ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ʼಇತಿಹಾಸ ಬರವಣಿಗೆʼ ಗೋಷ್ಠಿಯಲ್ಲಿ ಡಾ. ಸುಧಾಕರ್ ಹೊಸಳ್ಳಿ ಮತ್ತು ಡಾ. ಲೋಕೇಶ್ ಅವರು ಪಾಲ್ಗೊಂಡರು.
ಡಾ. ಸುಧಾಕರ್ ಹೊಸಳ್ಳಿ ಅವರು ಮಾತನಾಡಿ, ಜಗತ್ತಿನ ಅತ್ಯಂತ ಸಿರಿವಂತ ಇತಿಹಾಸವನ್ನು ಹೊಂದಿರುವ ಭಾರತ ಜಗತ್ತಿನ ಅತಿ ಕುಬ್ಜ ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. ನಾವು ಓದಿಕೊಂಡ ಬಂದ ಮತ್ತು ಓದಿಕೊಂಡು ಬಂದಿರುವ ಇತಿಹಾಸ ಈ ನೆಲದ ಸಂಸ್ಕೃತಿಯನ್ನು ಒಡೆದು ಹಾಕಲು ಬಂದವರು ಬರೆದ ಇತಿಹಾಸ. ಸಾಂವಿಧಾನಿಕ ಇತಿಹಾಸ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿಲ್ಲ, ಶೈಕ್ಷಣಿಕ ವಿಷಯವಾಗಿ ಇದನ್ನು ಕಲಿಸುವ ಪ್ರಯತ್ನ ನಡೆದಿಲ್ಲ. ಇದು ಸಂವಿಧಾನ ಇತಿಹಾಸದಲ್ಲಿನ ಲೋಪದೋಷಗಳನ್ನು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ. ಮೀಸಲಾತಿಯನ್ನು ತಾನೇ ತಂದದ್ದು ಎಂದು ಕಾಂಗ್ರೆಸ್ ಬಿಂಬಿಸುತ್ತಿದ್ದು, ಮಂತ್ರದಂಡವಾಗಿ ಬಳಸಿಕೊಂಡಿದೆ.
ಆದರೆ ಆರಂಭದಲ್ಲಿ ಮೀಸಲಾತಿಗೆ ಅಪಸ್ವರವನ್ನು ಎತ್ತಿದ್ದೇ ಕಾಂಗ್ರೆಸ್. ಸರ್ಕಾರಿ, ಅನುದಾನಿತ ಸರ್ಕಾರಿ ಶಾಲೆಯ ಪಠ್ಯಪುಸ್ತಕದಲ್ಲಿ ಧಾರ್ಮಿಕ ಶಿಕ್ಷಣ ಬೋಧನೆ ಇರಬಾರದು ಎಂಬ ನಿಯಮವಿದೆ. ಆದರೆ 9ನೇ ತರಗತಿಯ ಸಾಮಾಜ ವಿಜ್ಞಾನದ ಪಠ್ಯದಲ್ಲಿ ಮೊದಲ ಪಾಠವೇ ಇಸ್ಲಾಂ ಧರ್ಮ ಮತ್ತು ಕ್ರೈಸ್ಥ ಧರ್ಮ ಎಂಬುದು. ಸಂವಿಧಾನದಲ್ಲಿ ಅಂಬೇಡ್ಕರ್ ಅವರು ರಾಮನ ವಿಜಯಯಾತ್ರೆ ಚಿತ್ರ, ಭಗವದ್ಗೀತೆಯ ಚಿತ್ರ ಹಾಕಿದ್ದರು. ಸಂವಿಧಾನವನ್ನು 99% ರಚಿಸಿದ್ದು ಹಿಂದೂಗಳು. 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲು ಅಂಬೇಡ್ಕರ್ ವಿರೋಧಿಸಿದ್ದರು. ಆದರೂ ಕೆಲವರು ಅದನ್ನು ತುರುಕಿಸಿದರು. ಕೊನೆಗೆ ಅಂಬೇಡ್ಕರ್ ಅವರ ಸಂವಿಧಾನದ ಮೂಲಕವೇ ಅದನ್ನು ತೆಗೆದು ಹಾಕಲು ಸಾಧ್ಯವಾಯಿತು. ಭಾರತೀಯತೆಯನ್ನು ಬೆಸೆದುಕೊಂಡ ಸಂವಿಧಾನ ಅಂಬೇಡ್ಕರ್ ಅವರ ಆಶಯವಾಗಿತ್ತು. ಪ್ರಕೃತಿದತ್ತವಾಗಿ ಭಾರತ ಅಖಂಡವಾಗಿದೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಡಾ. ಲೋಕೇಶ್ ಅವರು ಮಾತನಾಡಿ, ಇತಿಹಾಸದಲ್ಲಿ ಸತ್ತು ಹೋದವರ ಕಥೆಯನ್ನು ಬರೆಯಲಾಗುತ್ತದೆ. ಆದರೆ ಇತಿಹಾಸ ವ್ಯಕ್ತಿಗಳ ಸಾಧನೆಯ ದಾಖಲೆಯಾಗಬೇಕು. ಏನೂ ಸಾಧನೆ ಮಾಡದವರ ಬಗ್ಗೆ ಇತಿಹಾಸ ಬರೆದಿರುವುದು ದುರಾದೃಷ್ಟ. ಪಾಶ್ಚಿಮಾತ್ಯ ಇತಿಹಾಸಕಾರರು ಏನು ಬರೆದಿದ್ದಾರೋ ಅದನ್ನೇ ಭಾರತೀಯ ಇತಿಹಾಸಕಾರರು ಮುಂದುವರೆಸುತ್ತಿದ್ದಾರೆ ಎಂದರು.
ಋಷಿ-ಮುನಿಗಳ ಸಾಧನೆ ನಮ್ಮ ಇತಿಹಾಸದ ಭಾಗವಾಗಬೇಕು. ವೇದಗಳು ನಮ್ಮ ಇತಿಹಾಸ ಬೋಧನೆಯ ಭಾಗವಾಗಬೇಕು. ಆರ್ಯ-ದ್ರಾವಿಡ ಪರಿಕಲ್ಪನೆಯೇ ತಪ್ಪು. ಇದು ಎಂದೋ ಸತ್ತು ಹೋಗಬೇಕಾದ ಕಲ್ಪನೆ. ಬೇರೆ ಬೇರೆ ಸಂಶೋಧನೆಗಳಿಗೆ ಒತ್ತು ನೀಡುವ ಸಲುವಾಗಿ ಈಗಲೂ ಇದನ್ನು ಮುಂದುವರೆಸಲಾಗಿದೆ. ಮೋಘಲರ ಯುಗ, ಬ್ರಿಟಿಷರ ಯುಗ ಎಂಬ ಉಲ್ಲೇಖ ಸರಿಯಲ್ಲ. ಇಡೀ ಯುಗವೇ ಅವರಿಗೆ ಸೇರಲು ಸಾಧ್ಯವೇ? ಆ ಯುಗದಲ್ಲಿ ಅವರೂ ಮಾತ್ರವೇ ಇದ್ದರೆ ಬೇರೆನೋ ಇರಲೇ ಇಲ್ಲವೇ? ಎಡಪಂಥೀಯ ಮತ್ತು ಬಲಪಂಥೀಯ ಎಂಬ ಉಲ್ಲೇಖ ಕೂಡ ತಪ್ಪು. ಲಾರ್ಡ್ ಕರ್ಜನ್, ಲಾರ್ಡ್ ಮೆಕಾಲೆ ಎಂದು ಸಂಭೋದಿಸುವುದು ಯಾಕೆ? ಅವರನ್ನು ಹಾಗೆ ಕರೆದರೆ ದೇವರನ್ನು ಏನೆಂದು ಕರೆಯಬೇಕು? ಎಂದರು.
ವರದಿ : ಶರಣ್ಯ, ದಿವ್ಯಶ್ರೀ ವಜ್ರದುಂಬಿ