ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 2 ರಲ್ಲಿ ರಾಷ್ಟ್ರಕವಿ ಗೋವಿಂದ ಪೈ – ಒಂದು ಸ್ಮರಣೆ ಸಂವಾದದಲ್ಲಿ ಡಾ. ವರದರಾಜ ಚಂದ್ರಗಿರಿ ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ ಅವರು ಮಾತನಾಡಿದರು.
ಡಾ. ವರದರಾಜ ಚಂದ್ರಗಿರಿ ಅವರು ಮಾತನಾಡುತ್ತಾ ರಾಷ್ಟ್ರಕವಿ ಗೋವಿಂದ ಪೈ ಅವರು ಬಹುಭಾಷಾ ಪಂಡಿತರಾಗಿದ್ದರು. ಕನ್ನಡ ಪದ್ಯ, ಗದ್ಯ ಸಹಿತ ಸಂಶೋಧನೆಯಲ್ಲಿ ಸಾಧನೆ ಮಾಡಿದ ವ್ಯಕ್ತಿತ್ವ ಗೋವಿಂದ ಪೈ ಅವರದ್ದು ಎಂದರು. ಆ ಕಾಲದ ಆಧುನೀಕರಣಕ್ಕೆ ತೆರೆದುಕೊಂಡ ಪ್ರದೇಶದ ದಕ್ಷಿಣ ಕನ್ನಡ ಜಿಲ್ಲೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿರದೆ, ಪ್ರಾಧ್ಯಾಪಕರಾಗಿರದೆ ಕನ್ನಡ ಪಂಡಿತರಾಗಿದ್ದವರು ಗೋವಿಂದ ಪೈ. ಮೌಲ್ಯವೇ ಸಾಹಿತ್ಯದ ಪರಿಭಾಷೆ. ಗೋವಿಂದ ಪೈ ಅವರ ಸಾಹಿತ್ಯದಲ್ಲಿ ಸ್ಥಳೀಯತೆ ಮತ್ತು ದೇಶಭಕ್ತಿಯ ಹರಿವಿತ್ತು. ಅವರ ಕೃತಿಯಲ್ಲೂ ತೌಳವ ಮಾತೆಯ ಉಲ್ಲೇಖವಿದೆ. ಕನ್ನಡ ಮಾತೆಯ ಹರಿವೂ ಅವರ ಕೃತಿಗಳಲ್ಲಿತ್ತು.
ಹೊಲೆಯ ಯಾರು? ಎಂಬ ಅವರು ಬರೆದ ಪದ್ಯವು ರಾಷ್ಟ್ರೀಯತೆಯ ಆಳವನ್ನು ಸೂಚಿಸುತ್ತದೆ. ಇವರು ಭಗವಾನ್ ಬುದ್ಧನ ಬಗೆಗೆ ಬರೆದ ಕೃತಿಗಳು ಅವರ ಧರ್ಮ ಮತ್ತು ಭಾರತೀಯತೆ ಆಧ್ಯಾತ್ಮದ ಹರಿವನ್ನು ಸೂಚಿಸುತ್ತದೆ ಎಂದರು. ಬುದ್ಧ ಸಾಹಿತ್ಯ ಮಾತ್ರವಲ್ಲದೆ ಕವಶಾಂತ ಋಷಿಯ ಬಗ್ಗೆಗಿನ ಉಲ್ಲೇಖ ಅವರ ವೇದಕಾಲದ ಬಗ್ಗೆಗೆ ಅವರಿಗಿದ್ದ ಆಳವನ್ನು ಸೂಚಿಸುತ್ತದೆ.
ಡಾ. ಪಾದೆಕಲ್ಲು ವಿಷ್ಣು ಭಟ್ ಅವರು ಮಾತನಾಡಿ, ಗೋವಿಂದ ಪೈ ಅವರಿದ್ದ ಕಾಲ ಭಾರತ ಅಖಂಡವಾಗಿದ್ದ ಕಾಲ, ಸ್ವಾತಂತ್ರ್ಯಪೂರ್ವದ ಕಾಲ, ಪುಸ್ತಕಗಳು ಮುದ್ರಿಸಲ್ಪಡುತ್ತಿದ್ದ ಕಾಲವಾಗಿತ್ತು.
ನಮ್ಮ ನರೆಯ ಭಾಷೆಗಳು ಮಾತ್ರವಲ್ಲದೆ ಗ್ರೀಕ್, ಲ್ಯಾಟಿನ್ ಮತ್ತು ಜಪಾನಿ ಭಾಷೆಯನ್ನು ಅಭ್ಯಸಿಸಿದ್ದರು. ಗೋವಿಂದ ಪೈ ಗುಜರಾತಿನ ನವಸಾರಿಯಲ್ಲಿದ್ದಾಗ ಅಲ್ಲಿನ ಕಚೇರಿಯಲ್ಲಿದ್ದಾಗ ಕನ್ನಡದಲ್ಲಿ ಪ್ರಾಸರಹಿತ ಪದ್ಯಗಳನ್ನು ಬರೆಯಬೇಕು ಎಂಬ ಹಂಬಲವನ್ನು ಹೊಂದಿದರು. ಆದಾದ ಮೇಲೆ ಪ್ರಥಮವಾಗಿ ಬರೆದ ಕೃತಿಯೇ ಹೊಲೆಯರು ಯಾರು ಎಂಬ ಪದ್ಯ. ಬುದ್ಧ, ಮಹಾವೀರರ ಕಾಲಮಾನ ಯಾವುದು, ಮಧ್ವಾಚಾರ್ಯರ ಕಾಲ ಯಾವುದು ಎಂಬುದರ ಬಗ್ಗೆ ಪ್ರಥಮವಾಗಿ ಅಧ್ಯಯನ ನಡೆಸಿ ಸಂಶೋಧನಾ ಲೇಖನಗಳನ್ನು ಬರೆದವರು ಗೋವಿಂದ ಪೈ. ಪೈಗಳ ಕಾವ್ಯ ಮಾರ್ಗದಲ್ಲೂ, ಸಂಶೋಧನೆಯ ಮಾರ್ಗದಲ್ಲೂ ಅಗ್ರಮಾನ್ಯರಾಗಿದ್ದಾರೆ, ಇಂದಿಗೂ ಗೋವಿಂದ ಪೈಗಳನ್ನು ಪೂಜ್ಯಭಾವದಿಂದ ಕಂಡು ಮುನ್ನಡೆಯಬೇಕಿದೆ. ಅಖಿಲ ಭಾರತೀಯ ದೃಷ್ಠಿಕೋನ ಹೊಂದಿದ್ದ ಇವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು.