ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 2 ರಲ್ಲಿ ಕರಾವಳಿಯ ಭಾಷಾ ಸಾಮರಸ್ಯ ಕುರಿತು ಲಕ್ಷ್ಮಿನಾರಾಯಣ ಕಜೆಗದ್ದೆ, ಡಾ. ಜಗದೀಶ ಪೈ, ದಯಾನಂದ ಜಿ ಕತ್ತಲ್ಸರ್ ಮತ್ತು ಡಾ. ಮಾಧವ ಎಂ.ಕೆ. ಅವರು ಸಂವಾದ ನಡೆಸಿದರು.
ಡಾ. ಮಾಧವ ಎಂ. ಕೆ. ಅವರು ಮಾತನಾಡಿ, ಭಾರತದಲ್ಲಿ ಪ್ರತೀ ಭಾಷೆಯೂ ರಾಷ್ಟ್ರಭಾಷೆಯೇ. ಕರಾವಳಿಯ ಭಾಷಾ ಸಾಮರಸ್ಯದ ಕುರಿತು ನಾವಿವತ್ತು ಸಂವಾದ ಮಾಡುತ್ತಿದ್ದೇವೆ. ಭಾರತ ವಿಶ್ವಗುರು ಆಗುವ ನೆಲೆಯಲ್ಲಿ ಪ್ರತಿ ಭಾಷೆ ನೀಡಿರುವ ಕೊಡುಗೆ ಬಗ್ಗೆ ಏನು ಹೇಳಲು ಬಯಸುತ್ತೀರಿ ಎಂದರು.
ಜಗದೀಶ ಪೈ ಅವರು ಮಾತನಾಡಿ, 2000 ವರ್ಷಗಳ ಹಿಂದೆ ಸರಸ್ವತಿ ನದಿಯ ತೀರದಲ್ಲಿ ಇದ್ದ ಸಾರಸ್ವತರು ಕಾರಣಾಂತರಗಳಿಂದ ಗೋವಾಕ್ಕೆ ಬಂದರು. ಕೊಂಕಣ ಪ್ರದೇಶದಲ್ಲಿ ಇದ್ದ ಕಾರಣ ಕೊಂಕಣಿಗಳು. ಸುಮಾರು ನಾಲ್ಕು ಶತಮಾನಗಳ ವರಗೆ ಕೊಂಕಣಿ ಸಾಹಿತ್ಯದಲ್ಲಿ ಅಂಥ ಕೃಷಿಯೇನೂ ಆಗ್ಲಿಲ್ಲ. ಪೋರ್ಚುಗೀಸರ ಹಾವಳಿ. ಆಮೇಲೆ ಕೊಂಕಣಿ ಸಾಹಿತ್ಯದಲ್ಲಿ ಬಹಳಷ್ಟು ಕೆಲಸಗಳು ಆಗಿವೆ. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ಮಾತನಾಡಿ, ಅರೆಭಾಷೆ. ಒಕ್ಕಲಿಗ ಸಮುದಾಯದ ಭಾಷೆ. ಇದನ್ನು ಮಾತನಾಡುವವರ ಸಂಖ್ಯೆ ಬಹಳ ಕಡಿಮೆ. 6-7 ಲಕ್ಷ ಜನ ಇರಬಹುದೇನೊ. ಇದನ್ನು ಗೌಡಕನ್ನಡ ಅಂತ ಮೊದಲಿಗೆ ಕರೆದರು. ಅಮೇಲೆ ಅರೆಭಾಷೆ ಎಂದಾಯಿತು. ಇದರಲ್ಲಿ ನಡುಗನ್ನಡ ಕಾಲದ ಕೆಲವು ಪದಗಳು ಉಳಿದುಕೊಂಡು ಬಂದಿವೆ. ಹುಡುಗಿ – ಗೂಡೆ ಅಂತ ಹೆಳ್ತಾರೆ. ಸ್ವಲ್ಪ – ಹನಿಸು, ಅನ್ಯ. ಈ ರೀತಿಯ ವಿಶಿಷ್ಟ ಪದಗಳಿವೆ. ಅರೆಭಾಷೆಗೆ ಕಳೆದ ಹತ್ತು ವರ್ಷಗಳಿಂದ ಅಕಾಡೆಮಿಯ ಸ್ಥಾನಮಾನ ಸಿಕ್ಕಿದೆ. ಆಮೇಲೆ ಸಾಹಿತ್ಯ ಸೃಷ್ಟಿ ಹೆಚ್ಚಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ಸಂಶೋಧನೆಗೆ ಅವಕಾಶಗಳಿವೆ ಎಂದರು.
ಭಾಷಾಸಾಮರಸ್ಯದ ಕುರಿತು ಮಾತನಾಡಿದ ಡಾ. ಜಗದೀಶ ಪೈ ಅವರು, ಈ ದೇಶದಲ್ಲಿ ಹೆಣ್ಣಿಗಾಗಿ, ಭೂಮಿಗಾಗಿ ಯುದ್ದ ನಡೆದಿದೆ. ಆದ್ರೆ ಭಾಷೆಗಾಗಿ ಎಂದಿಗೂ ಯುದ್ಧ ನಡೆದಿಲ್ಲ. ಪಂಜೆ ಮಂಗೇಶರಾಯರು, ಗೋವಿಂದ ಪೈ ಅವರ ಮಾತೃಭಾಷೆ ಕೊಂಕಣಿಯಾದ್ರೂ ಸಾಹಿತ್ಯ ರಚನೆ ಮಾದಿದ್ದು ಕನ್ನಡದಲ್ಲಿ. ಕರಾವಳಿ ಭಾಗದಲ್ಲಿ ಅನೇಕ ಭಾಷೆ ಮಾತನಾಡುವ ಜನರಿದ್ದಾರೆ. ಆದರೆ ಎಂದಿಗೂ ಭಾಷೆಯ ಆಧಾರದಲ್ಲಿ ಮನಸ್ತಾಪ ಬಂದಿಲ್ಲ. ಬದಲಾಗಿ, ಭಾಷೆಗಾಗಿ ಒಂದಾಗಿ ಕೆಲಸ ಮಾಡಿದ್ದಾರೆ. ಬಹುಭಾಷಾ ಒಂದು ಸಂಸ್ಕೃತಿ ಎಂಬ ಭಾವವಿದೆ ಎಂದರು.
ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ಮಾತನಾಡಿ, ತುಳು, ಕೊಂಕಣಿ ಮಾತನಾಡುವವರು ಬಹಳ ಸಮುದಾಯದವರು ಇದ್ದಾರೆ. ಆದ್ರೆ, ಅರೆಭಾಷೆ, ಹವ್ಯಕಭಾಷೆ ಮಾತನಾಡುವವರು ಒಂದು ಸಮುದಾಯ ಮಾತ್ರ ಎಂಬ ಹಣೆಪಟ್ಟಿ ಇದೆ. ಅರೆಭಾಷೆ ಅಕಾಡೆಮಿಗೆ ಕೇವಲ ಅರೆಭಾಷಿಗರು ಮಾತ್ರ ಸದಸ್ಯರಾಗಬೇಕೆಂದೇನಿಲ್ಲ. ಬೇರೆ ಭಾಷಿಗರೂ ಬಂದು ಸೇರಬಹುದು. ಅರೆಭಾಷಿಗರಲ್ಲದವರಿಗೆ, ಹೃದಯವೈಶಾಲ್ಯತೆಯಿಂದ ಅವಕಾಶ ತೆರೆದಿಟ್ಟಾಗ ಅಲ್ಲಿ ಸಾಮರಸ್ಯ ಉಂಟಾಗುತ್ತದೆ ಎಂದರು.
ಅಕಾಡೆಮಿಗಳು ಭಾಷಾಸಾಮರಸ್ಯಕ್ಕೆ ಯಾವ ರೀತಿ ಕೊಡುಗೆ ನೀಡಬೇಕು ಎಂಬ ಪ್ರಶ್ನೆಗೆ ಡಾ. ಜಗದೀಶ ಪೈ ಅವರು ಮಾತನಾಡಿ ಅಕಾಡೆಮಿಗಳು ಸರಕಾರದ ಅನುದಾನದಿಂದ ನಡೆಯುವುದು. ಮನಸ್ಸು ಮಾಡಿದರೆ ಏನೂ ಕೂಡ ಸಾಧಿಸಬಹುದು. ಕೊಂಕಣಿ ಭಾಷೆ ಮಾತನಾಡುವ 42 ಪಂಗಡಗಳಿವೆ. ಅದರಲ್ಲಿ ಆದಿವಾಸಿಗಳೂ ಇದ್ದಾರೆ. ಅವರ ಸಂಪ್ರದಾಯ, ಆಚರಣೆ ಎಲ್ಲವನ್ನೂ ಕೊಂಕಣಿ ಅಕಾಡೆಮಿ ಚಿತ್ರೀಕರಿಸಿ ಇಟ್ಟಿದೆ ಎಂದರು.
ದಯಾನಂದ ಜಿ ಕತ್ತಲ್ಸರ್ ಅವರು ಅಕಾಡೆಮಿಗಳ ಕೊಡುಗೆ ಕುರಿತು ಮಾತನಾಡುತ್ತಾ, ತುಳುಭಾಷೆ ಮಾತನಾಡುವ ಅನೇಕ ಪಂಗಡಗಳಿವೆ. ಇಲ್ಲಿನ ವ್ಯಾವಹಾರಿಕ ಭಾಷೆಯೂ ತುಳುವಾಗಿದೆ. ಭಾಷಾ ಸಂಸ್ಕೃತಿಯನ್ನು ಕಟ್ಟಿಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯ ಪಾತ್ರ ಮಹತ್ವದ್ದು. ಭಾಷೆ ಎಂಬುದು ಒಂದು ವರ್ಗಕ್ಕೆ ಸೀಮಿತವಲ್ಲ. ಕೊಂಕಣಿ ಭಾಷಿಗರು ತುಳು ಸಾಹಿತ್ಯಕ್ಕೆ ಕೊಟ್ ಕೊಡುಗೆಯನ್ನು ಗುರುತಿಸಿದ್ದೇವೆ, ತುಳು ಸಾಹಿತ್ಯದಲ್ಲಿ ಸಾಧನೆ ಮಾಡಿದ ಮುಸಲ್ಮಾನರೊಬ್ಬರನ್ನು ಗೌರವಿಸಿದ್ದೇವೆ ಎಂದರು.
ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ಮಾತನಾಡಿ, ಹಬ್ಭಹರಿದಿನಗಳ ಆಚರಣೆ, ಸಂಘ-ಸಂಸ್ಥೆಗಳು ಮಾಡುವ ಕೆಲಸ. ಅಕಾಡೆಮಿ ಮಾಡಬೇಕಾದ ಕೆಲಸ ಏನು ಎಂಬುದು ಸ್ಪಷ್ಟ ಇರಬೇಕು. ಗೌರವ ಪ್ರಶಸ್ತಿ ಕೊಡುವುದು, 20-25 ವರ್ಷ ಸಾಧನೆ ಮಾಡಿದವರಿಗೆ. ಹಾಗೆಯೇ ಮುಂದಿನ 20 ವರ್ಷದ ಬಳಿಕ ಆ ಪ್ರಶಸ್ತಿಯನ್ನು ಸ್ವೀಕರಿಸುವಂತೆ ನಮ್ಮ ಯುವಪೀಳಿಗೆಯನ್ನು ಬೆಳೆಸುವ ಕಾರ್ಯ ಅಕಾಡೆಮಿ ಮಾಡಬೇಕು ಎಂದರು.
ನಂತರ ಸಭಿಕರು ಕೇಳಿದ ತುಳುಭಾಷೆ ಹೇಗೆ ಸಾಮರಸ್ಯ ಸಾರಿದೆ? ಎಂಬ ಪ್ರಶ್ನೆಗೆ ದಯಾನಂದ ಜಿ ಕತ್ತಲ್ಸರ್ ಅವರು ಮಾತನಾಡಿ, ದೈವಾರಾಧನೆಯಲ್ಲಿ ನೂಲುಹಾಕಿದವನಿಂದ ಹಿಡಿದು, ಡೋಲುಹಿಡಿವವರವರೆಗೆ 16 ಪಂಗಡಗಳು. ಅವರಲ್ಲದೆ, ಬ್ಯಾರಿ ಭಾಷಿಕರು, ಕ್ರಿಶ್ಚಿಯನ್ನರು ಎಲ್ಲರನ್ನೂ ಜೋಡಿಸಿಕೊಂಡು ಹೋಗುವ ಕೆಲಸವನ್ನು ತುಳು ಮಾಡಿದೆ.
ಅಮೃತಕಾಲದಲ್ಲಿ ಅಕಾಡೆಮಿಗಳ ಭವಿಷ್ಯದ ದೃಷ್ಟಿಯೇನು? ಎಂಬ ಸಭಿಕರ ಪ್ರಶ್ನೆಗೆ ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ಉತ್ತರಿಸುತ್ತಾ, ಇಂಗ್ಲಿಷ್, ಕನ್ನಡ, ಹಿಂದಿ ಇತ್ಯಾದಿಗಳು ಅನ್ನದ ಭಾಷೆಗಳು. ಆದ್ರೆ, ಸಣ್ಣ ಸಣ್ಣ ಭಾಷೆಗಳ ಮೂಲಕ ರಂಗಪ್ರಯೋಗ ಇತ್ಯಾದಿಗಳನ್ನು ಮಾಡಿದಾಗ ಜಗತ್ತು ನಮ್ಮತ್ತ ನೋಡುತ್ತದೆ ಎಂದರು.