ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಲಕ್ಷ್ಮೀಶ ತೋಳ್ಪಾಡಿ ಮತ್ತು ಪ್ರೊ. ನಂದನ್ ಪ್ರಭು ಅವರು ಅತ್ಯುನ್ನತ ತತ್ವ: ದುರ್ಬಲ ಸಮಾಜ – ವಿರೋಧಾಭಾಸದ ಒಳನೋಟ ಕುರಿತು ಸಂವಾದ ನಡೆಸಿದರು.
ಲಕ್ಷ್ಮೀಶ ತೋಳ್ಪಾಡಿ ಅವರು ಮಾತನಾಡಿ, ವೇದೋಪನಿಷದ್ ಹುಟ್ಟಿದ್ದು ಮನಸ್ಸಿನಲ್ಲಿ, ಜನರ ಜಾಗೃತ ಅರಿವಿನಲ್ಲಿ. ದುರ್ಬಲ ಸಮಾಜದ ಒಡಲಿನ ಆಳದಿಂದ ಶ್ರದ್ಧೆ ಹುಟ್ಟಿತು. ಸಮಾಜ ದುರ್ಬಲವಾಗಿದ್ದಾಗ ತತ್ವತ ಔನ್ನತ್ಯ ಕೂಡ ಬರುತ್ತದೆ. ವಿರೋಧಾಭಾಸ ಎಂಬುದು ಎಲ್ಲಾ ಕಡೆಯೂ ಇರುತ್ತದೆ. ಆಲೋಚನೆಗಳು ವ್ಯವಸ್ಥಿವಾಗಿರಬೇಕು ಎಂದು ಬಯಸುತ್ತೇವೆ. ಆದರೆ ವ್ಯವಸ್ಥಿತ ಆಲೋಚನೆಗಳಂತೆ ಎಲ್ಲವೂ ಸಂಭವಿಸಲು ಸಾಧ್ಯವಿಲ್ಲ. ಬರೆದಿಟ್ಟ ತತ್ವಗಳಂತೆ ಸಮಾಜದ ನಿರ್ಮಾಣ ಅಸಾಧ್ಯ. ನಾವು ಕಲಿತದ್ದು ಸರಿಯಾಗಿದೆ ಎಂಬುದನ್ನು ನಾವು ಬಿಂಬಿಸುತ್ತೇವೆ. ಆದರೆ ಮುಂದೇನು ಎಂಬುದು ನಮಗೆ ತಿಳಿದಿರುವುದಿಲ್ಲ. ಮುಂದೆ ಏನೆಂದು ತಿಳಿಯದಾದಾಗ ನಾವು ವ್ಯವಸ್ಥೆಗಳನ್ನು ರೂಪಿಸಲು ಹೊರಡುತ್ತೇವೆ. ಆದರೆ ಯಾವ ನಮ್ಮ ವ್ಯವಸ್ಥೆಗಳೂ ಕೂಡ ಕೈಗೂಡುವುದಿಲ್ಲ ಎಂಬುದು ಸತ್ಯ ಎಂದರು.
ಉನ್ನತವಾದ ತತ್ವವನ್ನು ಸಾರ್ವತ್ರಿಕಗೊಳಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇಲ್ಲಿ ಮೂಲಭೂತ ವಿಪರ್ಯಾಸಗಳಿವೆ. ಅದೇನೆಂದರೆ ಇರುವಿಕೆಯ ಅರಿವಿನ ಕೊರತೆ. ಲೋಕ ಮೆಚ್ಚದಿದ್ದರೆ ನಾವು ಬದುಕ್ಕಿದ್ದೂ ಸತ್ತಂತೆ ಎಂದು ಭಾವಿಸುತ್ತೇವೆ. ಇಂತಹ ಭಾವನೆಯೇ ನಾವು ಸತ್ಯಕ್ಕೆ, ನಮ್ಮ ಇರುವಿಕೆಗೆ ಮಾಡುವ ದ್ರೋಹ. ನಮ್ಮನ್ನು ನಾವು ಅರಿತುಕೊಳ್ಳುವುದೇ ಅತ್ಯುನ್ನತವಾದ ತತ್ವ. ತೋರಿಕೆಯೇ ಇರುವಿಕೆಗೆ ಅಡ್ಡಿ. ತನ್ನ ಬಗ್ಗೆ ಬಿಟ್ಟು ಉಳಿದಲ್ಲರ ಬಗ್ಗೆ ಯೋಚಿಸುವ ವಿಚಿತ್ರ ಸ್ವಭಾವದವನು ಮನುಷ್ಯ. ನಾನು ಇಲ್ಲದೆ ಹೋದರೆ ಎಂಬ ಸಾವಿನ ಭಯ ಮನುಷ್ಯನನ್ನು ಕಾಡುತ್ತದೆ. ಭಯ ಇರುವುದರಿಂದಲೇ ಭಯೋತ್ಪಾದಕರು ಹುಟ್ಟಿಕೊಂಡಿದ್ದಾರೆ. ವ್ಯಕ್ತಿಯ ದೃಷ್ಟಿಕೋನವನ್ನು ಬದಲಾಯಿಸುವುದರಿಂದ ದುರ್ಬಲ ಸಮಾಜವನ್ನು ಸರಿಯಾದ ದಾರಿಗೆ ತರಬಹುದು. ಇರುವಿಕೆಯ ಅರಿವೆಯೇ ಸ್ವಾಭಾವಿಕ, ಸಾವಿನ ಭಯ ಅಸ್ವಾಭಾವಿಕ. ಇಂತಹ ಅಸ್ವಾಭಾವಿಕತೆಯನ್ನು ಇರುವಿಕೆಯ ಅರಿವಿನಿಂದ ಹೋಗಲಾಡಿಸಬೇಕು. ಇನ್ನೊಬ್ಬರೊಂದಿಗೆ ನಮ್ಮ ದೌರ್ಬಲ್ಯ ಹೇಳಿಕೊಳ್ಳುವುದು, ಇನ್ನೊಬ್ಬರ ಅನುಕಂಪ ಪಡೆಯುವುದು ಕೂಡ ಒಂದು ದೌರ್ಬಲ್ಯವಾಗಿರುತ್ತದೆ.
ನಾವು ಎಷ್ಟು ಬೇಕೋ ಅಷ್ಟು ಗಂಭೀರತೆಯಿಂದ ಇಲ್ಲ. ನಮ್ಮಲ್ಲಿ ಒಂದು ಪ್ರವೃತ್ತಿ ಇದೆ. ಅದುವೇ ಪರ್ಯಾಯ ಹುಡುವುದು. ಮೂಲಕ್ಕೆ ಪರ್ಯಾಯವಿಲ್ಲ. ಸತ್ಯ ನಮ್ಮಲ್ಲಿ ಇದೆ, ದೇವರು ನಮ್ಮಲ್ಲಿ ಇದ್ದಾನೆ. ಕೃಷ್ಣನೂ ನಾನು ಪ್ರತಿಯೊಬ್ಬರ ಹೃದಯದಲ್ಲಿದ್ದೇನೆ ಎಂದು ಹೇಳಿದ್ದಾನೆ. ಆದರೆ ನಾವದನ್ನು ನೋಡಲು ಬಯಸುವುದಿಲ್ಲ, ನಾವು ದೇಗುಲ ನಿರ್ಮಿಸುತ್ತೇವೆ. ನಮ್ಮಲ್ಲಿನ ದೇವರನ್ನು ಕಾಣದೆ ಬದಲಿ ಹುಡುಕುತ್ತೇವೆ. ಜೀವಂತವಾಗಿರುವ ಸಂಗತಿಗೆ ಜೀವಂತಿಕೆ ಇಲ್ಲದ ಬದಲಿಯನ್ನು ಕಟ್ಟುವುದು ಉತ್ತಮವಲ್ಲ. ಇದರಲ್ಲಿ ಮಾನವನ ಅನೇಕ ಸ್ವಾರ್ಥ ಹುದುಕಿದೆ. ದೇವಸ್ಥಾನಗಳು ಎಲ್ಲಾ ಕಾಲದಲ್ಲೂ ಇರಲಿಲ್ಲ. ನಾನು ದೇಗುಲ ವಿರೋಧಿಯಲ್ಲ. ನಮಗೆ ಬೇಕಾದುದು ಅನುಭವವೇ ಹೊರತು ಜಾತ್ರೆಯಲ್ಲ. ನಾವು ಎಲ್ಲಿಗೆ ಹೋಗುತ್ತಿದ್ದೇವೆ, ಜೀವನದಲ್ಲಿ ಏನು ಅಮೂಲ್ಯವಾದದನ್ನು ಪಡೆಯಬಹುದಿತ್ತು ಎಂಬ ಬಗ್ಗೆ ಯೋಚಿಸಬೇಕಾಗಿದೆ. ನಮ್ಮ ಬಗ್ಗೆ ಯೋಚಿಸುವ ಬದಲು ಉಳಿದವನ್ನು ತಂದು ಲೋಕ ಕಲ್ಯಾಣ ಮಾಡುತ್ತೇನೆ ಎಂದರೆ ಅದು ಸಾಧುವಲ್ಲ.