ಫೆಬ್ರವರಿ 19 ರಂದು ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಅಜಿತ್ ಹನಮಕ್ಕನವರ್ ಮತ್ತು ರಾಧಾಕೃಷ್ಣ ಹೊಳ್ಳ ಅವರು ಮಾಧ್ಯಮ ಮತ್ತು ಅಖ್ಯಾಯಿಕೆ : ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಎಂಬ ಅಸ್ಮಿತೆಗಳು; ಒಂದು ವಿವೇಚನೆ ಕುರಿತು ಸಂವಾದ ನಡೆಸಿದರು.
ಅಜಿತ್ ಹನಮಕ್ಕನವರ್ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳು ಬಂದ ಬಳಿಕ ಮುಖ್ಯವಾಹಿನಿಯ ಮಾಧ್ಯಮಗಳು ನರೇಟಿವ್ ಸೆಟ್ ಮಾಡಲು ಸಾಧ್ಯವಾಗುವುದಿಲ್ಲ. ಮಾಧ್ಯಮಗಳು ಹೇಳಿದ್ದನ್ನು ಜನ ತೆಗೆದುಕೊಳ್ಳಬೇಕು ಎಂದಿಲ್ಲ, ಅವರಿಗೆ ಮಾಧ್ಯಮ ಹೇಳಿದ್ದನ್ನು ಪರಾಮರ್ಶಿಸುವ ಬುದ್ಧಿಶಕ್ತಿ ಇರುತ್ತದೆ, ಸತ್ಯ ಸುಳ್ಳನ್ನು ತಿಳಿಯಲು ಹಲವು ಮಾರ್ಗಗಳು ಇರುತ್ತವೆ. ಒಬ್ಬ ಕೆಟ್ಟ ಮನುಷ್ಯನನ್ನು ಮಾಧ್ಯಮಗಳು ಎಷ್ಟೇ ಪಾಸಿಟಿವ್ ಆಗಿ ತೋರಿಸಿದರೂ ಜನ ಒಪ್ಪುವುದಿಲ್ಲ, ಒಳ್ಳೆಯವನನ್ನು ಕೆಟ್ಟವನಾಗಿ ತೋರಿಸಲೂ ಸಾಧ್ಯವಾಗುವುದಿಲ್ಲ. ಮಾಧ್ಯಮಗಳು ಅದ್ಧೂರಿಯಾಗಿದೆ ಎಂದು ತೋರಿಸಿದ ತಕ್ಷಣ ಸಿನಿಮಾ ಹಿಟ್ ಆಗುವುದಿಲ್ಲ, ಮಾಧ್ಯಮಗಳು ತೋರಿಸದ ಸಿನಿಮಾಗಳು ಸೋಲುವುದಿಲ್ಲ. ಮಾಧ್ಯಮಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಡಿಬೆಟ್‌ಗಳಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಬೇರೆ ಬೇರೆ ಅನಿಸಿಕೆಗಳು ನಮಗೆ ಸಿಗುತ್ತದೆ ಎಂದರು.
ಪ್ರತಿಯೊಂದು ನರೇಟಿವ್, ಪ್ರತಿಯೊಂದು ಥಿಯರಿಗೆ ಕೊಂಡುಕೊಳ್ಳುವವರು ಇರುತ್ತಾರೆ. ನರೇಟಿವ್ ಸ್ಥಾಪನೆಯಿಂದ ಒಂದು ಚಿಂತನೆ ಬೆಳೆಯುತ್ತದೆ ಎಂಬುದು ನಿಜ. ಕೌಂಟರ್ ನರೇಟಿವ್ ಇಲ್ಲದಾಗ ನರೇಟಿವ್ ಸೆಟ್ ಬಲಿಷ್ಠವಾಗುತ್ತದೆ. ಪ್ರತಿಯೊಂದು ವೃತ್ತಿಗೂ ಅಪಾಯ ಎಂಬುದು ಇರುತ್ತದೆ. ಪತ್ರಕರ್ತನಾದವನಿಗೆ ಎಲ್ಲವನ್ನೂ ಸಹಿಸಿಕೊಂಡು ಸಾಗುವುದು ಅಗತ್ಯವಾಗಿರುತ್ತದೆ. ನಾನು ಹೇಳಿದ್ದನ್ನು ಜನರು ಅವರ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುತ್ತಾರೆ. ಸತ್ಯ ತಿಳಿಯಲು ಬಯಸುವವರು ಸತ್ಯ ಕಂಡುಕೊಳ್ಳುತ್ತಾರೆ. ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ ಎಂಬುದು ಇರಬೇಕು. ಕನ್ನಡ ನ್ಯೂಸ್ ಚಾನೆಲ್‌ಗಳು ಆರಂಭವಾಗಿ 18 ವರ್ಷಗಳಾಗಿದೆ. ನಿಧಾನಕ್ಕೆ ಪ್ರಬುದ್ಧತೆ ಬರುತ್ತಿದೆ. ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ಕೆಲವೊಂದನ್ನು ಮಾತ್ರ ಎಕ್ಸ್‌ಪೋಸ್ ಮಾಡುವಂತದ್ದು ನಡೀತಾ ಇದೆ. ಪತ್ರಿಕೋದ್ಯಮದಲ್ಲಿ ಉದ್ಯಮ ಎಂಬ ಶಬ್ದ ಕೂಡ ಇರುತ್ತದೆ. ಟಿಆರ್‌ಪಿ ಎಂಬುದು ಇಲ್ಲು ಅನಿವಾರ್ಯ. ಸ್ಪರ್ಧೆಯಲ್ಲೇ ಇರಲೇಬೇಕಾಗುತ್ತದೆ. ಪತ್ರಿಕೋದ್ಯಮದ ಘನತೆ ಎತ್ತಿಹಿಡಿಯುವುದು ಅತ್ಯಂತ ಮುಖ್ಯ. ತುರ್ತು ಕ್ರಾಂತಿ ಎಂಬುದು ಭ್ರಮೆ, ಶಸ್ತ್ರ ಹಿಡಿದು ಬದಲಾವಣೆ ಸಾಧ್ಯವಿಲ್ಲ. ಬದಲಾವಣೆ ಬೇರಿನಿಂದ ಆರಂಭವಾಗಬೇಕು, ಅದಕ್ಕೆ ಹಲವಾರು ತಲೆಮಾರುಗಳು ಬೇಕಾಗುತ್ತದೆ ಎಂದರು.