ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಸ್ಮಿತಾ ಪ್ರಕಾಶ್ ಮತ್ತು ಹರ್ಷ ಭಟ್ ಅವರು Changing Media Landscape ಕುರಿತು ಮಾತನಾಡಿದರು.
ಸ್ಮಿತಾ ಪ್ರಕಾಶ್ ಅವರು ಮಾತನಾಡಿ, 2003 ಅಥವಾ 2014 ಇರಲಿ ಮಾಧ್ಯಮಗಳಲ್ಲಿ ಅಷ್ಟೇನು ಬದಲಾವಣೆಗಳು ಆಗಿಲ್ಲ. ಸುದ್ದಿ ನೀಡುವುದನ್ನು ಅವುಗಳು ಮುಂದುವರೆಸಿವೆ. ಸಿದ್ಧಾಂತ ಆಧಾರಿತ ಮಾಧ್ಯಮಗಳು ಈಗ ಮುನ್ನಲೆಗೆ ಬರುತ್ತಿವೆ. ಖಾಸಗಿ, ಪ್ರಾದೇಶಿಕ ಮಾಧ್ಯಮಗಳ ಸಂಖ್ಯೆ ಏರುತ್ತಿದೆ. ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಭಾವಶಾಲಿಯಾಗುತ್ತಿದ್ದು, ಸಮಾಜದಲ್ಲಿ ಬದಲಾವಣೆ ತರಲು ಬಯಸುತ್ತಿರುವವರು ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳ ವರದಿಗೆ ಜನರ ಪ್ರತಿಕ್ರಿಯೆಯಲ್ಲಿ ಬದಲಾವಣೆಗಳು ಕಾಣುತ್ತಿವೆ. ಸುಡೋ ಮೀಡಿಯಾ, ಸೋನಿಯಾ ಮೀಡಿಯಾ, ಗೋಧಿ ಮೀಡಿಯಾ, ಭಕ್ತ್ ಮೀಡಿಯಾ ಹೀಗೆಲ್ಲಾ ಹೆಸರು ಬಳಸಿ ಮಾಧ್ಯಮಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ ಇಂತಹ ಟ್ರೋಲ್‌ಗಳಿಂದ ಯಾವುದೇ ಬದಲಾವಣೆ ಬರಲು ಸಾಧ್ಯವಿಲ್ಲ. ಮಾಧ್ಯಮಗಳು ಇವುಗಳ ಬಗ್ಗೆ ತಲೆಕಡೆಸಿಕೊಳ್ಳುವುದಿಲ್ಲ ಎಂದರು.
ಬೇರೆ ಬೇರೆ ರೀತಿಯಲ್ಲಿ ರಾಜಕೀಯ ಸಂಬಂಧ ಹೊಂದಿರುವ, ರಾಜಕೀಯ ನೇತಾರರನ್ನು ಮಾಲೀಕರಾಗಿ ಹೊಂದಿರುವ ಸಾಕಷ್ಟು ಮಾಧ್ಯಮಗಳಿವೆ. ಮಾಧ್ಯಮಗಳ ಮಾಲೀಕ ತನ್ನ ಹಿತಾಸಕ್ತಿಗಾಗಿ ಪತ್ರಿಕೋದ್ಯಮವನ್ನು ಬಳಸಿದರೆ ಅದು ದುರ್ಬಳಕೆಯಾಗುತ್ತದೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಮಾಧ್ಯಮಗಳು ಪ್ರಜಾಪ್ರಭುತ್ವವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಭಿನ್ನ ಭಿನ್ನ ಅನಿಸಿಕೆಗಳಿದ್ದರೂ ಒಟ್ಟಿಗೆ ಬದುಕುವುದೇ ಪ್ರಜಾಪ್ರಭುತ್ವದ ಮೂಲ ತತ್ವ. ಬೇರೆ ಅನಿಸಿಕೆ ಇದೆ ಎಂಬ ಮಾತ್ರಕ್ಕೆ ಒಬ್ಬರನ್ನು ತುಳಿಯಬಾರದು.
5-6 ಮಾಧ್ಯಮಗಳು ನರೇಟಿವ್ ಸೆಟ್ ಮಾಡಲು ಸಾಧ್ಯವಿಲ್ಲ. ಶೂನ್ಯ ಸಿದ್ಧಾಂತ ನಮ್ಮ ತತ್ವವಾಗಿರುತ್ತದೆ. ಸುದ್ದಿಯನ್ನಷ್ಟೇ ನೀಡಬೇಕು. ಸುದ್ದಿ ಒಂದು ಮತ್ತು ಫೋಟೋ ಇನ್ನೊಂದು ಕಥೆ ಹೇಳಿದರೆ ಜನ ಆ ಮಾಧ್ಯಮವನ್ನು ನಂಬುವುದಿಲ್ಲ.
ಯಾವುದೇ ಸುದ್ದಿಯನ್ನು ಸ್ವೀಕರಿಸುವಾಗ ಅದರ ಮೂಲ ಮತ್ತು ಸತ್ಯಾಸತ್ಯತೆಯನ್ನು ಅರಿತುಕೊಳ್ಳಬೇಕು. ಮೂಲ ತಿಳಿಯದೆ ಸುದ್ದಿಯನ್ನು ನಂಬುವುದು ಅಪಾಯಕಾರಿ ಬೆಳವಣಿಗೆ. ಎಲ್ಲವನ್ನೂ ಸ್ವೀಕರಿಸಲು ನಾವು ವಿಶಾಲ ಹೃದಯವನ್ನು ಹೊಂದಬೇಕು.
ಪ್ಯಾನಲ್ ಚರ್ಚೆಗಳು ಕರ್ಕಶ ಅಂತ ಅನಿಸಿದರೆ ಚಾನೆಲ್ ಚೇಂಜ್ ಮಾಡುವ ರಿಮೋಟ್ ಕಂಟ್ರೋಲ್ ಜನರ ಕೈಯಲ್ಲೇ ಇರುತ್ತದೆ. ನ್ಯೂಸ್ ರೂಂ ಒಳಗೆ ಆಂಕರ್ ಆದವರು ತನ್ನ ಸಂಸ್ಕೃತಿ (ತಿಲಕ, ಹಿಜಾಬ್) ಸಂಕೇತಗಳನ್ನು ಧರಿಸಲು ಬಯಸಿದರೆ ಅದಕ್ಕೆ ಅವಕಾಶ ನೀಡಬೇಕು. ಇಂತಹ ವಿಷಯದಲ್ಲಿ ಪ್ರತಿರೋಧಗಳು ಒಳ್ಳೆಯದಲ್ಲ.
ಮಾಧ್ಯಮದವರು ತಮ್ಮ ವೃತ್ತಿಗೆ ನಿಷ್ಠರಾಗಿರಬೇಕು. ಭಾರತದಲ್ಲಿ ಮಾಧ್ಯಮಗಳನ್ನು ಹೊಂದಲು ಯಾವುದೇ ನಿರ್ಬಂಧಗಳಿಲ್ಲ. ಅತಿ ಹೆಚ್ಚು ಸಂಖ್ಯೆ ಪ್ರಾದೇಶಿಕ, ರಾಷ್ಟ್ರೀಯ, ಭಾಷೆಯ ಚಾನೆಲ್ ನಮ್ಮ ದೇಶದಲ್ಲಿದೆ. ವೃದ್ಧಿಸುತ್ತಿರುವ ಮಾಧ್ಯಮ ವೃದ್ಧಿಸುತ್ತಿರುವ ಪ್ರಜಾಪ್ರಭುತ್ವದ ಸಂಕೇತವಾಗಿರುತ್ತದೆ.