#MlrLitFest
  • mlrlitfest@gmail.com

ಸಂಸ್ಕೃತಿಯನ್ನು ರಾಜಕಾರಣ ಮಾಡದೆ, ಸಂಸ್ಕೃತಿಯಿಂದ ರಾಜಕಾರಣ ಮಾಡಬೇಕು : ಡಾ. ಬಿ.ವಿ ವಸಂತ ಕುಮಾರ್

ಭಾರತ್ ಫೌಂಡೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್­ನ ಐದನೇ ಗೋಷ್ಠಿ 75 ವರುಷಕ್ಕೆ 75 ನೆನಪುಗಳು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಬಿ.ವಿ ವಸಂತ ಕುಮಾರ್ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜನ್ಮಭೂಮಿ ಮತ್ತು ಜನನಿ ಸ್ವರ್ಗಕ್ಕಿಂತ ಮಿಗಿಲು. ಧರ್ಮವನ್ನು ಮೀರಿ ನಾವು ದೇಶವನ್ನು ಪ್ರೀತಿಸಬೇಕು. ಅದಕ್ಕಾಗಿ ಚರಿತ್ರೆಯನ್ನು ಕಲಿಯಬೇಕು. ಚರಿತ್ರೆ ಮುಗಿದ ಅಧ್ಯಯನವಾಗದೆ, ಮುಂದೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಬೇಕು. 1948ರಲ್ಲಿ ಅಂಬೇಡ್ಕರ್ ಜಾರಿಗೆ ತಂದ ಹಿಂದೂ ಕೋಡ್ ಭಾರತದ ಜಾಗೃತಿಯ ಬಗ್ಗೆ ಚಿಂತಿಸಿದ್ದರು. ದೇಶ ವಿಭಜಕರು ಹಿಂದೂಗಳಲ್ಲಿ ಜಾತಿಯನ್ನು ಮಾನದಂಡವಾಗಿಸಿ ಒಡೆದು ಆಳುವ ನೀತಿ ಅನುಸರಿಸಿದರು. ಹಾಗೆಯೇ ಸ್ವಾತಂತ್ರ್ಯ ಹೋರಾಟ ಸಾಮಾಜಿಕವಾಗಿ ನೈತಿಕವಾಗಿ ಬಿದ್ದು ಹೋಗಿದ್ದ ಮೌಲ್ಯಗಳನ್ನು ಪುನಶ್ಚೇತನ ಮಾಡುವುದರ ಕುರಿತಾಗಿತ್ತು. ಈ ಎಲ್ಲಾ ವಿಷಯಗಳನ್ನು ಮನನ ಮಾಡಿಕೊಳ್ಳುವುದು ಅಗತ್ಯವಿದೆ ಎಂದರು.

ಸ್ವಾತಂತ್ರ್ಯ ಅಂದರೆ ಪುರುಷಾರ್ಥ. ಅದು ಸಾವಿಲ್ಲದ ನೋವಿಲ್ಲದ ಸುಖ. ಸ್ವಾತಂತ್ರ್ಯ ಸಮಾನತೆಯನ್ನು ಸಾರಬೇಕು ಮತ್ತು ಜೀವನ ಮೌಲ್ಯವಾಗಬೇಕು. ಸೋದರತೆಯನ್ನು ಪೋಷಿಸದ ಸಮಾಜ ಸ್ವಾತಂತ್ರ್ಯವನ್ನು ಅನುಭವಿಸುವುದು ಕಷ್ಟ. ಸತ್ಯಗಳನ್ನು ಪಾರದರ್ಶಕವಾಗಿ ಬಿಚ್ಚಿಡಬೇಕು. ಸಂಸ್ಕೃತಿಯನ್ನು ರಾಜಕಾರಣ ಮಾಡದೆ, ಸಂಸ್ಕೃತಿಯಿಂದ ರಾಜಕಾರಣ ಮಾಡಬೇಕು. ಅಸ್ಪೃಶ್ಯತೆಯನ್ನು ದೂರವಾಗಿಸಬೇಕು, ಜಾತಿ ವ್ಯವಸ್ಥೆಯನ್ನು ದೂರ ಮಾಡಬೇಕು. ನಮ್ಮ ಧರ್ಮ, ಸಂಸ್ಕೃತಿ ಮತ್ತು ತತ್ವಗಳನ್ನು ಪೋಷಿಸೋಣ ಎಂದು ಅಭಿಪ್ರಾಯ ಪಟ್ಟರು.

ರಾಧಾಕೃಷ್ಣ ಹೊಳ್ಳ ಸಂವಾದ ಕಾರ್ಯಕ್ರಮ ನಿರ್ವಹಿಸಿದರು.

ವರದಿ : ಜಯಶ್ರೀ ಆರ್ಯಾಪು, ರಮ್ಯಶ್ರೀ ಹಾಕೋಟೆ