ಭಾಷೆ ಮತ್ತು ತಂತ್ರಜ್ಞಾನ ಎರಡೂ ಮನುಷ್ಯನ ಸೃಷ್ಟಿ : ನಾಡೋಜ ಕೆ.ಪಿ.ರಾವ್

ಬೆಂಗಳೂರಿನ ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ಗೋಷ್ಠಿ ‘ಭಾಷೆ ಮತ್ತು ತಂತ್ರಜ್ಞಾನ’ ಎಂಬ ವಿಷಯದ ಮೇಲೆ ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಾಡೋಜ ಕೆ.ಪಿ.ರಾವ್ ಮತ್ತು ಬೇಳೂರು ಸುದರ್ಶನ ಭಾಗವಹಿಸಿದರು.

ಸಂವಾದದಲ್ಲಿ ಮಾತನಾಡಿದ ನಾಡೋಜ ಕೆ. ಪಿ ರಾವ್ ಅವರು ಭಾಷೆ ಮತ್ತು ತಂತ್ರಜ್ಞಾನ ಎರಡೂ ಮನುಷ್ಯನ ಸೃಷ್ಟಿಯೇ ಆಗಿದೆ. ಮನುಷ್ಯನೇ ಸೃಷ್ಟಿಸಿದ ಭಾಷೆ ಅವನನ್ನೇ ಸುಧಾರಿಸುತ್ತಿದೆ. ಪ್ರಸ್ತುತ ತಂತ್ರಜ್ಞಾನ ಎನ್ನುವುದು ವಿಪುಲವಾಗಿ ಬೆಳೆದಿದೆ. ತಂತ್ರಜ್ಞಾನದ ಮೂಲಕ ಭಾಷೆಯ ಅಭಿವೃದ್ಧಿ ಪಡಿಸುವ ಕಾಯಕವೂ ನಡೆಯುತ್ತಿದೆ. ಭಾಷೆಯಲ್ಲಿ ಅಡಕವಾಗಿರುವ ಉದ್ದೇಶವನ್ನು ತಿಳಿದುಕೊಳ್ಳಲು ತಂತ್ರಜ್ಞಾನ ಸಹಾಯಕವಾಗಿದೆ. ತಂತ್ರಜ್ಞಾನದ ಸದುಪಯೋಗ ನಮ್ಮ ಜೀವನವನ್ನು ಅನುಕೂಲವಾಗಿಸಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ನುಡಿದರು.

ಭಾಷೆಯು ದೇವರಷ್ಟೇ ವಿಶ್ವವ್ಯಾಪಿ. ಭಾಷೆ ಎನ್ನುವುದು ಪ್ಯಾಕೇಜಿಂಗ್ ಟೆಕ್ನಿಕ್‌ನಂತೆ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಯೋಚನೆಗಳನ್ನು ಬಳಸಲು ಮತ್ತು ಅದನ್ನು ಅರ್ಥೈಸಿಕೊಳ್ಳಲು ಭಾಷೆ ಬೇಕು. ಇದರಿಂದ ಒಬ್ಬರ ಭಾವನೆಗಳನ್ನು, ಮಾತುಗಳನ್ನು ವ್ಯಕ್ತಪಡಿಸಬಹುದು. 70-72 ವರ್ಷಗಳ ಹಿಂದೆಯೇ ತಂತ್ರಜ್ಞಾನ ಶಿಕ್ಷಣ ಸಿಗುತ್ತಿತ್ತು. ಆಗ ಕೇವಲ ಆಂಗ್ಲ ಭಾಷೆಯಲ್ಲಿ ಮಾತ್ರ ಲಭ್ಯವಿದ್ದ ಪ್ರಿಂಟಿಂಗ್ ತಂತ್ರಜ್ಞಾನ ಪ್ರಸ್ತುತ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಸಿಗುವಂತಾಗಿದ್ದು ತಂತ್ರಜ್ಞಾನದ ಅಭಿವೃದ್ಧಿ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿ, ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ ಮಾತನಾಡಿ ಭಾಷೆಯೇ ಒಂದು ತಂತ್ರಜ್ಞಾನ. ಭಾಷೆಯ ಗ್ರಹಿಕೆಯೇ ವಿಜ್ಞಾನ. ಭಾಷೆ ಎನ್ನುವ ವಿಫುಲವಾದ ವಿಷಯವನ್ನು ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಬೆಳೆಸುವ ಕೆಲಸ ನಿಧಾನವಾಗಿ ನಡೆಯುತ್ತಿದೆ. ನಮ್ಮ ಭಾಷೆಯ ಜ್ಞಾನವನ್ನೂ ಸಮರ್ಪಕವಾಗಿ ತಂತ್ರಜ್ಞಾನದಲ್ಲಿ ಅಳವಡಿಸುವಾಗ ದತ್ತಸಂಚಯ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ಹೇಳಿದರು.

ಪ್ರಸ್ತುತದ ತಂತ್ರಜ್ಞಾನ ಭಾಷೆಯಲ್ಲಿ ರಸ ಹಾಗೂ ಸಂವೇದನೆಯನ್ನು ತರುವಲ್ಲಿ ವಿಫಲವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇವುಗಳನ್ನೂ ತಂತ್ರಜ್ಞಾನದ ಭಾಷೆಯಲ್ಲಿ ಅಳವಡಿಸುವ ಕಾರ್ಯ ವಿಜ್ಞಾನಲೋಕದ ಮೂಲಕ ಆಗುತ್ತದೆ. ತಂತ್ರಜ್ಞಾನದಲ್ಲಿ ಅನೇಕ ಸವಾಲುಗಳಿವೆ. ಅವುಗಳನ್ನು ಅರಿತು ನಾವು ಕೆಲಸ ಮಾಡಬೇಕು. ಮೂಲಕ ಕನ್ನಡ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳನ್ನು ಮುನ್ನಲೆಗೆ ತರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಎರಡನೇ ಗೋಷ್ಠಿಯ ಸಂವಾದವನ್ನು ವಿದ್ಯಾ ಎಸ್. ನಿರ್ವಹಿಸಿದರು.

ವರದಿ : ದೀಕ್ಷಿತಾ ಜೆಡರಕೋಡಿ, ಸೋನಿಕ ಪಾಣೆಮಂಗಳೂರು