ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ

ಮಂಗಳೂರು ಲಿಟ್‌ಫೆಸ್ಟ್‌ನ Audi 1 ರಲ್ಲಿ ಎರಡನೇ ಗೋಷ್ಠಿಯು ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಕುರಿತಾಗಿ ನಡೆಯಿತು.  ಇದನ್ನು ಅರವಿಂದ ಚೊಕ್ಕಾಡಿ ಮತ್ತು ಶೈಲೇಶ್‌ ಕುಲಕರ್ಣಿ ಅವರು ನಡೆಸಿಕೊಟ್ಟರು.

ಅರವಿಂದ್‌ ಚೊಕ್ಕಾಡಿ ಅವರು ಮಾತನಾಡಿ, ರಾಷ್ಟ್ರೀಯತೆಯ ವಿಷಯ ಬಂದರೆ ರಾಜಕೀಯ ಬಂದೇ ಬರುತ್ತದೆ. ರಾಜಕೀಯ ಬಾರದ ಸಂಗತಿ ಜಗತ್ತಿನಲ್ಲಿ ಇಲ್ಲ. ಆದರೆ ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯ. ಆಧುನಿಕ ಜಗತ್ತು ಬೆಳೆದು ಬಂದ ರೀತಿಯಲ್ಲಿ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆ, ಬೇರೆ ಬೇರೆ ದೇಶಗಳ ನಡುವೆ ಕೊಡುಕೊಳ್ಳುವಿಕೆ ನಡೆಯುತ್ತಿದೆ. ಇವೆಲ್ಲ ಅಂತಾರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುತ್ತದೆ. ಸ್ಥಳೀಯತೆ ಎಂಬುದು ಸಿವಿಕ್‌ ಸೊಸೈಟಿ ಅಲ್ಲ. ಇಲ್ಲಿ ರಾಜಕೀಯ ಕಾನೂನಿಗಿಂತ ಸಾಂಸ್ಕೃತಿ ಪ್ರಜ್ಞೆ ಬಲಿಷ್ಠವಾಗಿರುತ್ತದೆ. ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ಸಮುದಾಯ ಮಹತ್ವದ್ದು, ಇಲ್ಲಿ ರಾಜಕೀಯಕ್ಕಿಂತ ಧಾರ್ಮಿಕ, ಸಾಂಸ್ಕೃತಿ ಪ್ರಜ್ಞೆ ಹೆಚ್ಚು. ಅಭಿವೃದ್ಧಿಯಲ್ಲಿ ಸಾಂಸ್ಕೃತಿಕ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳದೇ ಹೋದರೆ ರಾಜಕೀಯ ಲೆಕ್ಕಚಾರ ಸಾಧ್ಯವಿಲ್ಲ.

ರಾಷ್ಟ್ರೀಯತೆ ಪ್ರಾದೇಶಿಕತೆಗಿಂತ ಮುಖ್ಯ. ಪ್ರಾದೇಶಿಕತೆ ಅಸ್ತಿತ್ವ ರಾಷ್ಟ್ರೀಯತೆಯಾಗಿರುತ್ತದೆ. ಪ್ರಾದೇಶಿಕತೆಗೆ ಭದ್ರತೆ ರಾಷ್ಟ್ರೀಯತೆಯಿಂದ ಬರುತ್ತದೆ. ರಾಷ್ಟ್ರೀಯತೆಯ ಕಾರಣಕ್ಕೆ ಸಂವಿಧಾನ ರಚನೆಯಾಗಿದೆ. ಪ್ರಾದೇಶಿಕತೆಗೆ ಸಾಂಸ್ಕೃತಿಕ ಮೂಲ ಇದೆ. ಭಾಷೆಯನ್ನು ಬಿಟ್ಟರೆ ಮೈಸೂರು ಮತ್ತು ಮಂಗಳೂರಿಗೆ ಸಾಕಷ್ಟು ಸಾಮ್ಯತೆಗಳಿವೆ. ಭಾರತ ಒಂದು ಒಕ್ಕೂಟ ಎಂಬುದು ಸಂವಿಧಾನದ ಪೀಠಿಕೆಯಲ್ಲೇ ಇದೆ.

ಭಾಷೆ ಎಂಬುದು ಪ್ರಧಾನವಾದ ಒಂದುಗೂಡಿಸುವ ಶಕ್ತಿ.  ಭಾಷೆಯ ಮೇಲೆ ದೇಶ ವಿಂಗಡನೆಯನ್ನು ಸಂವಿಧಾನ ಹೇಳಿಲ್ಲ. ಆಡಳಿತಾತ್ಮಕವಾಗಿ ರಾಜ್ಯಗಳನ್ನು ವಿಂಗಡಿಸುವ ಅಧಿಕಾರವನ್ನು ಅದು ಸಂಸತ್ತಿಗೆ ನೀಡಿತು. ಆದರೆ ಭಾಷವಾರು ಒತ್ತಡ, ಚಳುವಳಿಗಳಿಂದ ಭಾಷಾವಾರು ಪ್ರಾಂತ್ಯ ಸೃಷ್ಟಿಯಾಯಿತು.

ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳು ಪ್ರತಿಸ್ಪರ್ಧಿಗಳು ಎಂಬುದು ತಪ್ಪು. ಇದು ಸಾಮಾನ್ಯ ತಿಳುವಳಿಕೆ ಸಮಸ್ಯೆಯಿಂದ ಉಂಟಾದ ಸಮಸ್ಯೆ.  ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳು ಒಂದಕ್ಕೊಂದು ಪೂರಕವಾಗಿವೆ. ಪ್ರತಿಯೊಂದು ಅಸ್ತಿತ್ವದಲ್ಲೂ ವೈರುಧ್ಯಗಳು ಇದ್ದೇ ಇರುತ್ತದೆ. ಸಮಗ್ರವಾಗಿ ನೋಡಿದಾಗ ರಾಷ್ಟ್ರೀಯತೆ ಪ್ರಾದೇಶಿಕತೆಯನ್ನು ಪ್ರತಿನಿಧಿಸುತ್ತದೆ ಎಂದರು.