ಮಂಗಳೂರು ಲಿಟ್ ಫೆಸ್ಟ್‌ನ ನಾಲ್ಕನೇ ಆವೃತಿಯಲ್ಲಿ ಸುಮಿತ್ ಪಾಂಡೆ ಅವರು ʼRedefinign contours: Russia-Ukraine crisis-India perspective’ ಎಂಬ ವಿಷಯದ ಕುರಿತು ಡಾ. ದತ್ತೇಶ್ ಪ್ರಭು ಪರುಲೇಖರ್ ಮತ್ತು ನಯನ ಆನಂದ್ ಅವರ ಜೊತೆ ಸಂವಾದ ನಡೆಸಿದರು.
ಡಾ. ದತ್ತೇಶ್ ಪ್ರಭು ಪರುಲೇಖರ್ ಅವರು ಮಾತನಾಡಿ, “ಉಕ್ರೇನ್ ಮತ್ತು ಅಫ್ಘಾನಿಸ್ಥಾನದಲ್ಲಿನ ಸದ್ಯದ ಪರಿಸ್ಥಿತಿಗಳು ಅಮೆರಿಕಾದ ಕುಸಿಯುತ್ತಿರುವ ಶಕ್ತಿಯನ್ನು ತೋರಿಸುತ್ತಿದೆ. ಅಫ್ಘಾನ್‌ನಲ್ಲಿ ಅಮೆರಿಕಾದ ಅಸ್ತಿತ್ವ ಹೀನಾಯ ರೀತಿಯಲ್ಲಿ ಅಂತ್ಯಗೊಂಡಿದೆ. ಉಕ್ರೇನ್‌ನಲ್ಲಿನ ರಷ್ಯಾ ವಿಧ್ವಂಸಕತೆಯ ಬಗ್ಗೆಯೂ ಅದು ಸುಮ್ಮನಿದ್ದುಬಿಟ್ಟಿದೆ. ಇನ್ನೊಂದೆಡೆ ರಷ್ಯಾದ ವಿಧ್ವಂಸಕತೆ ಹೆಚ್ಚುತ್ತಿದೆ. ಆದರೆ ಅಮೆರಿಕಾ ಮಾತ್ರ ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಮತ್ತಷ್ಟು ಹೆಚ್ಚಿಸುತ್ತಿದೆ”.
“ಉಕ್ರೇನ್ ಮೇಲಿನ ರಷ್ಯಾ ದಾಳಿಯ ಬಗ್ಗೆ ಭಾರತ ತಟಸ್ಥ ಧೋರಣೆ ಅನುಸರಿಸಿರುವುದಕ್ಕೂ ಕಾರಣಗಳಿವೆ. ಭಾರತ ಉದಯಿಸುತ್ತಿರುವ ಶಕ್ತಿಯಾಗಿದ್ದು, ತನ್ನನ್ನು ಶಕ್ತಿಶಾಲಿಯಾಗಿ ಜಗತ್ತಿನ ಮುಂದೆ ನಿಲ್ಲಿಸಲು ಪ್ರಯತ್ನಿಸುತ್ತಿದೆ. ಯಾವುದೇ ಒಂದು ಬಲಿಷ್ಠ ನಿಲುವು ತೆಗೆದುಕೊಳ್ಳಲು ಭಾರತ ವಿಶ್ವಸಂಸ್ಥೆಯಲ್ಲಿ ವಿಟೋ ಅಧಿಕಾರ ಹೊಂದಿಲ್ಲ. ಆದರೆ ಉಕ್ರೇನ್ ಪರಿಸ್ಥಿತಿಯ ಆರಂಭದಿಂದಲೂ ಭಾರತ ಮಾನವೀಯ ನೆಲೆಗಟ್ಟಿನಲ್ಲಿ ನಿಲುವು ಪ್ರದರ್ಶಿಸಿದೆ. ವಿಶ್ವಸಂಸ್ಥೆಯಲ್ಲಿ ಮತ ಚಲಾವಣೆಯಿಂದ ದೂರ ಉಳಿದರೂ ಮಾನವೀಯತೆ ಮತ್ತು ಶಾಂತಿಯ ಪರವಾಗಿ ಮಾತನಾಡಿದೆ. ಉಕ್ರೇನ್‌ಗೆ ಮಾನವೀಯ ನೆರವು ನೀಡಿದೆ” ಎಂದರು.
“ಭಾರತ ರಷ್ಯಾ ಮತ್ತು ಅಮೆರಿಕಾ ಎರಡರ ಜೊತೆಯೂ ಉತ್ತಮ ಬಾಂಧವ್ಯವನ್ನು ಬಯಸುತ್ತದೆ. ಉತ್ಪಾದಕತೆ, ಸ್ಥಿರತೆ ಮತ್ತು ಹಂಚಿದ ಸಂಬಂಧ ಭಾರತಕ್ಕೆ ಉದಯಿಸುತ್ತಿರುವ ಶಕ್ತಿಯಾಗಿ ಅತೀ ಮುಖ್ಯ. ಸ್ವಂತ ಬಲದಿಂದ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವುದು ಭಾರತಕ್ಕೆ ಅತೀ ಮುಖ್ಯವಾಗಿದೆ. ಭಾರತ ತನ್ನ ಹಿತಾಸಕ್ತಿಗೆ ಮೊದಲು ಆದ್ಯತೆ ನೀಡುತ್ತಿದೆ. ತನ್ನ ಆಹಾರ ಭದ್ರತೆ, ಕೈಗಾರಿಕಾ ಭದ್ರತೆ ಭಾರತಕ್ಕೆ ಅತಿ ಮುಖ್ಯ. ಅದಕ್ಕಾಗಿ ರಷ್ಯಾದಿಂದ ತೈಲ ಖರೀದಿ ನಿರ್ಧಾರದ ಬಗ್ಗೆ ಭಾರತ ದೃಢ ನಿರ್ಧಾರ ತೆಗೆದುಕೊಂಡಿದೆ”.
“ಚೀನಾ ಪ್ರಾಬಲ್ಯ ಮೆರೆಯುವ ಶಕ್ತಿಯಾಗಿ ಬೆಳೆಯುತ್ತಿದ್ದರೆ, ರಷ್ಯಾ ವಿಧ್ವಂಸಕ ಶಕ್ತಿಯಾಗಿ ಬೆಳೆಯುತ್ತಿದೆ. ಈ ಎರಡೂ ದೇಶಗಳನ್ನು ನಿರ್ವಹಿಸುವಲ್ಲಿ ಅಮೆರಿಕಾ ವಿಫಲವಾಗಿದೆ. ಹಾಂಕಾಂಗ್ ಮೇಲೆ, ತನ್ನ ಮುಸ್ಲಿಂ ನಾಗರಿಕರ ಚೀನಾ ಎಸಗುತ್ತಿರುವ ದೌರ್ಜನ್ಯದ ಬಗ್ಗೆ ಅಮೆರಿಕಾ ಮೌನವಾಗಿದೆ. ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದಂತೆ, ಭಾರತ ಬೇರೆ ದೇಶದ ಮೇಲೆ ದಾಳಿ ಮಾಡಿದ್ದರೆ ಅವರು ಪ್ರತಿಕ್ರಿಯೆ ನೀಡುತ್ತಿದ್ದ ರೀತಿ ಬೇರೆಯದ್ದೇ ಆಗಿರುತ್ತಿತ್ತು. ಭಾರತ ಚೀನಾದ ಮೇಲೆ ಯುದ್ಧ ಸಾರಲಿ ಎಂದು ಅಮೆರಿಕ ಆಶಿಸುತ್ತಿದೆ”.
“ಭಾರತ ಸದಾ ತತ್ವ ಆಧಾರಿತ ದೇಶವಾಗಿ ತನ್ನನ್ನು ತಾನು ಜಗತ್ತಿನ ಮುಂದೆ ಪ್ರಸ್ತುತಪಡಿಸಿದೆ. ತನ್ನದೇ ಆದ ಸಾಮರ್ಥ್ಯವನ್ನು ನಿರ್ಮಾಣ ಮಾಡಲು ಭಾರತ ಬಯಸುತ್ತಿದ್ದು, ಅದಕ್ಕಾಗಿ ಪ್ರಸ್ತುತ ತನ್ನ ತತ್ವಗಳ ಜೊತೆಗೆ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ನಿಲುವು ತೆಗೆದುಕೊಳ್ಳುತ್ತಿದೆ” .
ವರ್ಚುವಲ್ ಆಗಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಯನ ಆನಂದ್ ಅವರು ಮಾತನಾಡಿ, ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಉಕ್ರೇನ್ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಜನರು ಉಕ್ರೇನ್‌ನಿಂದ ಪಲಾಯಣ ಮಾಡುತ್ತಿದ್ದಾರೆ. ಹಂಗೇರಿ, ಪೋಲ್ಯಾಂಡ್‌ನಂತಹ ನೆರೆಹೊರೆಯ ರಾಷ್ಟ್ರಗಳಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆಯುತ್ತಿದ್ದಾರೆ. ಸಹೋದರರು, ತಂದೆಯಂದಿರು ಗಡಿಗಳಲ್ಲಿ ತಮ್ಮ ಕುಟುಂಬಕ್ಕೆ ವಿದಾಯ ಹೇಳಿ ಮರಳುತ್ತಿದ್ದಾರೆ. ಪ್ರಸ್ತುತ ಉಕ್ರೇನ್‌ನಲ್ಲಿ 4.2 ಮಿಲಿಯನ್ ನಿರಾಶ್ರಿತರಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ದೇಶಗಳು ಉಕ್ರೇನ್ ಜನರಿಗೆ ನೆರವು ನೀಡುತ್ತಿವೆ.
ಪೋಲ್ಯಾಂಡ್, ಹಂಗೇರಿ, ಬಲ್ಗೇರಿಯಾ ಸಣ್ಣ ದೇಶಗಳು. ಅವುಗಳ ಬಳಿ ಹೆಚ್ಚಿನ ಸಂಪನ್ಮೂಲವಿಲ್ಲ. ಆದರೂ ಅಲ್ಲಿನ ಜನರು ಉಕ್ರೇನ್ ಜನತೆಗೆ ನೆರವು ನೀಡಲು ಉತ್ಸಾಹ ತೋರುತ್ತಿದ್ದಾರೆ. ಆಶ್ರಯ ನೀಡುತ್ತಿದ್ದಾರೆ, ಸಾರಿಗೆ ಒದಗಿಸುತ್ತಿದ್ದಾರೆ. ಊಟ, ತಿಂಡಿ ನೀಡುತ್ತಿದ್ದಾರೆ. ರಷ್ಯಾ ಉಕ್ರೇನ್ ಅನ್ನು ತುಂಬಾನೇ ಕಡೆಗಣಿಸಿತ್ತು. ಆದರೀಗ ಉಕ್ರೇನ್ ರಷ್ಯಾ ವಿರುದ್ಧ ದೃಢವಾಗಿ ನಿಂತಿದೆ. ಬೇರೆ ಬೇರೆ ದೇಶಗಳು ಯುದ್ಧ ಪರಿಕರ, ಪೈಲೆಟ್ಗಳನ್ನು ನೀಡಿ ಉಕ್ರೇನ್ ಅನ್ನು ಬೆಂಬಲಿಸುತ್ತಿವೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ನಕಲಿ ಸುದ್ದಿಗಳು ಹರಿದಾಡುತ್ತಿವೆ. ಜನರು ವಿಷಯಗಳನ್ನು ಖಚಿತಪಡಿಸದೆ ಅವುಗಳನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ವರದಿ : ಶರಣ್ಯ, ದಿವ್ಯಶ್ರೀ ವಜ್ರದುಂಬಿ, ಸೋನಿಕಾ ಪಾಣೆಮಂಗಳೂರು