ಮಂಗಳೂರು ಲಿಟ್ಫೆಸ್ಟ್ 2023 ರಲ್ಲಿ Audi 2 ರಲ್ಲಿ ಸಾಹಿತ್ಯ: ಒಳನೋಟ – ಹೊರನೋಟ ಕುರಿತು ಕೆ. ಎನ್. ಗಣೇಶಯ್ಯ ಮತ್ತು ಡಾ. ಸುಧೀಂದ್ರ ಅವರು ಸಂವಾದ ನಡೆಸಿದರು.
ಡಾ. ಸುಧೀಂದ್ರ ಅವರು ಮಾತನಾಡಿ, ನಿಮ್ಮ ಬಾಲ್ಯದಲ್ಲಿ ಮತ್ತು ಬೆಳವಣಿಗೆಯ ಹಂತದಲ್ಲಿ ನಿಮ್ಮ ತಂದೆಯವರ ಪ್ರಭಾವ ಇತ್ತು ಅಂತ ಹೇಳಿದಿರಿ. ನಿಮ್ಮ ಬರವಣಿಗೆಯ ಮೇಲೆ ಅವರ ಪ್ರಭಾವ ಇದೆಯೇ? ಎಳವೆಯಲ್ಲಿ ಬರವಣಿಗೆ ಪ್ರಾರಂಭಿಸಿ ಮಾಗುವುದಕ್ಕೂ, ಮಾಗಿದ ಮೇಲೆ ಬರವಣಿಗೆ ಪ್ರಾರಂಭಿಸುವುದಕ್ಕೂ ವ್ಯತ್ಯಾಸ ಇದೆಯಾ ಎಂದರು.
ಕೆ. ಎನ್. ಗಣೇಶಯ್ಯ ಅವರು ಮಾತನಾಡಿ, ವ್ಯತ್ಯಾಸದ ಬಗ್ಗೆ ಹೇಳಲಾರೆ. ಯಾಕಂದ್ರೆ ನಾನು 50 ವರ್ಷ ಆದ ಮೇಲೆ ಬರೆಯಲು ಪ್ರಾರಂಭಿಸಿದ್ದು. ಅಲ್ಲಿವರೆಗೂ ನಾನು ಬರೆಯಬಲ್ಲೆ ಎಂಬ ಅರಿವೇ ಇರಲಿಲ್ಲ. ಹೌದು, ನನ್ನ ಬರವಣಿಗೆಗಳ ಮೇಲೆ ನನ್ನ ತಂದೆಯವರ ಪ್ರಭಾವ ಇದೆ. ಅವರು ತಮ್ಮ ತೋಳಿನ ಮೇಲೆ ಮಲಗಿಸಿಕೊಂಡು ಜೈಮಿನಿಭಾರತ ಓದುತ್ತಾ ಇದ್ದರು. ರಜೆಯ ಸಂದರ್ಭದಲ್ಲಿ ತಂದೆ ತಂದುಕೊಟ್ಟ ಪುಸ್ತಕಗಳನ್ನು ಓದುತ್ತಾ ಇದ್ದೆ ಎಂದರು.
ಡಾ. ಸುಧೀಂದ್ರ ಅವರು ನಿಮ್ಮ ಕಥೆ ಕಾದಂಬರಿಗಳಲ್ಲಿ ಅನೇಕ ವಸ್ತು ವೈವಿಧ್ಯತೆಗಳಿರುತ್ತವೆ. ಒಂದು ವಸ್ತು ಸಿಕ್ಕಾಗ, ಅದು ಕಥೆಯಾಗಬೇಕೊ, ಕಾದಂಬರಿಯಾಗಬೇಕೊ ಅಂತ ಹೇಗೆ ನಿರ್ಧರಿಸ್ತೀರಿ ಎಂದರು.
ಕೆ. ಎನ್. ಗಣೇಶಯ್ಯ ಅವರು ಕಾದಂಬರಿ ಅಥವಾ ಕಥೆ ಬರೆಯಬೇಕಾದ್ರೆ, ವಸ್ತುವಿನ ಸುತ್ತ ಬಹಳಷ್ಟು ವಿಷಯಗಳನ್ನು ಸಂಗ್ರಹಿಸಿರುತ್ತೇನೆ. ಆದರೆ, ಬರೆಯುವಾಗ ಅದೆಲ್ಲವನ್ನೂ ಹೇಳಲು ಸಾಧ್ಯವಿಲ್ಲ. ‘ಹಾತೆ ಜತೆ ಕಥೆ’ ಎಂಬ ಒಂದು ಸಣ್ಣ ಪ್ರಯತ್ನ ಮಾಡಿದೆ. ಈಗಿನ ಕಾಲದಲ್ಲಿ ಪೋಷಕರು ಮಕ್ಕಳ ಜೊತೆ ಕೂತು ಕಥೆ ಹೇಳುವ ಪರಿಪಾಟ ಇಲ್ಲದೇ ಆಗಿದೆ. ಅದಕ್ಕೋಸ್ಕರ ಈ ಪ್ರಯೋಗ. ಕೀಟಗಳಲ್ಲಿ ಬರುವ ಪರಾವಲಂಬಿಗಳು ಹೇಗೆ ಅದರ ವರ್ತನೆಯನ್ನೇ ಬದಲಾಯಿಸುತ್ತವೆ ಎಂಬುದನ್ನು ಗಮನಿಸಿ, ಒಂದು ಕಥೆ ಬರೆದೆ. ಆಮೇಲೆ ವಿಷಯ ವ್ಯಾಪ್ತಿ ದೊಡ್ಡದಿದೆ ಅಂತ ಕಾದಂಬರಿ ಮಾಡಿದೆ. ಹಾಗಾಗಿ ವಿಷಯ ವ್ಯಾಪ್ತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ.
ನಿಮ್ಮ ಮೇಲೆ ಪ್ರಭಾವ ಬೀರಿರುವ ಪ್ರಸಿದ್ಧ ಲೇಖಕರು ಯಾರು ? ಎಂಬ ಕುರಿತು ಕೆ. ಎನ್. ಗಣೇಶಯ್ಯ ಅವರು ಕುವೆಂಪು, ಭೈರಪ್ಪನವರು, ತೇಜಸ್ವಿ, ಟಿಕೆ.ರಾಮರಾವ್ ಇವರೆಲ್ಲ ಪ್ರಭಾವ ಬೀರಿದ್ದಾರೆ. ಕುವೆಂಪು ಅವರ ರಾಮಾಯಣ ಬಹಳ ಅದ್ಭುತವಾದ ಕೃತಿ ಎಂದರು.
ನಿಮ್ಮ ಬರಹಗಳಲ್ಲಿ ಬರುವುದು – ಹುಡುಕಾಟ ಮತ್ತು ಪ್ರಯಾಣ. ಮನುಷ್ಯನಿಗೆ ಯಾಕೆ ಇಲ್ಲದಿರುವುದರ ಬಗ್ಗೆ ತುಡಿತವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಯಾಣ ಅಥವ ಚಾರಣ ಎಲ್ಲರಿಗೂ ತುಂಬ ಇಷ್ಟ. ಹುಡುಕಾಟ ಎಂಬುದನ್ನು ವಿಸ್ತಾರವಾಗಿ ತೆಗೆದುಕೊಳ್ಳಬೇಕು. ಅದೊಂದು ಅದಮ್ಯ ಶಕ್ತಿ. ಹುಡುಕಾಟದ ಮನೋಭಾವವೇ ಹೊಸ ಹೊಸ ಸಂಶೋಧನೆಗಳಿಗೆ ಪ್ರೇರಣೆ.
ವಿಜ್ಞಾನದ ಸತ್ಯಶೋಧನೆ ಮಾತ್ರ ಸರಿ. ಧಾರ್ಮಿಕ ನಂಬಿಕೆಗಳನ್ನು ಕಡೆಗಣಿಸಲಾಗುತ್ತಿದೆ. ಯಾವುದೇ ವಿಚಾರವನ್ನು ಪರಿಗಣಿಸುವಾಗ ಪರಿಶೀಲಿಸುವ ಹಾಗೆ, ಕಡೆಗಣಿಸುವಾಗಲೂ ಪರಿಶೀಲಿಸಬೇಕು.
ಇತ್ತೀಚೆಗೆ ಬದಲಾವಣೆಗಳು ಆಗುತ್ತಿವೆ. ತಾನೇನು ಸಂಶೋಧನೆ ಮಾಡೋಕೆ ಹೊರಟಿದ್ದೇವೋ, ಕಲೆಯೂ ಕೂಡ ಅದನ್ನೇ ಮಾಡ್ತಾ ಇದೆ ಎಂಬುದನ್ನು ವಿಜ್ಞಾನ ಕೂಡ ಇವತ್ತು ಕಂಡುಕೊಂಡಿದೆ. ಕಲೆಗಾರರ ಮೂಲ ಉದ್ದೇಶ ಪ್ರಕೃತಿಯನ್ನು ಅರಿಯಬೇಕು ಎಂಬುದು. ನನ್ನ ಕಥೆಗಳಲ್ಲಿ ವಿಜ್ಞಾನ ಮತ್ತು ಕಲೆ ಎರಡರ ಮಿಶ್ರಣ ಇದೆ. ವಿಜ್ಞಾನಿಗಳಲ್ಲೂ ಸಾಹಿತಿಗಳಿದ್ದಾರೆ. ಸಾಹಿತಿಗಳಲ್ಲೂ ವಿಜ್ಞಾನಿಗಳಿದ್ದಾರೆ.
ಪಶ್ಚಿಮದಲ್ಲಿ ಧರ್ಮ ಮತ್ತು ವಿಜ್ಞಾನದ ಮಧ್ಯೆ ದೊಡ್ಡ ಬಿರುಕು ಇದೆ. ನಮ್ಮ ಭಾರತೀಯ ಧರ್ಮದಲ್ಲಿ ಹಾಗಿಲ್ಲ. ಎಲ್ಲವನ್ನೂ ಸಮನ್ವಯಗೊಳಿಸುವ ಗುಣ ಇಲ್ಲಿನ ಮಣ್ಣಿನದ್ದು. ವೇದಗಳು, ಥಿಯರಿಗಳು ಸಾಹಿತ್ಯದ ಮೂಲಕ ನಿರೂಪಿಸಲ್ಪಟ್ಟಿವೆ. ಮೂಲಭೂತವಾಗಿ ವಿಜ್ಞಾನ ಮತ್ತು ಧರ್ಮದ ಮಧ್ಯೆ ಯಾವುದೇ ವ್ಯತ್ಯಾಸ ಇಲ್ಲ ಎಂದರು.
ಸಾಹಿತ್ಯ ರಚನೆಯ ಮೂಲ ಉದ್ದೇಶ ಓದುಗರನ್ನು ತಲುಪುವುದು ಅಂತ ಹೇಳುತ್ತಿರಿ ಎಂಬುದಕ್ಕೆ ಉತ್ತರಿಸಿದ ಅವರು, ಸಾಹಿತ್ಯದಲ್ಲಿ 2 extreme ಇದೆ. ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ ಎಂಬುದೊಂದು, ಅಥವಾ ಎಲ್ರೂ ಓದಲೇ ಬೇಕು ಅಂತ ಬರೀತೇನೆ – ಎಂಬುದು. ಇದೆರಡೂ ಸರಿಯಲ್ಲ.
ಪುಣ್ಯಕೋಟಿ ಕಥೆಯಲ್ಲಿ, ಹುಲಿ ಸತ್ತಾಗ ನಾವು ಖುಷಿ ಪಡೋದು ಸರಿಯ? ಹೀಗೆ ನಮ್ಮಲ್ಲಿರುವ ಎಷ್ಟೋ ಕಥೆಗಳಲ್ಲಿ ಪೂರ್ಣತೆಯಿಲ್ಲ. ‘ನಾನು ಶಿವನ ಭಕ್ತ, ವಿಷ್ಣು ಪೂಜಿಸಲ್ಲ’ ಎಂಬಂಥ ಗೋಡೆಗಳನ್ನು ಹಾಕಿಕೊಳ್ಳಬಾರದು.
ಒಂದು ದೇಶವನ್ನು ಜೋಡಿಸುವ ಸುಳ್ಳು ಇದ್ರೆ, ಅದನ್ನು ಗೌರವಿಸೋಣ. ಒಂದು ದೇಶವನ್ನು ಒಡೆಯುವ ಸತ್ಯ ಇದ್ರೆ ಅದನ್ನು ಬಿಟ್ಟುಬಿಡೋಣ ಎಂದರು.