ಆರನೇ ಗೋಷ್ಠಿಯಲ್ಲಿ ‘ವಿಷಮತೆಯ ಮಥನದಲ್ಲಿ ಮೂಡಿದ ಸಾಹಿತ್ಯ ಸುಧೆ: ಕನ್ನಡದ ಮುಂದಿನ ಹಾದಿ’ ಎಂಬ ವಿಷಯದಲ್ಲಿ ವಿಚಾರ ಸಂಕೀರ್ಣ ನಡೆಯಿತು. ಗೋಷ್ಠಿಯನ್ನು ರೋಹಿತ್ ಚಕ್ರತೀರ್ಥ ನಡೆಸಿಕೊಟ್ಟರು.
ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ ಬಿ ವಿ ವಸಂತ ಕುಮಾರ್ ಮಾತನಾಡಿ, ವಿಷಮತೆ ಅಂದರೆ ಸಂಕಷ್ಟ, ತೊಂದರೆ ಇತ್ಯಾದಿ. ಇದು ಮನುಷ್ಯನೇ ಕಂಡುಕೊಂಡ ಮನೋಲೋಕದ ಸೃಷ್ಟಿ. ಸಾಹಿತಿ ವರ್ತಮಾನದಲ್ಲಿ ಕಾಲ ಕಳೆಯುವವ. ಭೂತದ ಅನುಭವದ ಮೂಲಕ, ಭವಿಷ್ಯಕ್ಕೆ ಪರಿಹಾರ ಒದಗಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ ಎಂದು ಹೇಳಿದರು. ಕಷ್ಟದ ಒಳಗಡೆ ಸುಖವನ್ನು ಕಂಡದ್ದು ಭಾರತೀಯ ಸಾಹಿತ್ಯ ಎಂದು ಅವರು ಹೇಳಿದರು.
ಸಾಹಿತ್ಯ ಹುಟ್ಟುವುದೇ ಸಂಘರ್ಷ, ವಿಷಮತೆಯಿಂದ. ಅದರ ಹೊರತಾಗಿ ಯಾವುದೇ ಸೃಷ್ಟಿ ಅಸಾಧ್ಯ. ಸವಾಲಿನಿಂದಲೇ ಬದುಕು. ಕೇವಲ ಸುಖವಷ್ಟೇ ಬದುಕಲ್ಲ. ಭಾರತೀಯ ಮನೋಧರ್ಮ ಮತ್ತು ಪಾಶ್ಚಾತ್ಯ ಮನೋಧರ್ಮದ ಬಗ್ಗೆ ಇಲ್ಲಿ ಅವಲೋಕನ ಮುಖ್ಯವಾಗುತ್ತದೆ. ಮುಂದೇನಾಗಬಹುದು ಎಂದು ನೊಂದು ಭವಿಷ್ಯದ ಚಿಂತೆಯಲ್ಲೇ ಕಳೆದರೆ ಸುಖ ಅಸಾಧ್ಯ. ಆಪತ್ತು ತೇಲಿಸಲೆಂದೇ ಸಾಹಿತ್ಯದ ದೋಣಿ ಇದ್ದು, ಅದನ್ನು ಬಳಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆಪತ್ತು ಮನುಷ್ಯ ಸೃಷ್ಟಿ. ಉತ್ತರ, ಪರಿಹಾರ ನಾವೇ ಹುಡುಕಬೇಕಿದೆ ಎಂದರು. ಸಾಹಿತ್ಯ ಆತ್ಮಶೋಧನೆಯ ಸಾಧನ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುವೆಂಪು ಭಾಷಾ ಭಾರತಿಯ ಅಧ್ಯಕ್ಷ ಡಾ. ಗಿರೀಶ್ ಭಟ್ ಅಜಕ್ಕಳ ಮಾತನಾಡಿ, ಕೊರೋನಾ ಪರಿಸ್ಥಿತಿಯಲ್ಲಿ ಅನೇಕ ಸಾಹಿತ್ಯ ಸೃಷ್ಟಿಯಾಗಿದೆ. ಸಾಹಿತಿಗೆ ಕಲಾತ್ಮಕ ಸೃಷ್ಟಿಯನ್ನು ಹೊರತರಬೇಕೆಂಬ ಅಭಿಲಾಷೆ ಇರುತ್ತದೆ. ಅದಕ್ಕೆ ಸಮಯ ಹಿಡಿಯುತ್ತದೆ. ಉತ್ತಮ ಸಾಹಿತಿ ಕಲಾತ್ಮಕ ಸೃಷ್ಟಿಯನ್ನೇ ನಿರೀಕ್ಷೆ ಮಾಡುತ್ತಾರೆ. ವಿಷಮತೆ ಎಲ್ಲರಿಗೂ ಒಂದೇ ರೀತಿ ಬಾಧಿಸದೇ ಇರಬಹುದು. ಇದರಿಂದಾಗಿ ಇಂತಹ ವಿಷಮ ಸ್ಥಿತಿಯಲ್ಲಿ ಸಾಹಿತ್ಯದ ಹುಟ್ಟು ನಿಧಾನವಾಗಿದೆ ಎಂದು ಹೇಳಬಹುದು. ನಮ್ಮೊಳಗಿನ ಕಲ್ಪನೆಯ ತೀವ್ರತೆಗೆ ಅನುಗುಣವಾಗಿಯೇ ಸಾಹಿತ್ಯ ಸೃಷ್ಟಿಯಾಗುವುದು ಎಂದು ಅವರು ತಿಳಿಸಿದರು.
ಅರೆ ಭಾಷಾ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮಾತನಾಡಿ, ಸಮಾಜದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ವಿಷಮತೆಗಳನ್ನು ಗಮನಿಸುತ್ತಿದ್ದೇವೆ. ಕಥೆ, ಕವನ ಹುಟ್ಟುತ್ತಿಲ್ಲ. ಇದು ಹುಟ್ಟಬೇಕಾದರೆ ಒಂದು ಧ್ಯಾನ, ತಪಸ್ಸು ಬೇಕು. ಆ ತಪಸ್ಸು ಕಡಿಮೆಯಾಗುತ್ತಿದೆ. ವಿಷಮತೆ ಎಂಬುದು ಲೇಖನಗಳಷ್ಟೇ ಆಗುತ್ತಿದೆ. ವಸ್ತುಗಳಿದ್ದರೂ ಅದಕ್ಕೆ ಜೀವ ತುಂಬುವ ಸಾಹಿತಿಗಳು, ಸಾಹಿತ್ಯ ಹುಟ್ಟುತ್ತಿಲ್ಲ. ಸಾಹಿತ್ಯದ ಜಿಪುಣತನ ನಮ್ಮಲ್ಲಿಲ್ಲ. ಇಂದಿನ ತುರ್ತಿನಲ್ಲಿ ವಿಚಾರಗಳು ಬೇಗ ಸಿಗುವಂತಾಗುವ ದಿಸೆಯಲ್ಲಿ ಸಾಗುತ್ತಿದ್ದೇವೆ. ಇದರ ಹಿನ್ನೆಲೆಯಲ್ಲಿ ಸಾಹಿತ್ಯ ಸೃಷ್ಟಿ ನಿಧಾನವಾಗಿದೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೂ ಲೇಖಕರಾಗುತ್ತಿದ್ದಾರೆ. ಆದರೆ ಸಾಹಿತಿಗಳಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ತಲ್ಲಣಕ್ಕೆ ಮಿಡಿಯುವ ಮನಸ್ಸಿಲ್ಲದೇ ಇರುವುದೇ ಸಾಹಿತ್ಯದ ಹಿನ್ನಡೆಗೆ ಕಾರಣ ಎನ್ನಬಹುದು ಎಂದು ಹೇಳಿದರು.
ಸಮನ್ವಯಕಾರ ರೋಹಿತ್ ಚಕ್ರತೀರ್ಥ ಅವರು ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಹಿತ್ಯ ಹೇಗೆ ಕಾರ್ಯನಿರ್ವಹಿಸಬೇಕು, ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಸಿದರು. ಹಾಗೆಯೇ ಸಾಹಿತ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುವುದಕ್ಕೂ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.