#MlrLitFest
  • mlrlitfest@gmail.com

ಭಾರತೀಯ ಪಠ್ಯಪುಸ್ತಕದಲ್ಲಿ ಭಾರತೀಯ‌ ಸಂಸ್ಕೃತಿಯನ್ನು ಕಲಿಯುವಂತಾಗಬೇಕು – ರೋಹಿತ್‌ ಚಕ್ರತೀರ್ಥ

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದಂದು ಮೊದಲನೇ ಗೋಷ್ಠಿಯಲ್ಲಿ ಪಠ್ಯ ವಿಮರ್ಶೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ರೋಹಿತ್‌ ಚಕ್ರತೀರ್ಥ ಮತ್ತು ಅರವಿಂದ ಚೊಕ್ಕಾಡಿ ಅವರು ಮಾತನಾಡಿದರು.

ಭಾರತೀಯ ಪದ್ಧತಿಯಲ್ಲಿ ಪಠ್ಯಪುಸ್ತಕದ ಪರಿಕಲ್ಪನೆ ಇರಲಿಲ್ಲ. ವೇದ, ಶಾಸ್ತ್ರಗಳನ್ನು ಹೊರತುಪಡಿಸಿ ಎಲ್ಲವೂ ಲೌಕಿಕ ಜ್ಞಾನ ಕೇಂದ್ರಿತವಾಗಿತ್ತು. ಗುರುವಿನಿಂದ ಶಿಷ್ಯನಿಗೆ ಕ್ರಿಯೆಯ ಮೂಲಕ ಜ್ಞಾನ ಪ್ರಸಾರವಾಗುತ್ತಿತ್ತು. ಬ್ರಿಟಿಷ್ ವಸಾಹತುಶಾಹಿ ಆರಂಭದ ಬಳಿಕ ಪಠ್ಯದ ಮೂಲಕ ಕಲಿಸುವ ಶಿಕ್ಷಣ ವ್ಯವಸ್ಥೆ ಆರಂಭವಾಯಿತು.

ಭಾರತೀಯ ವಿದ್ಯಾರ್ಥಿಗಳು ಭಾರತೀಯ ಪಠ್ಯಪುಸ್ತಕದಲ್ಲಿ ಭಾರತೀಯ‌ ಸಂಸ್ಕೃತಿಯನ್ನು ಕಲಿಯುವಂತಾಗಬೇಕು. ಇತಿಹಾಸದಲ್ಲಿನ ವ್ಯಕ್ತಿ ಬದುಕಿನಲ್ಲಿ ಏನು ಸಾಧಿಸಿದ, ತನ್ನ ನಂತರದ ತಲೆಮಾರುಗಳಿಗೆ ಏನು ಜೀವನ ಸಂದೇಶ ನೀಡಿದ ಎಂಬುದು ಮುಖ್ಯವಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಮಕ್ಕಳಿಗೆ ತಿಳಿಸಬೇಕು. ಅರಿಸ್ಟಾಟಲ್ ಬದಲು ಚಾಣಕ್ಯ, ಕಲ್ಹಣ ಬರೆದ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಕ್ಕಳಿಗೆ ಇಸವಿ ಅಲ್ಲ, ಜೀವನ ಸಂದೇಶ ಮುಖ್ಯ. ಮಾಹಿತಿ ಜೊತೆಗೆ ಜ್ಞಾನ ಕೊಡಬೇಕು ಎಂದು ರೋಹಿತ್‌ ಚಕ್ರತೀರ್ಥ ಹೇಳಿದರು.

ಗಣಿತ – ವಿಜ್ಞಾನ ವಿಷಯಗಳಿಗಿಂತ ಸಾಮಾಜ ವಿಜ್ಞಾನದ ಪಠ್ಯ ವಿಷಯಗಳು ಹೆಚ್ಚು ವಿವಾದಕ್ಕೆ ಒಳಗಾಗುತ್ತವೆ. ಯಾಕೆಂದರೆ ಗಣಿತ ವಿಜ್ಞಾನಗಳನ್ನು ಬ್ರಿಟಿಷರು ಬರೆದಿಟ್ಟರುವುದು ಮತ್ತು ಸಮಾಜ ವಿಜ್ಞಾನವನ್ನು ನಾವು ಬರೆಯುತ್ತೇವೆ.  ಇತಿಹಾಸ ಪಠ್ಯವನ್ನು ನಾವು ಬರೆಯುತ್ತಿದ್ದರೂ ಕೂಡ ಇದಕ್ಕೆ ಚೌಕಟ್ಟು ಹಾಕಿದ್ದು ಬ್ರಿಟಿಷರು, ಈ ಚೌಕಟ್ಟನ್ನು ಮೀರಲು ಪ್ರಯತ್ನಿಸಿದಾಗ ವಿವಾದ ಸೃಷ್ಟಿಯಾಗುತ್ತದೆ. ಪಠ್ಯದಲ್ಲಿ ಅರ್ಧ ಸತ್ಯವನ್ನು ಹೇಳುವ ಕೆಲಸವನ್ನು ಹಿಂದೆ ಮಾಡಲಾಗಿತ್ತು. ಆದರೆ ನಾವು  ಪೂರ್ಣ ಸತ್ಯವನ್ನು ತಿಳಿಸುವ ಕೆಲಸ ಮಾಡಿದ್ದೇವೆ. ಉತ್ತರ ಭಾರತ ಎಂದರೆ ರಜಪೂತರು, ಮೊಘಲರು ಎಂದು ಮಾತ್ರ ಹೇಳಿಕೊಡಲಾಗಿತ್ತು, ಆದರೆ ಅಲ್ಲಿನ ವಿವಿಧ ರಾಜವಂಶಗಳ ಬಗ್ಗೆ ತಿಳಿಸುವ ಪ್ರಯತ್ನ ನಡೆದಿರಲಿಲ್ಲ.  ಕೇವಲ 18 ವರ್ಷ ಆಳಿದ ಮೂಲಭೂತವಾದದ ಸಂಕೃತವಾಗಿರುವ ಟಿಪ್ಪು ಸುಲ್ತಾನ ಕೆಲವರಿಗೆ ತುಂಬಾ ಮುಖ್ಯವಾಗುತ್ತಿದ್ದಾನೆ.

ಇಡೀ ದೇಶದಲ್ಲಿ ಏಕರೂಪದ ಶಿಕ್ಷಣ ತರಲು ಸಾಧ್ಯವಿಲ್ಲ. ನಮ್ಮದು ವಿವಿಧತೆಯಲ್ಲಿ ಏಕತೆ ಅಲ್ಲ, ಏಕತೆಯಲ್ಲಿ ವಿವಿಧತೆ. ಇದನ್ನು ಅರ್ಥ ಮಾಡಿಕೊಂಡಾಗ ಭಿನ್ನ ರೀತಿಯಲ್ಲಿ ಪಠ್ಯಪುಸ್ತಕವನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ರೋಹಿತ್‌ ಚಕ್ರತೀರ್ಥ ಹೇಳಿದರು.

ಗುರು ನಿರ್ಧಾರ ಮಾಡುವ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಪುಸ್ತಕಗಳು ಬೇಕಾಗಿಲ್ಲ. ಗುರು ದುರ್ಬಲನಾದಾಗ, ಪ್ರಭುತ್ವ ಬಲವಾದಾಗ ಪಠ್ಯ ಅಗತ್ಯವಾಗುತ್ತದೆ. ಬ್ರಿಟಿಷರು ಬರುವ ಮೊದಲು ಭಾರತೀಯ ಶಿಕ್ಷಣದಲ್ಲಿ ಪಠ್ಯವಿರಲಿಲ್ಲ. ಬ್ರಿಟಿಷರು ಬಂದ ಬಳಿಕ ಪ್ರಭುತ್ವ ಶಿಕ್ಷಣವನ್ನು ನಿಯಂತ್ರಿಸಿತು. ಈಗಿನ ಶಿಕ್ಷಣದಲ್ಲಿ ಮಗುವಿನ ಬರವಣಿಗೆ ಪರೀಕ್ಷಿಸುವ ಸಾಮಾಗ್ರಿ ಮಾತ್ರ ಇದೆ. ಮಗುವಿನ ಪರಾಮರ್ಶಿಸುವ ಸಾಮರ್ಥ್ಯ, ಚಿಂತನಾ ಸಾಮರ್ಥ್ಯ, ಕೇಳುವ ಮತ್ತು ಅರ್ಥೈಸುವ ಸಾಮರ್ಥ್ಯವನ್ನು ಪರೀಕ್ಷಿಸುವ ಸಾಮಾಗ್ರಿ ಇಲ್ಲ. ಪಠ್ಯದಲ್ಲಿ ರಾಜಕೀಯ ಇತಿಹಾಸ ಬಂದಾಗ ವಿವಾದ ಉಂಟಾಗುತ್ತದೆ. ಪ್ರಶ್ನೆ ಮಾಡುವುದರಿಂದ ವಿವಾದ ಸೃಷ್ಟಿಯಾಗುತ್ತದೆ. ರಾಜಕೀಯ ಅಭಿಪ್ರಾಯ ಪಠ್ಯದಲ್ಲಿ ತುರುಕಿಸಿದಾಗ ವಿವಾದವಾಗುತ್ತದೆ. ಪಠ್ಯದಲ್ಲಿ ಕಡಿಮೆ ವಿಷಯಗಳನ್ನು ಹಾಕಿ ಮಕ್ಕಳ ಚಿಂತನೆಯನ್ನು ಹೆಚ್ಚಿಸಬೇಕು. ವಿಷಯ ಹೆಚ್ಚಾದಾಗ ಚಿಂತನಾ ಮಟ್ಟ ಕಡಿಮೆಯಾಗುತ್ತದೆ. ಇತಿಹಾಸವನ್ನು ಕಲಿಯುವ ಮೂಲಕ ಜೀವನ ಪಾಠವನ್ನು ಅರಿತು ಭವಿಷ್ಯ ರೂಪಿಸಿಕೊಳ್ಳಬೇಕು.ಇತಿಹಾಸ ಕಲಿಕೆಯಿಂದ ವಿಶಾಲ ಜೀವನ ದೃಷ್ಟಿಕೋನ ಬೆಳೆಯಬೇಕು. ಇತಿಹಾಸ ಸ್ವೀಕರಿಸುವ ಗುಣವನ್ನು ಕಲಿಸಬೇಕು.

ಭಾರತದಲ್ಲಿ ಚರಿತ್ರೆ ನಿರೂಪಣಾ ಪದ್ಧತಿ ಮಾತ್ರ ಇತ್ತು. ಚರಿತ್ರೆ ಜನಜೀವನಕ್ಕೆ ಬೇಕಾದ ಸಕಾರಾತ್ಮಕ ಅಂಶಗಳನ್ನು ಮಾತ್ರ ನೀಡುತ್ತಿತ್ತು. ಇತಿಹಾಸ ಕೇವಲ ಘಟನೆಗಳ ದಾಖಲೆ ಮಾತ್ರ. ಶಿಕ್ಷಕರನ್ನು ಹೆಚ್ಚು ಜ್ಞಾನ ರಚನೆ ಮಾಡುವವರನ್ನಾಗಿ ನಾವು ರೂಪಿಸಬೇಕು.  ವ್ಯಾಕರಣದ ಮೂಲಕವೇ ಭಾಷೆಯನ್ನು ಕಲಿಯುವುದು ಅತ್ಯಗತ್ಯ ಎಂದು ಅರವಿಂದ್‌ ಚೊಕ್ಕಾಡಿ ಅವರು ಅಭಿಪ್ರಾಯಿಸಿದರು.

ಶ್ರೀಮತಿ ಅಶ್ವಿನಿ ದೇಸಾಯಿ ಅವರು ಗೋಷ್ಠಿಯನ್ನು ನಿರ್ವಹಿಸಿದರು.