ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಪಟ್ಲ ಸತೀಶ್ ಶೆಟ್ಟಿ, ಸಿಎ ವೃಂದಾ ಕೊನ್ನಾರ್ ಮತ್ತು ಪುರುಷೋತ್ತಮ ಭಂಡಾರಿ ಅವರು ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ ಕುರಿತು ಸಂವಾದ ನಡೆಸಿದರು.
ಪುರುಷೋತ್ತಮ ಭಂಡಾರಿ ಅವರು ಸಿಂಹವಾಹಿನಿಯಾದ, ನಗುಮೊಗದ ತಾಯಿ ಭಾರತಾಂಬೆಗೆ ಸಾಷ್ಟಾಂಗ ಪ್ರಣಾಮಗಳು. ಕರಾವಳಿ ಕರ್ನಾಟಕದ ಧೀಮಂತ ಕಲೆ ಯಕ್ಷಗಾನ. ನಮ್ಮ ಹಿರಿಯರಿಂದ ಬಂದ ಈ ಕಲೆ, ಒಂದು ಸಂದರ್ಭದಲ್ಲಿ ಯುವ ಜನತೆ ಅದರಿಂದ ದೂರ ಸರಿಯಲು ಪ್ರಾರಂಭಿಸಿದ್ದರು. ಪಟ್ಲ ಸತೀಶ್ ಶೆಟ್ಟಿ ಹಾಗೂ ವೃಂದಾರವರಂಥ ಕಲಾವಿದರು ಅದನ್ನು ಮತ್ತೆ ಪ್ರವರ್ಧಮಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಭಾಗವತರು ಅಂದ್ರೆ ನಿರ್ದೇಶಕರ ಸ್ಥಾನ ಇತ್ತು. ಈಗಿನ ಕಾಲದಲ್ಲಿ ಕಲಾವಿದರ ಮನಸ್ಥಿತಿ ಹೇಗಿದೆ ಎಂದು ಸಂವಾದವನ್ನು ಪ್ರಾರಂಭಿಸಿದರು.
ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ, ಭಾಗವತ ಎನ್ನುವ ನಾಲ್ಕಕ್ಷರಕ್ಕೆ ಶ್ರೇಷ್ಠ ಉದಾಹರಣೆಯಾಗಿದ್ದ ಬಲಿಪ ನಾರಾಯಣ ಭಾಗವತರಿಗೆ ಮೊತ್ತ ಮೊದಲಾಗಿ ನಮನಗಳು. ಬೇರೆ ಯಾವುದೇ ಕಲಾಪ್ರಕಾರದಲ್ಲಿ ಭಾಗವತ ಎಂಬ ಕಲ್ಪನೆಯೇ ಇಲ್ಲ. ನಮ್ಮ ಪುರಾಣವನ್ನು ಮನೆಮನೆಗೆ ತಲುಪಿಸಿದ ಹಿರಿಮೆ ಯಕ್ಷಗಾನದ್ದು. ಭಾಗವತ ಅಂದ್ರೆ ಕಥೆಯ ಸೂತ್ರಧಾರಿ. ಕಥೆಯನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಅವನ ಪಾತ್ರ ದೊಡ್ದದು ಎಂದರು.
ಒಂದು ಕಾಲದಲ್ಲಿ ರಾತ್ರಿ ಇಡೀ ಇದ್ದದ್ದು.. ಈಗ ಕಾಲಮಿತಿ ಆಗಿದೆ. ಈ ಬಗ್ಗೆ ಅನೇಕ ವಿಮರ್ಶೆಗಳು ನಡೆದಿವೆ. ನಿಮ್ಮ ಅಭಿಪ್ರಾಯ ಏನು? ಎಂದು ಪುರುಷೋತ್ತಮ ಭಂಡಾರಿ ಅವರು ಕೇಳಿದ ಪ್ರಶ್ನೆಗೆ ಪಟ್ಲ ಸತೀಶ್ ಶೆಟ್ಟಿ ಅವರು ಉತ್ತರಿಸುತ್ತಾ, ವಿಮರ್ಶೆಗಳು ಬೇಕೇಬೇಕು. ಮೊದಲು4-5 ದಿನಗಳ ಕಾಲ ನಡೆಯುತ್ತಿತ್ತು. ಈಗ ರಾತ್ರಿಯಿಡೀ ಮಾಡಿದ್ರೂ ನೋಡುವವರ ಸಂಖ್ಯೆ ಕಡಿಮೆ. ಪ್ರೇಕ್ಷಕರ ಅಭಿರುಚಿಯೂ ಬೇರೆಬೇರೆ ಇರುತ್ತದೆ. ಅದಕ್ಕನುಗುಣವಾಗಿ ಬದಲಾವಣೆ ಆಗಿದೆ ಎಂದರು
ಈಗಿನ ಕಾಲಘಟ್ಟದಲ್ಲಿ ಕಲಾವಿದರ ಹಾಗೂ ಪ್ರೇಕ್ಷಕರ ಮನಸ್ಥಿತಿ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಯಕ್ಷಗಾನ ಇಂದು ಕೇವಲ ಕಲೆಯಾಗಿ ಉಳಿದಿಲ್ಲ. ಒಂದು ಧಾರ್ಮಿಕ ಆಚರಣೆಯಾಗಿದೆ. ಮಾಧ್ಯಮಗಳಲ್ಲಿ ಕನ್ನಡ ಕನ್ನಡ ಅಂತ ಹೇಳ್ತಾರೆ. ಆದ್ರೆ ಕನ್ನಡವನ್ನು ಸುಸ್ಪಷ್ಟವಾಗಿ ಉಳಿಸಿಕೊಂಡು ಬಂದಿರುವ ಏಕೈಕ ಕಲೆ ಯಕ್ಷಗಾನ. ಯಾವುದೇ ಪಾತ್ರಗಳನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವ ರೀತಿ ತೋರಿಸಿಕೊಡುವ ಶಕ್ತಿ ಯಕ್ಷಗಾನಕ್ಕಿದೆ ಎಂದರು.
ಸಿಎ ಪಾಸ್ ಮಾಡುವುದು ಅಂದರೆ ತುಂಬಾ ಕಠಿಣವಾದ ಸವಾಲು. ಅಂಥ ಸಂದರ್ಭದಲ್ಲಿ ನೀವು ಯಕ್ಷಗಾನದತ್ತ ಹೇಗೆ ಬಂದಿರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎ ವೃಂದಾ ಕೊನ್ನಾರ್ ಅವರು, ನನ್ನ ಜೀವನದಲ್ಲಿ ಯಕ್ಷಗಾನ ಮೊದಲೇ ಇತ್ತು. ಸಿಎ ಆಮೇಲೆ ಬಂದದ್ದು. ಬಾಲ್ಯದಲ್ಲಿ ಅಮ್ಮನ ಮಡಿಲಲ್ಲಿ ಯಕ್ಷಗಾನ ನೋಡುತ್ತಾ ಬೆಳೆದೆ. ಚೆಂಡೆ ಮದ್ದಲೆಗಳ ನಾದದೊಂದಿಗೆ ಬೆಳೆದೆ. ಯಾವುದೇ ಕಲೆಯಾಗಲಿ ಅದು ನಿಮ್ಮ ವಿದ್ಯಾಭ್ಯಾಸಕ್ಕೆ ಎಂದಿಗೂ ತೊಡಕುಂಟುಮಾಡುವುದಿಲ್ಲ. ಅದು ಪೂರಕವೇ ಆಗುತ್ತದೆ ಎಂದರು.
ನಿಮ್ಮ ದೃಷ್ಟಿಯಲ್ಲಿ ಯಕ್ಷಗಾನಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ವೃಂದಾ ಅವರು, ಅನೇಕ ಹಿರಿಯರು ಇದನ್ನು ಬೆಳೆಸಿಕೊಂಡು ಬಂದಿದ್ದಾರೆ. ನಾನು 16 ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ಮೊದಲಿದ್ದ ಮನಸ್ಥಿತಿ ಈಗಿಲ್ಲ. ಈಗ ವಿಸ್ತಾರವಾಗಿದೆ. ಜನ ನಮ್ಮನ್ನು ಸ್ವೀಕರಿಸುತ್ತಾ ಇದ್ದಾರೆ ಎಂದರು.
ಯಕ್ಷಗಾನ ಕಲಾವಿದರೆಂದರೆ ಒಂದು ರಾತ್ರಿ ಬೆಳಗಾಗುವುದರೊಳಗೆ ರಂಗಸ್ಥಳವನ್ನು ಸ್ವರ್ಗವನ್ನಾಗಿಸುವವರು. ಈಗ ಟಿ.ವಿ ಯಲ್ಲಿ ನೋಡ್ತಾರೆ . ಇದರಿಂದ ಯಕ್ಷಗಾನದ ಮೇಲೆ ಪರಿಣಾಮ ಇದೆಯ? ಎಂಬುದರ ಕುರಿತು ಪಟ್ಲ ಸತೀಶ್ ಶೆಟ್ಟಿ ಅವರು, ಪರಿಣಾಮ ಇದೆ. ಯಕ್ಷಗಾನ ಕಲಾವಿದರ ಜೀವನದ ಮೇಲೆ ಪರಿಣಾಮ ಬೀರ್ತದೆ. ಯಕ್ಷಗಾನ ಕಲಾವಿದರು ಸಂಜೆಯಿಂದ ಮರುದಿನ ಬೆಳಗಿನ ವರೆಗೆ ದುಡಿಯುತ್ತಾರೆ. ಆದರೆ ಅವರಿಗೆ ಸಿಗುವ ಸಂಭಾವನೆ ಅತ್ಯಲ್ಪ. ಬೇರೆ ಉದ್ಯೋಗಕ್ಕೆ ಹೋಗಲು ಅವರಿಗೆ ಕಷ್ಟ. ಈಗ ಟಿ.ವಿಯಲ್ಲಿ ಅನೇಕ ಮನೋರಂಜನೆಗಳು ಸಿಗುವ ಕಾರಣ, ಒಂದು ಪ್ರಸಂಗಕ್ಕೆ ಸಮಯ ಕೊಡುವ ಸಾವಧಾನತೆ ಯಾರಿಗೂ ಇಲ್ಲ ಎಂದರು.
ಅನೇಕ ಉನ್ನತ ವ್ಯಾಸಂಗ ಮಾಡಿದವರೆಲ್ಲ ಈಗ ಯಕ್ಷಗಾನದತ್ತ ಬರುತ್ತಿದ್ದಾರೆ. ಇದು ಮುಂದಿನ ಪೀಳಿಗೆಗೆ ಮುಂದುವರಿದೀತೆ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸಿಎ ವೃಂದಾ ಕೊನ್ನಾರ್ ಅವರು ನಮ್ಮ ಅಭಿವ್ಯಕ್ತಿಗಳನ್ನು ಉತ್ತಮವಾದ ರೀತಿಯಲ್ಲಿ ಪ್ರಸ್ತುತಪಡಿಸಲು ಅವಕಾಶವಿರುವ ಕಲೆ ಯಕ್ಷಗಾನ. ಈಗ ಮಕ್ಕಳು, ಯುವಜನರು ಈ ಕಲೆಯತ್ತ ಹೊರಳ್ತಾ ಇದ್ದಾರೆ. ಯಕ್ಷಗಾನ ಕಲಿಕೆಗೆ ಒಂದು ಶೈಕ್ಷಣಿಕೆ ಚೌಕಟ್ಟು ಮಾಡಿದ್ರೆ ಇನ್ನೂ ಉತ್ತಮ ಎಂದರು.
ಯಕ್ಷಗಾನವನ್ನು ರಿಯಾಲಿಟಿ ಶೋಗೆ ತರುವಾಗ ಏನಾದ್ರೂ ನಿಯಮಗಳಿವೆಯ? ಎಂಬ ಸಭಿಕರ ಪ್ರಶ್ನೆಗೆ ಉತ್ತರಿದ ಪಟ್ಲ ಅವರು, ಯಕ್ಷಗಾನಕ್ಕೆ ಒಂದು ಚೌಕಟ್ಟು ಇದೆ. ಅದನ್ನು ಮೀರಿ ಹೋದ್ರೆ ಅಪಮಾನ ಮಾದಿದ ಹಾಗೆ. ನಮ್ಮ ಧಾರ್ಮಿಕ ನಂಬಿಕೆಗೆ ತೊಡಕಾಗ್ತದೆ. ಆ ರೀತಿ ಬಿಂಬಿಸಬಾರದು ಎಂಬುದು ನನ್ನ ಅಭಿಪ್ರಾಯ ಎಂದರು.
ಈ ನಿಯಮಗಳನ್ನು ಪಾಲಿಸುವುದಕ್ಕೆ ಯಾರಾದ್ರೂ ಅಥಾರಿಟಿ ಇದ್ದಾರಾ ? ಗಮನ ಕೊಡುವವರು ಯಾರು? ಎಂಬ ಪ್ರಶ್ನೆಗೆ – ಇಲ್ಲ ಹಾಗೆ ಮಾಡಿಲ್ಲ. ಎಲ್ಲರೂ ಕೈಜೋಡಿಸಿ ಮಾಡಬೇಕೆನ್ನುವ ಒತ್ತಾಸೆ ನಮ್ಮದು ಎಂದು ಪಟ್ಲ ಸತೀಶ್ ಶೆಟ್ಟಿ ಅವರು ಹೇಳಿದರು.