಿಸಿದರು.

ಸತ್ಯಭೋದ ಜೋಶಿ ಅವರು ಮಾತನಾಡಿ, ನಿಜವಾದ ನೆಲದ ಮಕ್ಕಳು ಜಗತ್ತಿಗೆ ಗೊತ್ತಾಗಲಿ ಎಂಬ ಉದ್ದೇಶದಿಂದ ದಕ್ಕಲ ಮುನಿಸ್ವಾಮಿ ಅವರನ್ನು ಈ ಮೂಲಕ ಪರಿಚಯಿಸಲಾಗಿದೆ. ಎಪ್ಪತ್ತು ವರ್ಷದಿಂದ ಅವರು ಈ ಕಥೆ ಹೇಳುತ್ತಾ ಬಂದಿದ್ದಾರೆ. ಅವರ ಬದುಕು ಸುಂದರವಾಗುವ ಕಡೆಗೆ ನಾವೆಲ್ಲ ಪ್ರಯತ್ನ ಮಾಡೋಣ ಎಂದರು.

ಕೊನೆಯಲ್ಲಿ ದಕ್ಕಲ ಮುನಿಸ್ವಾಮಿ ಅವರು ಅವರ ಶೈಲಿಯ ಜನಪದ ಹಾಡನ್ನು ಹಾಡಿ, ಆಶೀರ್ವಾದ ಗಾಯನದ ಮೂಲಕ ಕಾರ್ಯಕ್ರಮ ಸಂಪನ್ನಗೊಳಿಸಿದರು.