ಬಹುವಚನಕ್ಕೊಂದೇ ತತ್ವ – ಪುಸ್ತಕ ಸಂವಾದ

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಡಾ. ಅಜಕ್ಕಳ ಗಿರೀಶ್‌ ಭಟ್‌ ಮತ್ತು ರೋಹಿತ್‌ ಚಕ್ರತೀರ್ಥ ಅವರು ಬಹುವಚನಕ್ಕೊಂದೇ ತತ್ವ – ಪುಸ್ತಕದ ಕುರಿತು ಸಂವಾದ ನಡೆಸಿದರು.


ಡಾ. ಅಜಕ್ಕಳ ಗಿರೀಶ್‌ ಭಟ್‌ ಅವರು ಮಾತನಾಡಿ, ಹಿಂದುತ್ವ ಎಂಬುದು ಜೀವನ ಪದ್ಧತಿ ಎಂಬುದನ್ನು ಸರ್ವೋಚ್ಛ ನ್ಯಾಯಾಲಯ ಹೇಳಿದ್ದನ್ನು ಒಪ್ಪಿಕೊಂಡಿದ್ದೇವೆ. ಏಕತ್ವ-ಬಹುತ್ವದ ಸಂಗಮ ಹಿಂದುತ್ವ. ಹಿಂದುತ್ವ ಭಾರತೀಯತ್ವದ ಅನುಭವ.  ದಲಿತರಿಂದ ಬ್ರಾಹ್ಮಣರವರೆಗೆ ಸಮಾನವಾಗಿರುವ ಅಂಶಗಳು ಹಿಂದುತ್ವದಲ್ಲಿ ಇದೆ. ದೇವರನ್ನು ಮನುಷ್ಯರಾಗಿ, ಮನುಷ್ಯರನ್ನು ದೇವರಾಗಿ ಕಾಣುವುದು, ದೇವರೆ ಇಲ್ಲ ಎಂಬ ವಾದ,  ಭೂಮಿಯ ಪ್ರತಿಯೊಂದು ಅಂಶವನ್ನೂ ದೇವರಾಗಿ ಕಾಣುವುದು , ಪುರಾಣಗಳ ಸೃಷ್ಟಿ, ವಿಮರ್ಶೆಗಳು ಎಲ್ಲಾ ಹಿಂದೂಗಳಿಗೆ ಸಮಾನವಾಗಿದೆ. ಇದು ಬಹುತ್ವಕ್ಕೆ ಆಸ್ಪದ ನೀಡಿದ ಅಂಶಗಳು. ತೆರೆದ ಮನಸ್ಸಿನಿಂದ ಬಹುತ್ವವೇ ಹಿಂದುತ್ವ ಎಂಬುದನ್ನು ಒಪ್ಪಿಕೊಳ್ಳಲೇಬೇಕು ಎಂದರು.

ಧರ್ಮವೆಂದರೆ ರಿಲಿಜನ್‌ ಅಲ್ಲ, ರಿಲಿಜನ್ ಧರ್ಮವಲ್ಲ. ಧರ್ಮದ ಪರಿಕಲ್ಪನೆ ಇಲ್ಲದವರಿಗೆ ಧರ್ಮವನ್ನು ರಿಲಿಜನ್‌ ಎಂದು ಹೇಳಿಕೊಟ್ಟರೆ ಅರ್ಥ ಕೆಡುತ್ತದೆ. ಅವರು ತಮ್ಮ ರಿಲಿಜನ್‌ನ ಏಕತ್ವದ ರೂಪದಲ್ಲೇ ಬಹುತ್ವದ ಹಿಂದೂ ಧರ್ಮವನ್ನು ನೋಡುತ್ತಾರೆ.  ನಮ್ಮಲ್ಲಿ ದೇವರಿಗೆ ಬೇರೆ ಬೇರೆ ರೂಪವಿದೆ. ಶಾಸ ಸ್ವೀಕರಿಸುವವನಾಗಿ, ತಂದೆಯಾಗಿ, ಸೃಷ್ಟಿಕರ್ತನಾಗಿ, ಅಸಹಾಯಕನಾಗಿ ನಾವು ದೇವರನ್ನು ಕಂಡುಕೊಂಡಿದ್ದೇವೆ. ಹೊರಗಿನವರಿಗೆ ಈ ವಿಶಾಲ, ಸಂಕೀರ್ಣ ಪರಿಕಲ್ಪನೆಯನ್ನು ಊಹಿಸಲು ಸಾಧ್ಯವಾಗಲಾರದು. ಇಸ್ಲಾಂ ಮತ್ತು ಕ್ರೈಸ್ಥ ರಿಲಿಜನ್‌ ಪುಸ್ತಕವನ್ನು ಅವಲಂಬಿಸಿದ ರಿಲಿಜನ್‌ಗಳು. ಕ್ರೈಸ್ಥರಲ್ಲಿ ಬದಲಾವಣೆಯಾಗಿದೆ. ಅವರಲ್ಲಿ ಧರ್ಮದ್ರೋಹಕ್ಕೆ ಶಿಕ್ಷೆ ಎಂಬುದಿಲ್ಲ. ಆದರೆ ಇಸ್ಲಾಂ ಈಗಲೂ ಅದಕ್ಕೆ ಬಲವಾಗಿ ನಿಂತುಕೊಂಡಿದೆ. ಇಸ್ಲಾಂ ತನ್ನ ಮತದಲ್ಲಿನ ಅಂಶಗಳನ್ನು ಬದಲಾಯಿಸಲು ಅಥವಾ ಬೇರೆ ಹೆಸರನ್ನು ಕೊಡಲು ಸ್ವಾತಂತ್ರ್ಯ ನೀಡುವುದಿಲ್ಲ. ಮಲೇಷ್ಯಾದಲ್ಲಿ ಕ್ರೈಸ್ಥರು ತಮ್ಮ ದೇವರಿಗೆ ಅಲ್ಲಾಹು ಎಂದು ಕರೆಯುವುದನ್ನು ನ್ಯಾಯಾಲಯ ನಿರ್ಬಂಧಿಸಿದ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

ನನ್ನ ಜಾತಿಯೇ ಶ್ರೇಷ್ಠ ಎಂದರೆ ಅದನ್ನು ಒಪ್ಪಿಕೊಳ್ಳುವವರು ಯಾರು ಇಲ್ಲ. ಒಪ್ಪಿಕೊಂಡವರನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಾಗುದಿಲ್ಲ. ಆದರೆ ನನ್ನ ಧರ್ಮ ಶ್ರೇಷ್ಠ ಎಂದು ವಾದಿಸುವುದರಲ್ಲಿ ತಪ್ಪಿಲ್ಲ ಎಂಬ ಮನಸ್ಥಿತಿ ಇದೆ. ಮನುಷ್ಯರಲ್ಲಿ ದೇವರನ್ನು ಕಾಣುವ ಭಾರತದಲ್ಲಿ ಕಾಲಿಗೆ ನಮಸ್ಕಾರ ಮಾಡುವುದು ಸಂಸ್ಕಾರ, ಆದರೆ ರಿಲಿಜನ್‌ ಪಾಲಿಸುವವರಿಗೆ ಅದು ಗುಲಾಮತನ. ನಮ್ಮ ಆಡಳಿತದ ಅಂಗಗಳು ರಿಲಿಜನ್‌ಗಳು ಪಾಲಿಸುವ ಪುಸ್ತಕದಲ್ಲಿ ಬರೆದಿದ್ದನ್ನು ರಕ್ಷಿಸುವ ಅನಿವಾರ್ಯತೆಯಲ್ಲಿ ಇವೆ. ಆದರೆ ಪುಸ್ತಕದಲ್ಲಿ ಇಲ್ಲದ ಹಿಂದೂ ಸಂಸ್ಕೃತಿಗೆ ಕಾರ್ಯಾಂಗ, ನ್ಯಾಯಾಂಗದ ರಕ್ಷಣೆಯೂ ಇಲ್ಲದಂತಾಗಿದೆ.

ನೇಷನ್‌ ಅಂದರೆ  100 ವರ್ಷಗಳ ಹಿಂದೆ ಕಮ್ಯೂನಿಟಿ ಎನ್ನಲಾಗುತ್ತಿತ್ತು. ಬರುಬರುತ್ತಾ ನ್ಯಾಷನಲಿಸಂ ಅಂದರೆ ಕಮ್ಯೂಟಿನಿಟಿ ವಾದ ಅಥವಾ ಕೋಮುವಾದ ಎಂಬುದಾಯಿತು ಎಂದರು.