ಗೋಷ್ಠಿ 5 : Untold Sagas, Unsung Heroes: Reimagining Bharath through Ithihas and its Retelling

ಐದನೇ ಗೋಷ್ಠಿಯಲ್ಲಿ Untold Sagas, Unsung Heroes: Reimagining Bharath through Ithihas and its Retelling ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ನಡೆಯಿತು. ಸಮನ್ವಯ‌ಕಾರರಾಗಿ ಪತ್ರಕರ್ತೆ ಹರ್ಷ ಭಟ್ ನಿರ್ವಹಿಸಿದರು.

ಲೇಖಕಿ ಸಾಯಿ ಸ್ವರೂಪ ಅಯ್ಯರ್ ಮಾತನಾಡಿ, ನಮ್ಮ ಐತಿಹಾಸಿಕ ನಾಯಕರ ಬಗ್ಗೆ ದಾಖಲೆ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಿದೆ. ಇತಿಹಾಸ, ಪೌರಾಣಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮ್ಮೊಳಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಥೆಗಳನ್ನು ಮತ್ತೆ ಹೇಳುವ ಕೆಲಸ ಇತಿಹಾಸ ಅರಿಯುವ ನಿಟ್ಟಿನಲ್ಲಿ ನಮ್ಮ ಇಂದಿನ ತುರ್ತಾಗಿದೆ. ಕುಟುಂಬಕ್ಕಾಗಿ ಸಮಯ ನೀಡುವುದಕ್ಕೆ ಸಮಯವಿಲ್ಲ‌ದ ಈ ಸಂದರ್ಭದಲ್ಲಿ ಇಂತಹ ಐತಿಹಾಸಿಕ ಹಿನ್ನೆಲೆಗಳನ್ನು ತಿಳಿಸುವತ್ತ ದೃಷ್ಟಿ ಹಾಯಿಸಿದಲ್ಲಿ ಮಾತ್ರ ಇತಿಹಾಸ ಉಳಿಯುತ್ತದೆ ಎಂದು ಹೇಳಿದರು. ಇಂತಹ ಕಥೆಗಳನ್ನು ಹೇಳುವ ತರಬೇತಿ ಪಡೆದ ಜನರ ಗುಂಪು ನಿರ್ಮಾಣ‌ವಾಗಬೇಕಿದೆ ಎಂದು ಅವರು ತಿಳಿಸಿದರು.

ಲೇಖಕಿ ಹಾಗೂ ಸಂಶೋಧಕರಾದ ವಸುಂಧರಾ ದೇಸಾಯಿ ಮಹಾಪುರುಷ್ ಅವರು ಮಾತನಾಡಿ, ಹಂಪಿಯನ್ನು ಯಾರು ನಿರ್ಮಾಣ ಮಾಡಿದರು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇಂತಹ ವಿಚಾರವನ್ನು ಸಂಗ್ರಹಿಸಿ ಮಾಡುವ ಕೆಲಸವನ್ನು ತಾನು ಮಾಡುತ್ತಿರುವುದಾಗಿ ತಿಳಿಸಿದರು. ‘ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯ’ ಎಂಬ ಪುಸ್ತಕದಲ್ಲಿ ಹಂಪಿಯ ಕಥೆಯನ್ನು ಕಟ್ಟಿಕೊಡುವ ಕೆಲಸ ಮಾಡಿರುವುದಾಗಿ ತಿಳಿಸಿದರು. ಇಂತಹ ದಾಖಲೆಗಳನ್ನು ಬರೆಯುವ ಅಥವಾ ಸಂಗ್ರಹಿಸಿಡುವ ಕೆಲಸವಾದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ಹೇಳಿದರು. ದಾಖಲೆಗಳಿಲ್ಲದ ವಿಚಾರ ಮುಂದಿನ ತಲೆಮಾರಿಗೆ ತಲುಪುವುದು ಕಷ್ಟ. ಈ ಹಿನ್ನೆಲೆಯಲ್ಲಿ ನಮ್ಮ ಐತಿಹಾಸಿಕ ಘಟನೆಗಳು, ಐತಿಹಾಸಿಕ ಕಟ್ಟಡ, ಸ್ಮಾರಕಗಳು, ವ್ಯಕ್ತಿಗಳ ಬಗ್ಗೆ ಸಿಕ್ಕ ಮಾಹಿತಿಗಳನ್ನು ಕೂಡಿಡುವ ಕೆಲಸವಾಗಬೇಕಿದೆ ಎಂದು ಹೇಳಿದರು. ಅವುಗಳ ಹಿಂದಿನ ಕಥೆಗಳನ್ನು ತಿಳಿದುಕೊಳ್ಳಲು ಈ ದಾಖಲೆಗಳು ಸಹಾಯ ಮಾಡುತ್ತದೆ. ಇದಕ್ಕೆ ಮುಕ್ತ ಮನಸ್ಸು ಬೇಕು. ಆಗ ದಾಖಲೆಗಳನ್ನು ಹುಡುಕಲು ಸಾಧ್ಯವಾಗುತ್ತದೆ. ಸಂಶೋಧಿಸುವ ಗುಣ ನಮ್ಮಲ್ಲಿರಬೇಕು, ಆಗ ಇತಿಹಾಸ ಉಳಿಯುತ್ತದೆ ಎಂದು ಹೇಳಿದರು.

ಪತ್ರ‌ಕರ್ತ ಅರವಿಂದ್ ನೀಲಕಂಡನ್ ಮಾತನಾಡಿ, ಇಂದಿನ ಯುವಜನಾಂಗ‌ಕ್ಕೆ ನಮ್ಮ ಐತಿಹಾಸಿಕ ವೀರರನ್ನು ಪರಿಚಯಿಸುವ, ಅವರ ಮಾಹಿತಿ‌ಗಳನ್ನು ತಿಳಿಸಿಕೊಡುವ ಕಾರ್ಯ ನಡೆಯಬೇಕಿದೆ. ಅದನ್ನು ತಿಳಿಸಿಕೊಡುವುದಕ್ಕೆ ಪೂರಕವಾಗುವಂತಹ ಸಂದರ್ಭಗಳನ್ನು, ಮಾಧ್ಯಮ‌ಗಳನ್ನು ಕಂಡುಕೊಳ್ಳಬೇಕಾಗಿದೆ. ಸರಿಯಾದ ದಾರಿಯ ಆಯ್ಕೆ ಮಾಡಿಕೊಂಡು ನಾವು ನಮ್ಮದೇ ನಾಯಕರ ಕಥೆಗಳನ್ನು ಮಕ್ಕಳಿಗೆ ಕಟ್ಟಿಕೊಡುವ ಕೆಲಸವಾಗಬೇಕಿದೆ. ಈ ಕಾರ್ಯ ಆಗಿಂದಾಗ್ಗೆ ನಡೆಯುತ್ತಿರಬೇಕು. ಹಾಗಾದಲ್ಲಿ ಮಾತ್ರ ಐತಿಹಾಸಿಕ ವೀರರನ್ನು ತಿಳಿದುಕೊಳ್ಳಲು ಯುವಜನತೆಗೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಾವು ನಮ್ಮ ಐತಿಹಾಸಿಕ ನಾಯಕರ ಕಥೆಗಳನ್ನು ಹೇಗೆ ಪ್ರಸ್ತುತ‌ಪಡಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಬಗ್ಗೆ ನಮ್ಮೊಳಗೊಂದು ಅರಿವಿರಬೇಕು. ಸಣ್ಣಪುಟ್ಟ ವಿಚಾರಗಳ ಬಗ್ಗೆ‌ಯೂ ಗಮನವಿಟ್ಟು‌ಕೊಂಡು ಕಥೆಗಳನ್ನು ಕಟ್ಟುವ, ತಿಳಿಸುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು. ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಅವರು ಭಾರತೀಯರ ನಂಬಿಕೆಗಳನ್ನು ಸುಳ್ಳು ಎಂಬಂತೆ ಬಿಂಬಿಸತೊಡಗಿದರು. ಹಾಗೆಯೇ ಇಲ್ಲಿನ ಕಥೆಗಳನ್ನು ಬೇರೇಯದೇ ರೂಪದ ಜೊತೆಗೆ ಜನರಿಗೆ ಕಟ್ಟಿಕೊಡತೊಡಗಿದರು. ಇಲ್ಲಿನ ಇತಿಹಾಸ‌ದ ಚಿತ್ರಣವೇ ಬದಲಾಯಿತು. ಇದರ ನೈಜತೆಯನ್ನು ಅರಿಯುವ ನಿಟ್ಟಿನಲ್ಲಿ ಐತಿಹಾಸಿಕ ಕಥೆಗಳನ್ನು ಮತ್ತೆ ಸರಿಯಾದ ಸ್ವರೂಪದಲ್ಲಿ ಕಟ್ಟಿಕೊಡುವಂತಾಗಬೇಕು ಎಂದು ಅವರು ಹೇಳಿದರು. ಇತಿಹಾಸ‌ದ ಮೂಲ ಹುಡುಕುವ, ಇತಿಹಾಸವನ್ನು ಅರಿಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಭಾರತೀಯತೆಗೆ ಅನುಗುಣವಾಗಿ ಸಾಗಬೇಕಿದೆ ಎಂದು ಅಭಿಪ್ರಾಯ‌ಪಟ್ಟರು.