ಭಾರತ್ ಫೌಂಡೇಶನ್ ವತಿಯಿಂದ 2022ನೇ ಸಾಲಿನ ಮಂಗಳೂರು ಲಿಟ್ ಫೆಸ್ಟ್ನ ಎರಡನೇ ದಿನದ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಮೂರನೇ ಗೋಷ್ಠಿಯು’ civilization Narrative’ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಿತಿನ್ ಶ್ರೀಧರ್, ಸಾಯಿಸ್ವರೂಪ ಅಯ್ಯರ್, ಆಮಿ ಗನಾತ್ರ ಭಾಗವಹಿಸಿದರು.
ಈ ಸಂಧರ್ಭದಲ್ಲಿ ಸಂವಾದದಲ್ಲಿ ಮಾತನಾಡಿದ ನಿತಿನ್ ಶ್ರೀಧರ್, ಜ್ಞಾನವೇ ನಾಗರಿಕತೆಯ ಮೂಲವಾಗಿದೇ. ಪುರಾಣದಲ್ಲಿ ಘಟಿಸಿದ ಪ್ರತಿಯೊಂದು ಘಟನೆಗಳನ್ನೂ ವಿವಿಧ ಆಯಾಮಗಳಲ್ಲಿ ಅವಲೋಕಿಸಲಾಗಿದ್ದು, ಇದು ಅಂತಿಮವಾಗಿ ಧರ್ಮದ ಸತ್ಯ ವನ್ನು ಪ್ರತಿಪಾದಿಸುತ್ತದೆ. ಧರ್ಮವು ಅಗಾಧ ಅರ್ಥಗಳನ್ನು ಒಳಗೊಂಡಿದೆ, ಹಾಗಾಗಿ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಇವು ಪ್ರೇರಣಾತ್ಮಕ ಪರಿಣಾಮ ಬೀರುತ್ತದೆ.
ನಮ್ಮ ಅಪೂರ್ಣ ತಿಳುವಳಿಕೆಗೆ ಮೂಲ ವಿಷಯನ್ನು ಸುಳ್ಳೆಂದು ಬಿಂಬಿಸುವುದು ಸಲ್ಲದು. ಆಧ್ಯಾತ್ಮಿಕತೆಯ ಸತ್ಯ- ಅಸತ್ಯಗಳ ತಿರುಳು ಆಳವಾದ ಅಧ್ಯಯನದಿಂದಲೇ ಹೊರಬರಲು ಸಾಧ್ಯ. ಈ ಮುಖೇನ ಮೌಲ್ಯಗಳನ್ನು ಅರಿತುಕೊಂಡು ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯಯುತ ಅಂಶಗಳನ್ನು ಕೊಡುವಲ್ಲಿ ಗಮನ ವಹಿಸಬೇಕು. ಬಾಲ್ಯದಿಂದಲೇ ಕಲಿಕೆಯಲ್ಲಿ ಶ್ರದ್ದೆ ಮತ್ತು ಸ್ವಾ ಅಧ್ಯಾಯದಂತಹ ಅಂಶಗಳನ್ನು ಅಳವಡಿಸಿ ಕೊಳ್ಳಬೇಕು. ವಿದೇಶಿ ಅಧ್ಯಯನ ಕ್ರಮವನ್ನು ಕುರುಡಾಗಿ ಪಾಲಿಸುವ ಹೊರತಾಗಿ ಭಾರತೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕಲಿಕೆಯು ರೂಪುಗೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಆಮಿ ಗನಾತ್ರ, ಮಹಾಭಾರತದ ಮೂಲ ಉದ್ದೇಶವನ್ನು ತಿಳಿದು ಕೊಳ್ಳುವುದು ಪ್ರಸ್ತುತ ಜಗತ್ತಿನಲ್ಲಿ ಅಗತ್ಯ. ವೇದವ್ಯಾಸರು ನೀಡಿದ ಧರ್ಮದ ಪರಿಪಾಠವನ್ನು ಪಾಲಿಸ ಬೇಕು. ಪುರಾಣದ ನಾಲ್ಕು ಪುರುಷಾರ್ಥಗಳಿಗೆ ಅನುಗುಣವಾಗಿ ಜೀವನ ನಿರ್ವಹಿಸಿದಾಗ ಮಾತ್ರ ಧರ್ಮದ ಬಗ್ಗೆ ನಿಜ ಅರ್ಥ ಕಂಡುಕೊಳ್ಳವಲ್ಲಿ ಸಫಲರಾಗುತ್ತೇವೆ. ವಿವಿಧ ಆಯಾಮಗಳಲ್ಲಿ ಧರ್ಮದ ಅರ್ಥ ಬದಲಾಗುತ್ತ ಹೋಗುತ್ತದೆ. ಕರ್ಮ ನಿಷ್ಠೆಯು ಧರ್ಮದ ಒಂದು ಭಾಗವಾಗಿದ್ದು, ಸ್ವಾರ್ಥದಿಂದ ಕರ್ಮಕ್ಕೆ ಅಡ್ಡಿಯಾಗದಂತೆ ಭಾವನೆಗಳನ್ನು ನಿಯಂತ್ರಿಸ ಬೇಕು. ಭಾರತೀಯರು ತಮ್ಮ ನಾಗರಿಕತೆಯ ಕುರಿತು ದೃಢ ನಿಲುವು ಹೊಂದಬೇಕು. ಸ್ವ ಅಭಿವೃದ್ದಿಯ ಕಡೆಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಂವಾದ ಕಾರ್ಯಕ್ರಮವನ್ನು ಸಾಯಿಸ್ವರೂಪ ಅಯ್ಯರ್ ನಿರ್ವಹಿಸಿದರು.
ವರದಿ : ದಿವ್ಯಶ್ರೀ ವಜ್ರದುಂಬಿ