ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತಿಯ ಎರಡನೇ ದಿನದ ಎರಡನೇ ಗೋಷ್ಠಿ ‘ ಕನ್ನಡಿಗರ ಕಣ್ಣಲ್ಲಿ ಸಾಂಸ್ಕೃತಿಕ ಭಾರತ’ ಎಂಬ ವಿಷಯದ ಮೇಲೆ ನಡೆಯಿತು. ಈ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಜೆ.ಬಿ ಹರೀಶ, ಡಾ. ನಿರಂಜನ ವಾನಳ್ಳಿ ಮತ್ತು ಜಿ.ಆರ್ ಸಂತೋಷ್ ಭಾಗವಹಿಸಿದರು.
ಡಾ. ಜೆ.ಬಿ ಹರೀಶ ಮಾತನಾಡಿ, ಆಧ್ಯಾತ್ಮಿಕ ಮತ್ತು ಲೌಕಿಕತೆಯನ್ನು ಸಮಾನವಾಗಿ ಸ್ವೀಕರಿಸುವುದು ಸಾಂಸ್ಕೃತಿಕ ಭಾರತ. ಸಂಸ್ಕೃತಿ, ನಾಗರಿಕತೆ ಅನ್ನುವುದನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಿಲ್ಲ. ಭಾರತೀಯ ಕಲೆ, ಸಂಸ್ಕೃತಿ, ಕುಟುಂಬ ವ್ಯವಸ್ಥೆಯ ದೀರ್ಘತೆ, ಭಾರತೀಯ ಸಂಸ್ಕೃತಿಯ ಮೌಲ್ಯಗಳು ಇವೆಲ್ಲವೂ ಮೆರುಗನ್ನು ಸೃಷ್ಟಿಸಿದೆ. ಹಾಗೆಯೇ ತಾಂಜೇನಿಯರ ದೃಷ್ಟಿಯಲ್ಲಿ ಭಾರತ ದೇಶವು ವೈಭವಯುತವಾದ ರಾಷ್ಟ್ರ. ಹಾಗೆಯೇ ಭಾರತ ಬುದ್ಧನ ನಾಡು ಎಂಬ ಕಲ್ಪನೆಯೂ ಅವರಲ್ಲಿದೆ ಎಂದರು.
ಸಂಸ್ಕೃತಿ ಮತ್ತು ನಾಗರಿಕತೆ ಬೇರೆ ಬೇರೆಯಾಗಿದೆ. ಸಂಸ್ಕೃತಿ ಅಮೂರ್ತವಾಗಿರುತ್ತದೆ ಆದರೆ ಅನುಭವಕ್ಕೆ ಸಿಗುತ್ತದೆ. ಇಲ್ಲಿಯ ತನಕ ಉಳಿದು ಬಂದಿರುವುದು ಸಂಸ್ಕೃತಿ. ವಿಯೆಟ್ನಾಂ ಜನರಿಗೆ ಭಾರತದ ಬಗ್ಗೆ ಅತೀವ ಗೌರವ ಮತ್ತು ಪ್ರೀತಿ ಈದೆ. ಇದಕ್ಕೆ ಕಾರಣ ಭಾರತ ಬುದ್ಧನ ನಾಡು ಎಂಬುದು. ಭಾರತದ ಆರಾಧನಾ ಪದ್ಧತಿ ಮತ್ತು ವಿಯೆಟ್ನಾಂ ಆರಾಧನಾ ಪದ್ಧತಿ ನಡುವೆ ಸಾಮ್ಯತೆ ಇದೆ. ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತಾರೆ. ದೇವೆ ಆರಾಧನೆಯಂತಹ ಪದ್ಧತಿ, ಪಿತೃ ತರ್ಪಣ ಪದ್ಧತಿ ನಡೆಯುತ್ತದೆ. ಅಲ್ಲಿ ಬೌದ್ಧ ಧರ್ಮ, ಕನ್‌ಫ್ಯೂಶಿಯಸ್ ಧರ್ಮ, ಟಾವೋ ಮತ್ತು ಇತರ ಜಾನಪದ ಧರ್ಮಗಳಿವೆ. ಭಾರತದ ಕೂಡು ಕುಟುಂಬದ ಬಗ್ಗೆ ಅವರಿಗೆ ಆಶ್ಚರ್ಯದ ಭಾವನೆ ಇದೆ. ನಾಯಿಯನ್ನೂ ತಿನ್ನುವಂತಹ ಅಪ್ಪಟ ಮಾಂಸಹಾರಿಗಳು. 40 ವರ್ಷಗಳ ವಿದೇಶಿಗರ ನಿರಂತರ ಆಕ್ರಮಣದ ಕಾರಣ ಅವರಲ್ಲಿ ಅಪರಿಮಿತವಾದ ದೇಶಪ್ರೇಮ ಇದೆ. ತಮ್ಮ ದೇಶದ ಹೆಸರನ್ನು ಹೇಳುವಾಗ ಎದೆಮಟ್ಟುವ ಅಭ್ಯಾಸ ಅವರಿಗೆ ಇದೆ. ಪುರುಷರ ಯುದ್ಧದಲ್ಲಿ ಭಾಗಿಗಳಾಗುವ ಕಾರಣ ಅಲ್ಲಿನ ಮಹಿಳೆಯರು ಕುಟುಂಬದ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳುತ್ತಾರೆ. ಹೆಚ್ಚು ದೈಹಿಕ ಸಾಮರ್ಥ್ಯ ಅಧಿಕವಿರುವ ಕೆಲಸಗಳನ್ನು ಮಾಡುತ್ತಾರೆ. ಅವಲೋಕಿತೇಶ್ವರ ವಿಯೆಟ್ನಾಂನಲ್ಲೂ ಇದೆ. ಆಧ್ಯಾತ್ಮಿಕ ಮತ್ತು ಲೌಕಿಕ ಜೀವನವನ್ನು ಸಮಾನವಾಗಿ ಸ್ವೀಕರಿಸುವುದು ಸಾಂಸ್ಕೃತಿಕ ಭಾರತ.
ಡಾ. ನಿರಂಜನ ವಾನಳ್ಳಿ ಮಾತನಾಡಿ, ಸಾಂಸ್ಕೃತಿಕ ಭಾರತ ತಜಕಿಸ್ತಾನ್ ಮತ್ತು ಒಮಾನ್ ದೇಶದ ಪ್ರಜೆಗಳ ಕಣ್ಣುಗಳಲ್ಲಿ ಹಿಂದುಸ್ಥಾನಿ ದೇಶ ಎಂದೇ ಪ್ರಸಿದ್ಧವಾಗಿದೆ. ಭಾರತ ದೇಶದ ಮೇಲೆ ಪ್ರೀತಿ, ಜೀವನದಲ್ಲಿ ಒಂದು ಭಾರಿಯಾದರು ಭಾರತಕ್ಕೆ ಹೋಗಬೇಕು, ಆಗ್ರಾದಲ್ಲಿರುವ ತಾಜ್ ಮಹಲ್ ಅನ್ನು ಒಮ್ಮೆಯಾದರು ಸ್ಪರ್ಶಿಸಬೇಕು, ಬಾಲಿವುಡ್ ಸಿನಿಮಾ ನೋಡಬೇಕು ಎಂಬ ಕುತೂಹಲ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ, ಕಲೆ, ಸಂಸ್ಕೃತಿಯನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ತಜಕೀಸ್ಥಾನದಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಅಲ್ಲಿನ ಜನರಿಗೆ ಭಾರತದ ಬಗ್ಗೆ ಅತೀವ ಪ್ರೀತಿ ಇದೆ. ಅಲ್ಲಿ ಒಂದು ಸಾವಿರ ಭಾರತೀಯರು ಮೆಡಿಕಲ್ ಕಲಿಯುತ್ತಿದ್ದಾರೆ. ಇಸ್ಲಾಂ ರಾಷ್ಟ್ರವಾದರೂ ಅಲ್ಲಿನ ಜನ ಉದಾರವಾದಿಗಳು. ಅಲ್ಲಿ ಗಟ್ಟ ಬಿಟ್ಟರೆ ತೆರಿಗೆ ಕಟ್ಟಬೇಕಾಗುತ್ತದೆ. ಗಡ್ಡ ಬಿಟ್ಟವರ ಮೇಲೆ ಅಲ್ಲಿನ ರಾಜನ ಜನರು ಕಣ್ಣಿಟ್ಟಿರುತ್ತಾರೆ. ಧರ್ಮವನ್ನು ಸಾರ್ವಜನಿಕವಾಗಿ ಅಲ್ಲಿ ಪ್ರಚಾರ ಮಾಡುವಂತೆ ಇಲ್ಲ. ಅದೇನಿದ್ದರೂ ಮನೆಯೊಳಗಡೆಯೇ ಇರಬೇಕು. ಕಮ್ಯೂನಿಸ್ಟ್ ಪ್ರಭಾವ ಇದಕ್ಕೆ ಕಾರಣ. ಬಾಲಿವುಡ್ ಸಿನಿಮಾ ಅವರಿಗೆ ಅಚ್ಚುಮೆಚ್ಚು. ಭಾರತವನ್ನು ಅವರು ಹಿಂದೂಸ್ಥಾನ ಎಂದು ಕರೆಯುತ್ತಾರೆ. ಇಲ್ಲಿನ ರಾಜಧಾನಿ ದಶಾಂಬೆಯಲ್ಲಿ ಸ್ವಾಮಿ ವಿವೇಕಾನಂದ ಕೇಂದ್ರದ ಮೂಲಕ ಭಾರತ ಸಂಸ್ಕೃತಿ ಪರಿಚಯಿಸುವ ಕಾರ್ಯ ಮಾಡಿದ್ದೇವೆ ಎಂದರು.
ಜಿ.ಆರ್ ಸಂತೋಷ್ ಮಾತನಾಡಿ, ಭಾರತ ಸಂಸ್ಕೃತಿ ಎಂಬುದು ಆನಂದದ ಅಭಿವ್ಯಕ್ತಿ. ಕುಟುಂಬ ಪದ್ಧತಿ, ನಿಲುವು ಹಾಗೆಯೇ ತಮ್ಮ ಸಂಸ್ಕೃತಿಯ ಕಂಪನ್ನು ಮುಂದಿನ ಪೀಳಿಗೆಗಳಿಗೆ ಹೇಗೆ ಹಂಚುತ್ತಾರೆ ಇವೆಲ್ಲವೂ ತಾಂಜೇನಿಯದವರಿಗೆ ಕುತೂಹಲವನ್ನು ಉಂಟುಮಾಡಿತು. ಆ ದೇಶದಲ್ಲಿ ಬೀದಿಯುದ್ದಕ್ಕೂ ಭಾರತೀಯ ದೇಶದ ದೇವಾಲಯವನ್ನು ಕಾಣಬಹುದು, ಈ ದೇವಾಲಯವು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪ್ರಸಾರ ನಡೆಸುವ ಕಾರ್ಯವನ್ನು ನಡೆಸುತ್ತಿದೆ ಎಂದರು.
ತಾಂಜೇನಿಯಾ ಪೂರ್ವ ಆಫ್ರಿಕಾ ದೇಶ. 300 ವರ್ಷಗಳ ಹಿಂದೆಯೇ ಅಲ್ಲಿಗೆ ಭಾರತೀಯರ ಪ್ರವೇಶ ನಡೆದಿದೆ. ವ್ಯಾಪಾರಿಗಳಾಗಿ ಭಾರತೀಯರು ಅಲ್ಲಿಗೆ ತೆರಳಿ ತಮ್ಮ ಸಂಸ್ಕೃತಿಯನ್ನು ಪಸರಿಸಿದ್ದಾರೆ. ಅಲ್ಲಿ ಅನೇಕ ದೇವಾಲಯಗಳ ಸ್ಥಾಪನೆಯೂ ಆಗಿದೆ. 100 ವರ್ಷಗಳ ಹಿಂದೆ ಅಲ್ಲಿ ಸ್ವಾಮಿ ನಾರಾಯಣ ದೇಗುಲ ನಿರ್ಮಾಣವಾಗಿದೆ. ದೇಗುಲ ಅಲ್ಲಿ ಸಂಸ್ಕೃತಿ ಹರಡುವ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಹಿಂದಿ, ಯೋಗ ತರಬೇತಿ ನೀಡುತ್ತಿದೆ. ಇಲ್ಲಿನ ಜನರಿಗೆ ಭಾರತದ ಸಿನಿಮಾದ ಬಗ್ಗೆ ಹೆಚ್ಚಿನ ಒಲವಿದೆ. ಭಾರತೀಯರ ಬಗ್ಗೆ ಪ್ರೀತಿ ಇದೆ. ಗಾಂಧೀಜಿಯ ಪ್ರತಿಮೆ ಭಾರತದ ಹೊರಗೆ ಮೊದಲು ಸ್ಥಾಪನೆಗೊಂಡಿದ್ದೇ ತಾಂಜೇನಿಯಾದಲ್ಲಿ, ಅಲ್ಲಿನ ಪ್ರಥಮ ಅಧ್ಯಕ್ಷನಿಗೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಇತ್ತು. ಅಲ್ಲಿನ ಶಾಲೆ, ಆಸ್ಪತ್ರೆಗಳಿಗೆ ಭಾರತೀಯರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಅಲ್ಲಿ ಇಂದಿರಾ ಗಾಂಧಿ ರಸ್ತೆ, ಇಂಡಿಯಾ ರಸ್ತೆ, ಟೆಂಪಲ್ ಸ್ಟ್ರೀಟ್ ಗಳಿವೆ. ರಾಮ, ಕೃಷ್ಣ, ಆಂಜನೇಯ ದೇಗುಲಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಎರಡನೇ ಗೋಷ್ಠಿಯ ಸಂವಾದವನ್ನು ಡಾ. ವಿಜಯಲಕ್ಷ್ಮಿ ನಿರ್ವಹಿಸಿದರು.
ವರದಿ : ಶರಣ್ಯ, ಸೋನಿಕಾ ಪಾಣೆಮಂಗಳೂರು