ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 2 ರಲ್ಲಿ ಡಾ. ಇಂದಿರಾ ಹೆಗ್ಡೆ, ಸತ್ಯಬೋಧ ಜೋಶಿ ಮತ್ತು ಡಾ. ಅಶ್ವಿನಿ ದೇಸಾಯಿ ಅವರು Culture, Caricature and Creativity ಕುರಿತು ಸಂವಾದ ನಡೆಸಿದರು.
ಡಾ. ಅಶ್ವಿನಿ ದೇಸಾಯಿ ಅವರು ಮಾತನಾಡಿ, ಭಾರತೀಯ ಆಚರಣೆಗಳ ಬಗ್ಗೆ ಹಲವಾರು ಮಾತುಗಳು ಇವೆ. ಇದೊಂದು ನಂಬಿಕೆ ಅಂತ ಹೇಳ್ತಾರೆ. ತುಂಬಜನ ಮೂಢನಂಬಿಕೆ ಅಂತ ಹೇಳ್ತಾರೆ. ಇದೊಂದು ಕಡೆ ಆದ್ರೆ, ಇನ್ನೊಂದು ಕಡೆ ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕ ವಿವರಣೆ ಕೊಡುವುದು. ಈ ರೀತಿಯ ವಿವರಣೆ ಅಗತ್ಯವೇ? ನಮ್ಮ ಪೂರ್ವಜರು ದಾಟಿಸಿರುವ ಆಚರಣೆಗಳು ಇವು. ಅವರು ಮಾಡುತ್ತಿದ್ದರು, ನಾವು ಮುಂದುವರಿಸುತ್ತಿದ್ದೇವೆ ಎಂಬ ಒಂದು ಕಾರಣ ಸಾಕಲ್ವಾ ಎಂದರು.
ಡಾ. ಇಂದಿರಾ ಹೆಗ್ಡೆ ಅವರು ಮಾತನಾಡಿ, ನಾನು ಈ ಮಣ್ಣಿನಲ್ಲಿ ಇದ್ದು ನಲುವತ್ತು ವರ್ಷಗಳ ಬಳಿಕ ಸಂಶೋಧನೆಗೆ ಇಳಿದವಳು. ಕರ್ನಾಟಕದ ಭಾಗವೇ ಆಗಿದ್ದರೂ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ತುಳುನಾಡಿಗೆ ಅದರದ್ದೇ ಆದ ಅಸ್ಮಿತೆ ಇದೆ. ತುಳುನಾಡ ಸಂಸ್ಕೃತಿ ಬಹಳ ವಿಶಾಲವಾದದ್ದು ಎಂದರು.
ಒಟ್ಟು ಕರ್ನಾಟಕ, ಭಾರತದ ಸಂಸ್ಕೃತಿಯ ಬಗ್ಗೆ ಚಿತ್ರೀಕರಿಸುವಾಗ ನಿಮಗಾದ ಅನುಭವ ತಿಳಿಸಿ ಎಂಬ ಪ್ರಶ್ನೆಗೆ ಸತ್ಯಬೋಧ ಜೋಶಿ ಅವರು ಮಾತನಾಡಿ, ನೀನು ಮಾಡಿದ್ದನ್ನು ನೀನೇ ಉಣ್ಣು ಎಂಬ ಮಾತಿದೆ. ಸಿದ್ಧಿ ಜನಾಂಗದ ನೃತ್ಯವನ್ನು ಚಿತ್ರೀಕರಿಸಲು ಹೋಗಿದ್ದೆ. ಆ ಹಾಡುಗಳಲ್ಲಿ ಅವರ ಜನಾಂಗದವರು ಉಂಡ ನೋವು ಇದೆ. ಅದೇ ರೀತಿ, ಪಾಡ್ದನಗಳಲ್ಲೂ ಇಲ್ಲಿನ ಜನರ, ಮಾತೆಯರ ನೋವುಗಳಿವೆ. ಅವುಗಳನ್ನೆಲ್ಲ ಚಿತ್ರೀಕರಿಸುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ ಎಂದರು.
ಕೆಲವು ಆಚರಣೆಗಳಿಗೆ ಅದರದೇ ಆದ ಪ್ರಾಮುಖ್ಯತೆಗಳಿವೆ. ಹಾಗೇನೇ ಭೂತಾರಾಧನೆ ಬಗ್ಗೆ ಹೇಳಬೇಕು ಎಂದಾಗ ಡಾ. ಇಂದಿರಾ ಹೆಗ್ಡೆ ಅವರು ಮಾತನಾಡಿ, ಇಲ್ಲಿ ಅರಸು ದೈವ ಅಂತ ಒಂದಿದೆ. ಉಳಿದವೆಲ್ಲ ಪರಿವಾರ ದೈವಗಳು. ಆಮೇಲೆ ಶಿವನ ಪರಿವಾರ ಎಂಬ ಕಲ್ಪನೆ ಬಂತು. ಶ್ರೇಣೀಕೃತ ವ್ಯವಸ್ಥೆಯಲ್ಲಿ ಭೂತಗಳ ಆರಾಧನೆ ಬರುತ್ತದೆ. ಶಿಷ್ಟ ದೇವತೆ ಅಥವಾ ಗ್ರಾಮದೇವತೆ ಮಧ್ಯೆ ವ್ಯತ್ಯಾಸಗಳಿಲ್ಲ ಎಂದರು.
ಸತ್ಯಬೋಧ ಜೋಶಿ ಅವರು ಈ ಕುರಿತು ಮಾತನಾಡಿ, ದೈವ ಪಾತ್ರಿಗಳಿಗೆ “ನಿಜವಾಗಲೂ ನಿಮ್ಗೆ ಆವಾಹನೆ ಆಗುತ್ತಾ?” ಅಂತ ಕೇಳಿದಾಗ, ಯಾವುದೋ ಮೂರುಮುಕ್ಕಾಲು ಗಳಿಗೆಯಲ್ಲಿ ಆಗುತ್ತೆ. ಅಂತ ಹೇಳಿದ್ರು. ಭೂತಾರಾಧನೆ ಎಂಬುದು ಕಲೆಗಾಗಿ ಕಲೆ ಅಲ್ಲ. ಅದರಲ್ಲೊಂದು ಕಾರಣಿಕ ಇದೆ ಎಂದರು.
ಡಾ. ಅಶ್ವಿನಿ ದೇಸಾಯಿ ಅವರು ಮಾತನಾಡಿ, ಬೇರೆ ಬೇರೆ ಸಮುದಾಯಗಳಲ್ಲಿ ಬೇರೆ ಬೇರೆ ಆಚರಣೆಗಳಿವೆ. ಇದರಲ್ಲಿ ಯಾವುದು ಶ್ರೇಷ್ಠ ಅಥವಾ ಕಡಿಮೆ ಅಂತ ಹೇಳೋದಕ್ಕೆ ಸಾಧ್ಯ ಇಲ್ಲ. ಈ ಭೂಮಿಯಲ್ಲಿ ಹುಟ್ಟಿದ್ದೇವೆ, ಇಲ್ಲೇ ಸ್ವರ್ಗ, ಇಲ್ಲೇ ನರಕ, ಇಲ್ಲೇ ಬದುಕು ಎಂಬ ನಂಬಿಕೆ ನಮ್ಮದು. ವೈವಿಧ್ಯತೆಗಳೇ ನಮ್ಮ ವೈಶಿಷ್ಟ್ಯ ಎಂದರು.
ಭೂತಾರಾಧನೆ ವೈದಿಕವಾ ಅವೈದಿಕವಾ ? ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಡಾ. ಇಂದಿರಾ ಹೆಗ್ಡೆ ಅವರು, ವೈದಿಕವೂ ಅಲ್ಲ ಅವೈದಿಕವೂ ಅಲ್ಲ, ಈ ಆಚರಣೆ ಜಾನಪದ. ಭೂತಾರಾಧನೆ ಮೂಢನಂಬಿಕೆ ಆದ್ರೆ, ಎಲ್ಲವೂ ಮೂಢನಂಬಿಕೆ ಎಂದರು.