ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಅರವಿಂದನ್ ನೀಲಕಂದನ್ ಮತ್ತು ಶ್ರೀರಾಜ್ ಗುಡಿ ಅವರು ʼಹಿಂದುತ್ವʼ ಪುಸ್ತಕ ಕುರಿತುವಿಮರ್ಶೆ ನಡೆಸಿದರು.
ಅರವಿಂದನ್ ನೀಲಕಂದನ್ ಅವರು ಮಾತನಾಡಿ, ರಾಮ ಜನ್ಮಭೂಮಿ ಹೋರಾಟದ ಬಗ್ಗೆ ಮಾಧ್ಯಮ ನೀಡಿದ ಚಿತ್ರಣ ಮತು ಸತ್ಯ ಬೇರೆ ಬೇರೆಯಾಗಿದೆ. ಬಾಬ್ರಿ ಮಸೀದಿ ಧ್ವಂಸದ ವೇಳೆ ಅಯೋಧ್ಯೆಯಲ್ಲಿ ಸುಮಾರು ಒಂದು ಲಕ್ಷ ಕರಸೇವಕರು ಸೇರಿದ್ದರು. ಅವರು ತಮ್ಮವರ ನರಮೇಧವನ್ನು ಕಂಡು ಆಕ್ರೋಶಿತರಾಗಿದ್ದವರು. ಅವರು ಕೇವಲ ಬಾಬ್ರಿಯ ಡೋಮ್‌ಗಳನ್ನು ಧ್ವಂಸ ಮಾಡಿದರು. ಅಲ್ಲೇ ಪಕ್ಕದಲ್ಲಿದ್ದ ಕಾರ್ಯನಿರತವಾಗಿದ್ದ ಮಸೀದಿಗೆ ಯಾವ ಹಾನಿಯನ್ನೂ ಮಾಡಿಲ್ಲ. ಅಯೋಧ್ಯೆಯ ಉಳಿದ ಮುಸ್ಲಿಂ ಜಾಗಗಳನ್ನು ಮುಟ್ಟಲು ಹೋಗಲಿಲ್ಲ. ಆಕ್ರೋಶವನ್ನು ನಿಯಂತ್ರಣದಲ್ಲಿಟ್ಟುಕೊಂಡು ಅವರು ತಮ್ಮ ಗುರಿಯನ್ನು ಮಾತ್ರ ನಾಶ ಮಾಡಿದರು. ಆದರೆ ಮಾಧ್ಯಮ ಅವರನ್ನು ಗಲಭೇಕೋರರು ಎಂದು ಹಣೆಪಟ್ಟಿ ಕಟ್ಟಿತು.
ಸ್ವಾಮಿ ವಿವೇಕಾನಂದ, ಗಾಂಧೀಜಿ, ನೆಹರೂ ಮತ್ತು ನರೇಂದ್ರ ಮೋದಿ ಅವರ ಬಗೆಗಿನ ವಿಷಯಗಳನ್ನು ಹಿಂದುತ್ವ ಪುಸ್ತಕ ಒಳಗೊಂಡಿದೆ. ಹಿಂದುತ್ವವನ್ನು ಆಳವಾಗಿ ಅರಿಯುವ ನಿಟ್ಟಿನಲ್ಲಿ ಪುಸ್ತಕ ಬರೆದಿದ್ದೇನೆ. ಹಿಂದುತ್ವವೆಂದರೆ ರಾಜಕೀಯ ತತ್ವಶಾಸ್ತ್ರವಲ್ಲ, ಅದು ಅರಿವಿನ ಪ್ರಕ್ರಿಯೆ, ರಾಷ್ಟ್ರ ನಿರ್ಮಾಣದ ಪ್ರಕ್ರಿಯೆ. ಚೀನಾದ ದಾಳಿ ಬಳಿಕ ಅನೇಕರು ನೆಹರೂವನ್ನು ವಿರೋಧಿಸಿದರು. ಆದರೆ ಗೋಲ್ವಾಲ್ಕರ್ ಅವರು ಹೊರಗಿನ ಶತ್ರು ದಾಳಿ ಮಾಡಿದಾಗ ದೇಶ ಒಗ್ಗಟ್ಟಾಗುವುದನ್ನು ಪ್ರತಿಪಾದಿಸಿದರು. ಇದು ಹಿಂದುತ್ವ. ಹಿಂದೂ ರಾಷ್ಟ್ರ ಎಂಬುದು ರಾಜಕೀಯ ಗುರಿ ಅಲ್ಲ, ಅದು ಜನಮಾನಸದ ಇಚ್ಛೆ. ಹಿಂದುತ್ವ ಪಿತೃಪ್ರಧಾನ ವ್ಯವಸ್ಥೆಗೆ ಅಂಟಿಕೊಂಡಿದೆ ಎಂದು ಹೇಳಲಾಗುತ್ತದೆ. ಆದರೆ ಬಾಲ್ಯ ವಿವಾಹದ ವಿರುದ್ಧ ಹೋರಾಡಿದವರು ಹಿಂದುತ್ವವಾದಿಗಳು.
ಭಾರತೀಯರು ಮೂರ್ತಿ ಪೂಜಕರಾಗಿರುವುದರಿಂದ ಅವರು ಮೂಲತಃ ಭ್ರಷ್ಟರು ಎಂದು ಬ್ರಿಟಿಷರು ನಮ್ಮ ತಲೆಗೆ ತುಂಬಿದ್ದರು. ಆದರೆ ನರೇಂದ್ರ ಮೋದಿ ಅದನ್ನು ಸುಳ್ಳು ಮಾಡಿ ತೋರಿಸಿದ್ದಾರೆ. ಭಾರತ ಒಂದು ರಾಷ್ಟ್ರ. ಅದು ಕೇವಲ ತನಗಾಗಿ ಅಲ್ಲ, ವಿಶ್ವಕ್ಕಾಗಿ ಬದುಕುತ್ತದೆ. ಭಾರತದ ಆರೋಗ್ಯ ಮತ್ತು ಸಮೃದ್ಧವಾಗಿದ್ದರೆ ಇಡೀ ವಿಶ್ವಕ್ಕೇ ಶುಭಕರ ಎಂದರು.