#MlrLitFest
  • mlrlitfest@gmail.com

Need for Shifting Global Narrative on India

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ರಾಮ್‌ ಮಾಧವ್‌, ಎಂ. ಡಿ. ನಲಪತ್‌  ಮತ್ತು ಪ್ರಶಾಂತ್‌ ವೈದ್ಯರಾಜ್ ಅವರು Need for Shifting Global Narrative on India ಕುರಿತು ಸಂವಾದ ನಡೆಸಿದರು.

ರಾಮ್‌ ಮಾಧವ್ ಅವರು ಮಾತನಾಡಿ, ಗ್ಲೋಬಲ್‌ ನರೇಟಿವ್‌ ಎಂಬುದು ವಾಸ್ತವದಲ್ಲಿ ಇಲ್ಲ. ಆದರೆ ನ್ಯೂಯಾರ್ಕ್‌ ಟೈಮ್ಸ್‌ನಂತಹ ಪತ್ರಿಕೆಗಳ ಪ್ರಭಾವದಿಂದ ಗ್ಲೋಬಲ್‌ ನರೇಟಿವ್‌ ಇದೆ ಅಂದೆನಿಸುತ್ತದೆ. ವಿಶ್ವಬ್ಯಾಂಕ್‌, ಐಎಂಎಫ್‌ ಭಾರತದ ಬಗ್ಗೆ ಸಾಕಾರಾತ್ಮಕವಾಗಿಯೇ ಮಾತನಾಡುತ್ತಿವೆ. ಅದೇ ರೀತಿ ನಕಾರಾತ್ಮಕ ಟೀಕೆಗಳು ಬೇರೆ ಕಡೆಯಿಂದ ವ್ಯಕ್ತವಾಗುತ್ತಿವೆ. ಸಾರ್ವಜನಿಕ ಸ್ಥಾನದಲ್ಲಿ ಇರುವವರು ಟೀಕೆಗಳಿಗೆ ಸ್ಪಂದಿಸಲೇ ಬೇಕಾಗುತ್ತದೆ. ಇದು ಪ್ರಜಾಪ್ರಭುತ್ವ ದೇಶ. ಪ್ರಸ್ತುತ ಆಡಳಿತದಲ್ಲಿರುವ ಪಕ್ಷ ಕಳೆದ 70 ವರ್ಷಗಳಲ್ಲಿ ಚುನಾವಣೆಗಳನ್ನು ಸೋಲುತ್ತಾ ಬಂದಿತ್ತು ಎಂಬುದನ್ನು ನಾವು ನೆನಪಿಡಬೇಕು. ಇಂದು ನಮ್ಮ ಪ್ರಧಾನಿಗಳು ಹೇಳಿದ ಮಾತನ್ನು ವಿಶ್ವ ನಾಯಕರು ಪುನರುಚ್ಛರಿಸುತ್ತಾರೆ ಎಂದರು.

ಪ್ರತಿಯೊಂದು ವ್ಯವಸ್ಥೆಯಲ್ಲೂ ವಿರೋಧಿಸುವವರು ಇದ್ದೇ ಇರುತ್ತಾರೆ. ಅವುಗಳಿಗೆ ಬಯಸಿದರೆ ಪ್ರತಿಕ್ರಿಯೆ ಕೊಡಬಹುದು, ಸುಮ್ಮನೆಯೂ ಕೂರಬಹುದು. ಪ್ರಸ್ತುತ ಭಾರತವನ್ನು ಟೀಕಿಸುವವರು ಬೃಹತ್‌ ಪಿತೂರಿಯ ಭಾಗವಾಗಿದ್ದಾರೆ. ಮುಂದಿನ ಆರು ವರ್ಷಗಳ ಬಳಿಕ ಭಾರತ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಬಗೆಯನ್ನು ನಾವು ಆಳವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಲಿದ್ದೇವೆ. ಕಳೆದ 8 ವರ್ಷಗಳಲ್ಲಿ ಸರ್ಕಾರವು ನಾಗರಿಕ ರಾಷ್ಟ್ರದ ಚಿಂತನೆಯನ್ನು ಅಳವಡಿಸಿಕೊಂಡಿದೆ. ಪಾಶ್ಚಿಮಾತ್ಯರು, ಬುದ್ಧಿಜೀವಿಗಳು ಕೂಡ ಸಂವಿಧಾನ ಆಧಾರಿತ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುತ್ತಾರೆ. ಭಾರತ ಗ್ಲೋಬಲ್‌ ಸೌತ್‌ ಅಲ್ಲಿ ಪ್ರಮುಖನಾಗುತ್ತಿದೆ. ಇಂದು ಸೌತ್‌ ಈಸ್ಟ್‌ ಏಷ್ಯಾದಲ್ಲಿ ನಂ.1 ಸಿನಿಮಾ ಬಾಹುಬಲಿ, ನಂ.2 ಆರ್‌ಆರ್‌ಆರ್.‌ ಆರ್‌ಆರ್‌ಆರ್ ಅನ್ನು ಪಾಶ್ಚಿಮಾತ್ಯ ಮೀಡಿಯಾಗಳು ಯುರೋಪಿ ವಿರೋಧಿ ಸಿನಿಮಾ ಎಂದು ಬಿಂಬಿಸುತ್ತಿವೆ. ಬಾಲಿವುಡ್‌ಗಿಂತಲೂ ಸೌತ್‌ ಸಿನಿಮಾಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಪ್ರಸ್ತುತ ಚೀನಾ ತನ್ನ ಸಿದ್ಧಾಂತ ಪಸರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದೆ. 70% ಜಗತ್ತು ಚೀನಾ ವಿರೋಧಿಯಾಗಿದೆ. ಇಂಡಿಯಾ ಪೆಸಿಫಿಕ್‌ಗೆ ಹಿಂದೆ ಹೆಚ್ಚಿನ ಗಮನ ನೀಡಲಾಗಿಲ್ಲ. ಕೇವಲ ಅಮೆರಿಕ ಮತ್ತು ಯುರೋಪ್‌ಗೆ ಗಮನ ನೀಡಲಾಗುತ್ತಿದೆ. ಭಾರತವು ಇಂಡಿಯಾ ಪೆಸಿಫಿಕ್‌ನಲ್ಲಿ ಪ್ರಮುಖನಾಗಿ ಹೊರಹೊಮ್ಮುವ ಅಗತ್ಯವಿದೆ ಎಂದರು.

ಎಂ.ಡಿ ನಲಪತ್‌ ಅವರು ಮಾತನಾಡಿ, ಭಾರತ ಹಿಂದೆ ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು. ಆದರೀಗ ಆತ್ಮವಿಶ್ವಾಸ ಭಾರತಕ್ಕೆ ಇದೆ. ಈ ಆತ್ಮವಿಶ್ವಾಸ ಎಂಬುದು ಉನ್ನತ ಗುರಿಗಳನ್ನು ಇಟ್ಟುಕೊಂಡಿರುವ ಕಾರಣದಿಂದ ಬಂದಿದೆ. ಬಿಬಿಸಿ ಈಗ ಭಾರತಕ್ಕೆ ಬುದ್ಧಿ ಮಾತು ಹೇಳುವ ರೀತಿ ವರ್ತಿಸುತ್ತಿದೆ. ಆದರೆ ಬಹುತೇಕ ಜನರು ಅದರ ಬುದ್ಧಿಮಾತನ್ನು ಒಪ್ಪಿಕೊಳ್ಳಲು ಸಿದ್ಧರಾಗಿಲ್ಲ. ಚೀನಾದ ಆಕ್ರಮಣಶೀಲ ಧೋರಣೆ ಭಾರತಕ್ಕೆ ಸಹಾಯವನ್ನೇ ಮಾಡಿದೆ. ಯಾಕೆಂದರೆ ಅದರ ಬಹಿರಂಗ ಆಕ್ರಮಣಶೀಲ ಧೋರಣೆಯಿಂದ ಇಂಡೋ ಪೆಸಿಫಿಕ್‌ಗೆ ಸಂಬಂಧಿಸಿದ ದೇಶಗಳು ಭಾರತಕ್ಕೆ ಬೆಂಬಲವನ್ನು ನೀಡುತ್ತಿವೆ. ಪ್ರಸ್ತುತ ಭಾರತ ತನ್ನ ಸಾಮರ್ಥ್ಯವನ್ನು ಅರಿತುಕೊಂಡಿದೆ. ಚೀನಾದ ಬೆದರಿಕೆಗೆ ಭಾರತ ಇಂದು ಹೆದರುತ್ತಿಲ್ಲ,  ಚೀನಾದ ವಿರುದ್ಧ ತನ್ನನ್ನು ರಕ್ಷಣೆ ಮಾಡುವ ಸಾಮರ್ಥ್ಯ ಭಾರತಕ್ಕೆ ಬಂದಿದೆ. ಭಾರತ ವಿಶಿಷ್ಟ ನಾಗರಿಕ, ಸಾಂಸ್ಕೃತಿಕ ಮೌಲ್ಯ ವ್ಯವಸ್ಥೆಯನ್ನು ಹೊಂದಿದೆ. ಆರ್ಥಿಕ ಅಭಿವೃದ್ಧಿ, ಸಂತೋಷಭರಿತ ಜೀವನ ಎಂಬುದು ಭಾರತದ ನಾಗರಿಕತೆಯಲ್ಲೇ ಇದೆ.  ಪ್ರಸ್ತುತ ಜಗತ್ತು ಕೋಲ್ಡ್‌ ವಾರ್‌ 2.0 ಮೂಲಕ ಹಾದುಹೋಗುತ್ತಿದೆ. ಈ ಕೋಲ್ಡ್‌ ವಾರ್‌ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ವ್ಯವಸ್ಥೆ ನಮ್ಮಲ್ಲಿ ಇದೆ.  ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಎಂಬುದು ಇಂದಿನ ಕಾಲಘಟ್ಟದ ಯುದ್ಧಕ್ಕೆ ನಿರ್ಣಾಯಕವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದರು.