ಓದು ಕಶೀರ – ತಿಳಿ ಕಾಶ್ಮೀರ : ಇದು ಕೇವಲ ಕಾದಂಬರಿಯಲ್ಲ, ಇತಿಹಾಸದ ಪಠ್ಯ ಪುಸ್ತಕ : ಡಾ. ಚಂದ್ರಶೇಖರ ದಾಮ್ಲೆ

ಭಾರತ್ ಫೌಂಡೇಷನ್ ಆಯೋಜಿಸಿದ ನಾಲ್ಕನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ – 2022ರ ಮಧ್ಯಾಹ್ನದ ಮೊದಲ ಅವಧಿ ‘ಓದು ಕಶೀರ – ತಿಳಿ ಕಾಶ್ಮೀರ’ ಎಂಬ ವಿಷಯದ ಕುರಿತು ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅಂಕಣಕಾರ ಡಾ. ಚಂದ್ರಶೇಖರ ದಾಮ್ಲೆ ಯಾವ ಸಾಹಿತ್ಯ ಪ್ರಕಾರ ಅನುಭವಜನ್ಯ ಘಟನೆಗಳ ಆಧಾರಿತವಾಗಿರುತ್ತದೆಯೋ, ಆಗ ಅದು ಹೆಚ್ಚು ಜನರನ್ನು ತಲುಪುತ್ತದೆ. ಈ ನಿಟ್ಟಿನಲ್ಲಿ ಅನುಭವದ ಆಧಾರದ ಮೇಲೆ ರಚಿತಗೊಂಡ ಕಶೀರ ಪುಸ್ತಕ ಕಾಶ್ಮೀರವನ್ನು ತಿಳಿಯುವುದಕ್ಕೆ ಬಹುಮಟ್ಟಿಗೆ ಸಹಕರಿಸುತ್ತದೆ. ಈ ಪುಸ್ತಕದ ಉದ್ದೇಶವೇ ನೈಜ ಕಾಶ್ಮೀರದ ಕುರಿತು ತಿಳಿಸುವುದಾದ್ದರಿಂದ ಇದು ಕೇವಲ ಕಾದಂಬರಿಯಲ್ಲ, ಇತಿಹಾಸದ ಪಠ್ಯ ಪುಸ್ತಕ ಎಂದು ಹೇಳಿದರು.

ಚರಿತ್ರೆಯನ್ನು ಮರೆತು ನಾಡನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಕಾದಂಬರಿ ತಿಳಿಸುತ್ತದೆ. ಅನೇಕ ದೇಶಗಳು ಇಸ್ಲಾಂನ ದಾಳಿಗೆ ತನ್ನ ಮೂಲ ನಾಗರಿಕತೆಯನ್ನು ಕಳೆದುಕೊಂಡರೂ ಭಾರತ ತನ್ನ ಕ್ಷಾತ್ರಧರ್ಮ ಮತ್ತು ಸತ್ವದ ಮೂಲಕ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆಜಾನ್, ಹಿಜಾಬ್, ಬುರ್ಖಾ ಮುಂತಾದ ಹಲವು ಸೂಕ್ಷ್ಮ ವಿಷಯಗಳನ್ನು ಅಧ್ಯಯನದ ಆಧಾರದ ಮೇಲೆ ತಿಳಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪಠ್ಯವನ್ನು ತಿರುಚಿ ಅವುಗಳ ಮೂಲಕ ಜನಾಂಗದೊಳಗೆ ವೈರುಧ್ಯವನ್ನು ಬಿತ್ತುವ ಕೆಲಸ ಮಾಡುವ ವಿಶ್ವಾವಿದ್ಯಾನಿಲಯಗಳ ಕುರಿತು ಜಾಗೃತವಾಗಿರಬೇಕು. ಆಜಾದಿಯೆಂಬ ಪ್ರತ್ಯೇಕತೆಯ ವಿಷ ಬೀಜವನ್ನು ಬಿತ್ತುವವರ ಕುರಿತು ಸಮಾಜ ಎಚ್ಚರಗೊಳ್ಳಬೇಕು. ಕಾಶ್ಮೀರದ ಮತ್ತು ನಮ್ಮ ರಾಷ್ಟ್ರದ ಅದ್ಭುತ ಸಾಹಿತ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ನಮ್ಮೆಲ್ಲರಿಂದ ಆಗಬೇಕು ಎಂದು ನುಡಿದರು.

ಕಶೀರ ಪುಸ್ತಕ ಓದುವಾಗ ಇತಿಹಾಸದ ಜ್ಞಾನವಿದ್ದರೆ ನಮಗೆ ಈ ಪುಸ್ತಕ ಸ್ಪಷ್ಟವಾಗಿ ಅರ್ಥವಾಗುತ್ತದೆ. ಕಶೀರ ಯಾವ ರೀತಿ ಕಾಶ್ಮೀರದ ಘಟನೆಗಳ ಚಿತ್ರಣವನ್ನು ನೀಡುತ್ತದೋ , ಅದೇ ರೀತಿಯ ನೈಜ ಕಥನಗಳನ್ನು ನಾವು ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ನೋಡಬಹುದು. ಕಾಶ್ಮೀರದ ಕ್ರೂರತೆಯನ್ನು , ಇತಿಹಾಸವನ್ನೂ ತೋರಿಸುವ ಕಶೀರದಂತಹ ಪುಸ್ತಕ ಮೊದಲೇ ಬಂದ ಕಾರಣ ದಿ ಕಾಶ್ಮೀರ್ ಫೈಲ್ಸ್ ಅರ್ಥ ಮಾಡಿಕೊಳ್ಳಲು ಸುಲಭವಾಯಿತು ಎಂದರು.

ಪ್ರೀತಿ, ದ್ವೇಷ, ಬಾಂಧವ್ಯ ಎಲ್ಲವನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಇನ್ನಷ್ಟು ಪುಸ್ತಕಗಳನ್ನು ಓದಲು ಈ ಪುಸ್ತಕ ಪ್ರೇರಣೆ ನೀಡುತ್ತದೆ. ಓದುಗರನ್ನು ಜಾಗೃತಗೊಳಿಸುವ ಕೆಲಸ ಕಶೀರ ಪುಸ್ತಕದಾದ್ಯಂತ ನೀಡಲಾಗಿದೆ. ಏಷ್ಟೋ ನಿಜಂಶಾಗಳನ್ನೂ ಬಯಲಿಗೆ ತರುವಲ್ಲಿ ಪುಸ್ತಕ ಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು.

ವರದಿ : ದೀಕ್ಷಿತಾ ಜೆಡರಕೋಡಿ, ಸೋನಿಕ ಪಾಣೆ ಮಂಗಳೂರು