ರಂಗಭೂಮಿ, ಪ್ರಯೋಗ ಮತ್ತು ಪ್ರಭಾವ

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ರಂಗಭೂಮಿ, ಪ್ರಯೋಗ ಮತ್ತು ಪ್ರಭಾವ ಕುರಿತು ಅಡ್ಡಂಡ ಕಾರ್ಯಪ್ಪ, ಬಸುಮ ಕೊಡಗು ಮತ್ತು  ಪ್ರಕಾಶ್ ಮಲ್ಪೆ ಅವರು ಸಂವಾದ ನಡೆಸಿದರು.

ಪ್ರಕಾಶ್ ಮಲ್ಪೆ ಅವರು ಮಾತನಾಡಿ,  ಕನ್ನಡ ರಂಗಭೂಮಿ ಎಷ್ಟು ಪ್ರಾಚೀನವಾದದ್ದು ಎಂಬುದಕ್ಕೆ ದಾಖಲೆಗಳೇ ಸಿಗುವುದಿಲ್ಲ. ಅಷ್ಟು ಪುರಾತನವಾದದ್ದು. ಇಂಥ ಅಪೂರ್ವ ಕ್ಷೇತ್ರದ ಬಗ್ಗೆ ನಾವಿವತ್ತು ಸಂವಾದ ಮಾಡಲಿದ್ದೇವೆ. ಸಾಹಿತ್ಯ ಅಥವಾ ನಾಟಕ ಕೃತಿ ಮತ್ತು ರಂಗಭೂಮಿ ಇವೆರಡೂ ಪೂರಕವೇ? ಎಂದರು.

ಬಸುಮ ಕೊಡಗು ಅವರು ಮಾತನಾಡಿ, ಸಾಹಿತ್ಯ ಕೃತಿ ಮತ್ತು ರಂಗಕೃತಿ ಬೇರೆಬೇರೆಯೇ. ರಂಗಕೃತಿ ಉದ್ದೇಶಪೂರ್ವಕವಾಗಿ ರಂಗಕ್ಕಾಗಿಯೇ ಬರೆದಿದ್ದು. ಆದ್ರೆ, ಸಾಮಾನ್ಯವಾಗಿ ಸಾಹಿತ್ಯ ಇಲ್ಲದೆ ರಂಗಕೃತಿಯಿಲ್ಲ ಎಂದರು.

ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ, ಕಾದಂಬರಿಯನ್ನು ರಂಗಕ್ಕೆ ತಂದ್ರೆ, ಅದು ರಂಗಕೃತಿಯಾಗುತ್ತದೆ. ಉದಾಹರಣೆಗೆ ಪರ್ವ ಕಾದಂಬರಿಯನ್ನು ರಂಗಕೃತಿ ಮಾಡಿದಾಗ ಅದು ಅಷ್ಟೇ ಪರಿಣಾಮಕಾರಿಯಾಯ್ತು. ಹಾಗಾಗಿ ಪೂರ್ಣಪ್ರಮಾಣದಲ್ಲಿ ಸಾಹಿತ್ಯ ಕೃತಿ ಮತ್ತು ರಂಗಕೃತಿ ಬೇರೆ ಬೇರೆಯೇ ಅಂತ ಹೇಳಲಾಗದು ಎಂದರು.

ರಂಗಭೂಮಿಯಲ್ಲಿ ತಂತ್ರ, ರಸಗ್ರಹಣ ಯಾವುದಕ್ಕೆ ಮಹತ್ವ? ಎಂಬ ಪ್ರಶ್ನೆಗೆ ಉತ್ತರಿಸಿದ ಅಡ್ಡಂಡ ಕಾರ್ಯಪ್ಪ ಅವರು, ಗುಬ್ಬಿ ವೀರಣ್ಣ ವಿವಿಧ ರಂಗತಂತ್ರ ಪ್ರಯೋಗಿಸಿದ್ರು. ಆಧುನಿಕ ರಂಗಭೂಮಿಯಲ್ಲಿ, ಮೂಲ ಲೇಖಕನ ಹೆಸರನ್ನೇ ಕಡೆಗಣಿಸಿ, ರಂಗಪ್ರಯೋಗ ಮಾಡ್ತಾರೆ. ಅಯೋಧ್ಯಾಕಾಂಡ ನಾಟಕ. ಮಂಥರೆಯನ್ನು ಹೀರೋಯಿನ್ ಮಾಡಿದ್ರು. ಈಗ ಅರಣ್ಯಕಾಂಡ ಮಾಡ್ತಿದ್ದಾರೆ. ಅದರಲ್ಲಿ ಶೂರ್ಪನಖಿ ಹೀರೋಯಿನ್. ಅಸ್ಥಿರಗೊಳಿಸಿ, ಪಲ್ಲಟಗೊಳಿಸಿ, ಗೊಂದಲಗೊಳಿಸುವುದು ನಡೆಯುತ್ತಿದೆ. ಇದು ಚರ್ಚೆಯಾಗಬೇಕು. ಉದ್ದೇಶ ಅಂತ ಇರ್ತದೆ, ಯಾವುದೇ ಕೆಲಸಕ್ಕೆ. ಉದ್ದೇಶಕ್ಕೆ ಪೂರಕವಾಗಿ, ಯಾವುದು ಮುಖ್ಯ ಅಂತ ನಿರ್ಧರಿಸಬೇಕು ಎಂದರು.

ಲೇಖಕ ಬರೆದ ಕೃತಿಯನ್ನು ಅಪಾರ್ಥ ಮಾಡಿಕೊಳ್ತಾರೆ. ಉದಾ: ದ.ರಾ ಬೇಂದ್ರೆಯವರ ನೀ ಹೀಂಗ ನೋಡಬ್ಯಾಡ ನನ್ನ. ಈ ಬಗೆಗಿನ ಅಭಿಪ್ರಾಯವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಬಸುಮ ಕೊಡಗು ಅವರು, ಅಧ್ಯಯನದ ಕೊರತೆ. ರಂಗಭೂಮಿಯ ಒಟ್ಟು ಕಲ್ಪನೆ ಈ ರೀತಿ ಸಮಸ್ಯೆಯಾಗುತ್ತದೆ. ಸ್ಕ್ರಿಪ್ಟ್ ವರ್ಕ್‌ಗೆ ಅಧ್ಯಯನ ಅಗತ್ಯ ಪ್ರಚಾರದ ಹಂಬಲ ಇರುವ ಕೆಲವರು ಈ ರೀತಿ ಮಾಡಿಯಾರು. ಆದ್ರೆ, ಎಲ್ಲರೂ ಹಾಗಲ್ಲ ಎಂದರು.

ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ, ಕೆಲವರು ಅರ್ಥ ಆಗಿಯೂ ಉದ್ದೇಶಪೂರ್ವಕವಾಗಿ ವಿಕೃತಿಗೊಳಿಸಿ ಮಾಡುವವರಿದ್ದಾರೆ. ಪೂರ್ತಿ ಅರ್ಥ ಮಾಡಿಕೊಂಡು, ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಕೆಲವರು ಮಾಡುತ್ತಾರೆ ಎಂದರು.

ರಂಗಭೂಮಿಗೆ ಯುವಜನಾಂಗವನ್ನು ತನ್ನತ್ತ ಸೆಳೆಯಲು ಸಾಧ್ಯವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಡ್ಡಂಡ ಕಾರ್ಯಪ್ಪ ಅವರು, ಎಂಜಿನಿಯರಿಂಗ್, ಮೆಡಿಕಲ್ ಸ್ಟೂಡೆಂಟ್ಸ್ ಬರ್ತಿದ್ದಾರೆ ಇವತ್ತು. ಫ್ರಸ್ಟ್ರೇಶನ್ ನಿಂದ ಹೊರಬರಲು. ‘ಪ್ರಯೋಗ’ ಎಂಬ ಪದ ಕೇವಲ ರಂಗಭೂಮಿಯಲ್ಲಿ ಮಾತ್ರ ಇರುವುದು ಎಂದರು. ಬೀದಿ ನಾಟಕದ ಬಗ್ಗೆಯೂ ಮಾತನಾಡಿದ ಅವರು, ಬೀದಿನಾಟಕ ಬಂದದ್ದು, ವಿಚಾರವನ್ನು ನೇರ ಹೇಳುವುದಕ್ಕೆ. ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಮಾಡಲು. ಆದ್ರೆ, ಸೆಟ್, ಲೈಟ್, ಮೇಕಪ್ ಇಲ್ದೆ ಜನರಿಗೆ ಮೆಚ್ಚುಗೆ ಆಗುತ್ತೆ. ಒಳ್ಳೆಯ ಆಲೋಚನೆಯಲ್ಲಿ ಹಿಡಿದಿಟ್ಟುಕೊಳ್ಳುವುದು ಅದು ಶಕ್ತಿ ಎಂದರು.

ಥಿಯೇಟರ್ ಎಂಬುದೂ ಒಂದು ಥೆರಪಿ. ಈಗ ತಲೆಹಣ್ಣಾದವರು ಮಾತ್ರ ಅಲ್ಲ ಅರುವತ್ತು ಶೇಕಡ ಯುವಕರು ಬರ್ತಿದ್ದಾರೆ ಎಂದು ಬಸುವ ಕೊಡಗು ಹೇಳಿದರು.

ಒಬ್ಬ ರಂಗಕರ್ಮಿ ಯೋಗ್ಯ ಎನಿಸಿಕೊಳ್ಳಲು ಆತ ಎಲ್ಲಾ ‘ಇಸಮ್’ಗಳಿಂದ ದೂರ ಇರಬೇಕು. ರಂಗಭೂಮಿ ಎಂಬುದು ಅನುಭವಿಸಿ ಪ್ರದರ್ಶಿಸುವ ಕಲೆ. ಯೋಚನೆಗಳು ಮಾಗುವುದು ಅನುಭವಗಳ ಹಿನ್ನೆಲಯಲ್ಲಿ. ಸಿದ್ಧಾಂತಗಳು ಅಡ್ಡ ಬರಬಾರದು ಎಂದರು.

ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ, ಗಿರೀಶ್ ಕಾರ್ನಾಡ್ ತುಘಲಕ್ ನಾಟಕ. ಇತಿಹಾಸಕ್ಕೆ ನಿಷ್ಟನಾಗಿ ಬರೀಬೇಕು. ಕೃತಿಯೇ ಬೇರೆ ಎಂದರು.

ರಂಗಭೂಮಿ ಕುರಿತಾಗಿ ಮಾತನಾಡಿದ ಅವರು, ಕಲೆ ಕಲೆಗಾಗಿ ಅನ್ನುವುದು ಬೇರೆ. ರಂಗಭೂಮಿ ಕೇವಲ ಮನೋರಂಜನಾ ಉದ್ದೇಶಕ್ಕೆ ಸೀಮಿತವಾಗಬಾರದು. ಸಾಮಾಜಿಕ ಬದಲಾವಣೆಯ ಮಾಧ್ಯಮ ಆಗ್ಬೇಕು. ಅದು ರಂಗಭೂಮಿಯ ಸಾರ್ಥಕತೆ. ರಂಗಭೂಮಿಯನ್ನು ಒಳಗೊಂಡ ಎಲ್ಲಾ ಪ್ರಕಾರಗಳೂ ಈ ರೀತಿ ಇರಬೇಕು. ನಾಟಕ ಆಗಲಿ, ಸಾಹಿತ್ಯ ಆಗಲಿ ಕೇವಲ ಒಂದನ್ನು ನೋಡಿ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದರು.

ಕೃತಿಯ ವಿಕೃತಿಯನ್ನು ಹೇಗೆ ತಪ್ಪಿಸುವುದು? ಎಂಬುದನ್ನು ವಿವರಿಸಿ, ಇದನ್ನು ನಾವು ಧಿಕ್ಕರಿಸಬೇಕು. ರಂಗಭೂಮಿಯಾಗಲಿ ಯಾವುದೇ ಆಗಲಿ ಹೊಸತನದ ಪ್ರಯೋಗಗಳ ನಡುವೆ ಬಲಿಪಶುವಾಗುತ್ತಿರುವುದು ಯಾರು? ಎಂದರೆ ನೇರ ಹೊಡೆತ ವಿದ್ಯಾರ್ಥಿಗಳಿಗೆ. ಬಡವಾಗುವುದು ನಮ್ಮ ದೇಶ ಎಂದರು.