ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎಂಟನೇ ಗೋಷ್ಠಿ ‘Bose: The Untold story’ ಎಂಬ ವಿಷಯದ ಮೇಲೆ ನಡೆಯಿತು. ಕಾರ್ಯಕ್ರಮದಲ್ಲಿ ಲೇಖಕರು ಹಾಗೂ ಸಂಶೋಧಕರಾದ ಚಂದ್ರ ಚೂರ್ ಘೋಷ್ ಹಾಗೂ ಅನುಜ್ ಧರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಚೂರ್ ಘೋಷ್ ಈ ವರ್ಷ ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜೊತೆಗೆ, ಸುಭಾಷ್ ಚಂದ್ರಬೋಸರ 125ನೇ ವರ್ಷದ ಜಯಂತಿಯೂ ಹೌದು. ಸುಭಾಷ್ ಚಂದ್ರ ಬೋಸರ ಜೀವನ ಅನೇಕ ನಿಗೂಢಗಳ ಜೊತೆಗೆ ಅಡಗಿ ಹೋಗಿದೆ. ದ ಅನ್ಟೋಲ್ಡ್ ಸ್ಟೋರಿ ಆಫ್ ಸುಭಾಷ್ ಚಂದ್ರ ಬೋಸ್ ಪುಸ್ತಕವು ಅವರ ಸಾವಿನ ಹಿಂದಿನ ನಿಗೂಢತೆಯ ಕುರಿತು ಆಧಾರ ಸಹಿತ ತಿಳಿಸುವ ಪಯತ್ನವಾಗಿದೆ.
ಸುಭಾಷರು ಸದಾ ಭಾರತದ ಭವಿಷ್ಯದ ಕುರಿತು ಚಿಂತನೆ ನಡೆಸುತ್ತಿದ್ದರು. ಭಾರತ ಮೊದಲು ಭಾರತದ ಬಗ್ಗೆ ಚಿಂತನೆ ನಡೆಸಬೇಕು. ಆಗ ಮಾತ್ರ ಸ್ವಾತಂತ್ರ್ಯಯುಕ್ತ ಸದೃಢ ರಾಷ್ಟ್ರನಿರ್ಮಾಣ ಸಾಧ್ಯ ಎಂದು ಅರಿತಿದ್ದರು. ಸ್ವಾತಂತ್ರ್ಯದ ನಂತರ ಭಾರತವನ್ನು ಮರು ಕಟ್ಟುವ ಬಗ್ಗೆ ಅತೀವವಾಗಿ ಚಿಂತನೆ ನಡೆಸಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಬೋಸರು ಭಾರತವನ್ನು ಸ್ವತಂತ್ರಗೊಳಿಸಲು ಭಾರತದ ಪ್ರಜೆಗಳು ಸಿದ್ಧರಿದ್ದರು ಆದರೆ ಭಾರತದ ಅನೇಕ ನಾಯಕರು ಸಿದ್ಧರಿರಲಿಲ್ಲ ಎನ್ನುವ ಮೂಲಕ ಬ್ರಿಟಿಷರ ವಿರುದ್ಧ ರಾಜಕೀಯದಲ್ಲಿ ಸದೃಢ ನಿರ್ಧಾರ ತೆಗೆದುಕೊಳ್ಳದವರನ್ನು ಟೀಕಿಸಿದ್ದರು.
ಲೇಖಕ ಅನುಜ್ ಧರ್ ಮಾತನಾಡಿ ಸರಕಾರಗಳು ಸುಭಾಷ್ ಚಂದ್ರ ಬೋಸ್ ರ ಕುರಿತಾಗಿ ಮಾಹಿತಿ ನೀಡಲು ಅಸಡ್ಡೆ ತೋರುತ್ತಿವೆ. ಹಲವು ಪ್ರಯತ್ನಗಳ ಫಲವಾಗಿ ಬೋಸರ ಕುರಿತಾಗಿ ಕೆಲವು ದಾಖಲೆಗಳನ್ನು ಬಿಡುಗಡೆಗೊಳಿಸಲಾಗಿದೆ. ಸುಭಾಷ್ ಚಂದ್ರ ಬೋಸರ ಸಾವಿನ ಕುರಿತಾಗಿ ಆಧಾರರಹಿತ ಏಕಪಕ್ಷೀಯ ನಿಲುವುಗಳನ್ನು ಹಲವು ದಶಕಗಳಿಂದ ಸಾರಲಾಗುತ್ತಿದೆ. ಆದರೆ ವೈಜ್ಞಾನಿಕ, ವಿದೇಶಿ ದಾಖಲೆಗಳು ಮತ್ತು ಮೌಖಿಕ ಮೂಲಗಳು 1945ರ ವಿಮಾನ ದುರಂತದ ನಂತರವೂ ಸುಭಾಷ್ ಚಂದ್ರ ಬೋಸರು ಬದುಕಿದ್ದರು ಎನ್ನುವ ನಿಲುವಿಗೆ ಜೀವ ತುಂಬಿವೆ.
ಈ ಸಂವಾದ ಕಾರ್ಯಕ್ರಮವನ್ನು ನವನೀತ್ ಕೃಷ್ಣ ನಿರ್ವಹಿಸಿದರು.