ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಶಿವ್ ಅರೂರ್ ಮತ್ತು ಕ್ಯಾಪ್ಟನ್ ಬೃಜೇಶ್ ಚೌಟ ಅವರು Stories of Warriors (India’s Most Fearless) ಕುರಿತು ಸಂವಾದ ನಡೆಸಿದರು.
ಶಿವ್ ಅರೂರ್ ಅವರು, ನಾನು ಸುಮಾರು 18 ವರ್ಷಗಳಿಂದ ಮಿಲಿಟರಿ ವ್ಯವಹಾರಗಳ ಬಗ್ಗೆ ವರದಿ ಮಾಡುತ್ತಾ ಬಂದಿದ್ದೇನೆ. ನಿರಂತರವಾಗಿ ಯೋಧರನ್ನು ಭೇಟಿಯಾಗುತ್ತಾ ಬಂದಿದ್ದೇನೆ, ಪ್ರತಿಯೊಬ್ಬ ಯೋಧನ ಬಳಿಯೂ ಹೇಳಲು ಒಂದು ಅದ್ಭುತವಾದ ಕಥೆಯಿರುತ್ತದೆ. ಕೇವಲ ಸಾಹಸದ ಕಥೆ ಮಾತ್ರವಲ್ಲ ಆತನ ಬಳಿ ರಕ್ತದ ಕಥೆ, ಕುಟುಂಬದ ಕಥೆ, ಮಕ್ಕಳ ಕಥೆಯೂ ಇರುತ್ತದೆ. ಮನರಂಜನೆ ನೀಡುವ ಕಥೆಯೂ ಆತನ ಬಳಿ ಇರುತ್ತದೆ. ನಾವು ವರ್ಷಕ್ಕೆ ಎರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಕ್ಕೆ ಮಾತ್ರ ಯೋಧರನ್ನು ನೆನಪಿಸಿಕೊಳ್ಳುತ್ತೇವೆ. ಶೌರ್ಯ ಚಕ್ರದಂತಹ ಪ್ರಶಸ್ತಿಗಳು ಬಂದಾಗ ಅವರ ಸಾಧನೆ ಬಗ್ಗೆ ಒಂದು ಪ್ಯಾರಾದ ಮಾಹಿತಿ ನೀಡಲಾಗುತ್ತದೆ. ಕೇವಲ ಒಂದು ಪ್ಯಾರದಲ್ಲಿ ಆತನ ಸಾಧನೆ ವಿವರಿಸುವುದು ಯೋಧನಿಗೆ ಮಾಡುವ ಅಪಮಾನ ಎಂದೇ ನಾನು ಭಾವಿಸಿದ್ದೇನೆ. ಯೋಧರ ಸಂಪೂರ್ಣ ಕಥೆ ಕೇಳುವ ಹಸಿವು ನನಗಿತ್ತು. ಅದುವೇ ಪುಸ್ತಕ ಬರೆಯಲು ನನ್ನನ್ನು ಪ್ರೇರೇಪಿಸಿತು. ಅಪಾಯದ ನಡುವೆಯೂ ತೇಜಸ್ ಯುದ್ಧ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ 24 ವರ್ಷದ ಯೋಧನ ಸಾಹಸಗಾಥೆ ನನ್ನನ್ನು ಪುಸ್ತಕ ಬರೆಯಲು ಮೊದಲ ಹೆಜ್ಜೆ ಇಡುವಂತೆ ಮಾಡಿತು. ಆತನ ಬಗ್ಗೆ ಬ್ಲಾಗ್ ಬರೆದು ಹಾಕಿದಾಗ ಜನ ಅದನ್ನು ಅತ್ಯಂತ ಉತ್ಸಾಹದಿಂದ ಸ್ವೀಕರಿಸಿದರು. ಆಗ ಜನರಿಗೆ ಯೋಧನ ಬಗ್ಗೆ ಒಂದು ಪ್ಯಾರಾ ಮಾಹಿತಿಯಲ್ಲ 500 ಪುಟಗಳ ಮಾಹಿತಿ ಬೇಕಾಗಿದೆ ಎಂಬುದು ತಿಳಿಯಿತು ಎಂದರು.
ಗಲ್ವಾನ್ ಘರ್ಷಣೆ ಚೀನಾಗೆ ಒಂದು ಪಾಠವೇ ಹೊರತು ಭಾರತಕ್ಕೆ ಪಾಠವಲ್ಲ. ಈ ಯುದ್ಧವನ್ನು ಚೀನಾ ಪೂರ್ವ ಯೋಜಿತವಾಗಿ ನಡೆಸಿತೇ ಹೊರತು ಭಾರತ ಇದಕ್ಕೆ ಸಿದ್ಧವಾಗಿರಲಿಲ್ಲ. ಆದರೆ ನಮ್ಮ ಯೋಧರು ಚೀನಾದ ಪ್ರದೇಶದೊಳಗೆ ಹೋಗಿ ಅವರನ್ನು ಹೊಡೆದಿದ್ದಾರೆ. ಭಾರತದ ಕಮಾಂಡರ್ ಮೇಲೆ ಚೀನಿಯರು ದಾಳಿ ಮಾಡಿದ್ದೇ ಭಾರತೀಯ ಯೋಧರನ್ನು ಆಕ್ರೋಶಿತರನ್ನಾಗಿ ಮಾಡಿತು. ಇದರಿಂದ ಚೀನಾಗೆ ಸಾಕಷ್ಟು ಹಾನಿಯಾಯಿತು. ಅವರ ಅಪಾರ ಸಂಖ್ಯೆಯ ಯೋಧರು ಮೃತರಾದರು. ಭಾರತದ 20 ಯೋಧರ ಸಾವು ನಮಗೆ ಸಹಿಸಲಸಾಧ್ಯವಾದ ಘಟನೆ. ಹೀಗಾಗಿ ಗಲ್ವಾನ್ ಅಲ್ಲಿ ನಾವು ಗೆದ್ದೆವು ಎಂದು ಹೇಳಿಕೊಳ್ಳುವಂತಿಲ್ಲ. ಆದರೆ ಈ ಘರ್ಷಣೆ ಚೀನಾಗೆ ದೊಡ್ಡ ಪಾಠವೇ ಆಗಿದೆ.
ಪ್ರಸ್ತುತ ನಮ್ಮ ದೇಶ ಸಾಕಷ್ಟು ಬದಲಾಗಿದೆ. ತಳಮಟ್ಟದಲ್ಲಿ ಯೋಧರು ದೇಶಕ್ಕಾಗಿ ಪ್ರಾಣವನ್ನೇ ನೀಡಲು ಸಿದ್ಧರಾಗಿದ್ದಾರೆ. ನಮ್ಮದು ಕರ್ಕಶವಾದ ಪ್ರಜಾಪ್ರಭುತ್ವ. ಇಲ್ಲಿ ಸಾಕಷ್ಟು ಗದ್ದಲಗಳಿವೆ. ಸೇನೆಯನ್ನು ಪ್ರಶ್ನೆ ಮಾಡುವುದರಲ್ಲಿ ತಪ್ಪಿಲ್ಲ. ಸಂಸತ್ತಿನಲ್ಲಿ ಅಥವಾ ಹೊರಗಡೆ ಸೇನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಆದರೆ ಸೇನೆ ನಡೆಸಿದ ಕಾರ್ಯಾಚರಣೆ ಬಗ್ಗೆ ಪುರಾವೆಗಳನ್ನು ಕೇಳುವ ಹಿಂದಿನ ಉದ್ದೇಶ ಏನು ಎಂಬುದು ಮುಖ್ಯ ಎಂದರು.