ಮೂರನೇ ಗೋಷ್ಠಿಯಲ್ಲಿ Azadi ke 75 Saal: Swarajya Then And Now ಎಂಬ ವಿಚಾರದ ಬಗ್ಗೆ ಅಭ್ಯಾಗತರು ಅಭಿಪ್ರಾಯ ಮಂಡನೆ ಮಾಡಿದರು. ಸಮನ್ವಯಕಾರ ಡಾ. ನಂದನ್ ಪ್ರಭು ಕಾರ್ಯಕ್ರಮ ನಡೆಸಿಕೊಟ್ಟರು.
ಆರ್ಗನೈಸರ್‌ನ ಮಾಜಿ ಸಂಪಾದಕರಾದ ಶ್ರೀ ಶೇಷಾದ್ರಿ ಚಾರಿ ಅಖಂಡ ಭಾರತ ಪರಿಕಲ್ಪನೆಯ ಬಗ್ಗೆ ಮಾತನಾಡಿ, 1947-2021 ರ ವರೆಗಿನ ಭಾರತದ ಸ್ವಾತಂತ್ರ್ಯದ ಬಗ್ಗೆ ಹೇಳುವುದಾದರೆ ಇಂಡಿಯಾ ಎಂಬ ಶಬ್ದ ಭಾರತದ ಸ್ವಾತಂತ್ರ್ಯಕ್ಕೂ ಮೊದಲೇ ಹುಟ್ಟಿರುವಂತಹದ್ದು. ಭೌಗೋಳಿಕವಾಗಿ, ಐತಿಹಾಸಿಕವಾಗಿ ಭಾರತದಲ್ಲಿ ಹಲವು ಬದಲಾವಣೆಗಳು ಘಟಿಸಿವೆ. ಪ್ರದೇಶದಿಂದ ಪ್ರದೇಶಕ್ಕೆ ಈ ಬದಲಾವಣೆಯನ್ನು ನಾವು ಗಮನಿಸಬಹುದು. ಸಂಸ್ಕೃತಿ ಮತ್ತು ಸಭ್ಯತೆ ಇವೆರಡೂ ವಿಭಿನ್ನ ನೆಲೆಗಟ್ಟಿನಲ್ಲಿ ಅರಿತುಕೊಳ್ಳಬೇಕಾದ ವಿಚಾರಗಳು. ಭೌಗೋಳಿಕ ವಿಚಾರಗಳು ಹಿಂದಿನಂತೆಯೇ ಇಂದಿಗೂ ಇದೆ. ಆದರೆ ಸಾಂಸ್ಕೃತಿಕ ವಿಚಾರಗಳು ಮಾತ್ರ ಹಲವು ಮಹತ್ತರ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಎಂದರು.
ಸ್ವರಾಜ್ಯ ಎಂಬ ಕಲ್ಪನೆ ನಾವು ಯಾವುದನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದು. ಅಖಂಡ ಭಾರತ ಎಂಬುದು ದೇಶದ ಭೌಗೋಳಿಕ ಮತ್ತು ಐತಿಹಾಸಿಕ ವಿಚಾರಗಳಿಗೆ ಸಂಬಂಧಿಸಿದಂತೆ ಇದೆ. ಅದರೊಂದಿಗೆ ಸಾಂಸ್ಕೃತಿಕ ಭಾರತವೂ ಅಡಕವಾಗಿದೆ. ಈ ಸಾಂಸ್ಕೃತಿಕ ಭಾರತದ ವಿಚಾರಧಾರೆಗಳೇನು ಎಂಬುದು ಅಖಂಡ ಭಾರತದ ಪರಿಕಲ್ಪನೆಯಾಗಿದೆ. ಈ ಒಂದು ಅಜೆಂಡಾದ ಮಿತಿಯೊಳಗೆ ಎಲ್ಲಾ ರಾಜಕೀಯ ವಿಚಾರಗಳೂ ಬರುತ್ತದೆ ಎಂದು ತಿಳಿಸಿದರು. ಭಾರತ ವಿಶ್ವ ಕುಟುಂಬಕಂ ಪರಿಕಲ್ಪನೆಯಲ್ಲಿ ಮುನ್ನಡೆಯುತ್ತಿದೆ ಎಂಬುದು ನಮ್ಮ ಗಮನದಲ್ಲಿರಬೇಕು. ನಾಗರೀಕತೆಯ ಮುಂದುವರಿಕೆಯ ಬಗ್ಗೆ ನಾವು ಅರಿತುಕೊಳ್ಳಬೇಕಾಗಿದೆ. ಈ ಕಲಿಕೆಯ ಪ್ರವೃತ್ತಿ ನಮ್ಮೊಂದಿಗೆ ಸದಾ ಇರಬೇಕು ಎಂದು ಚಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಚಾರ ಮಂಡಿಸಿದ ಲೇಖಕ ಡಾ. ವಿಕ್ರಂ ಸಂಪತ್ ಮಾತನಾಡಿ, ನಮ್ಮಲ್ಲಿ ಭಾರತದ ಬಗ್ಗೆ ಅನೇಕ ಕಲ್ಪನೆಗಳಿವೆ. ಈ ಕಾರಣದಿಂದಲೇ ಸ್ವಾತಂತ್ರ್ಯ ಪಡೆಯುವುದಕ್ಕೂ ಕಷ್ಟಪಡಬೇಕಾಯಿತು. ಅನೇಕ ಚಿಂತನೆಗಳ ಕಾರಣದಿಂದ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಭಾರತದ ಪರಿಕಲ್ಪನೆ ಇರುವುದು ಕೇವಲ ರಾಜಕೀಯ ವಿಚಾರದಲ್ಲಿ ಅಲ್ಲ. ಬದಲಾಗಿ ನಾಗರೀಕತೆ, ಸಂಸ್ಕೃತಿಯೂ, ಅಧ್ಯಾತ್ಮ ಮೊದಲಾದವುಗಳ ಬಗೆಗೂ ಚಿಂತನೆಗಳನ್ನು ಒಳಗೊಂಡಿದೆ. ಕೇವಲ ರಾಜಕೀಯ ಸ್ವಾತಂತ್ರ್ಯದ ಪರಿಕಲ್ಪನೆ ಸ್ವಾತಂತ್ರ್ಯ ವಲ್ಲ. ಸ್ವರಾಜ್ಯ, ಸಂಸ್ಕೃತಿ ಮೊದಲಾದವುಗಳ ಕಲ್ಪನೆ ಇದರಲ್ಲಿ ಪಾಲು ಪಡೆಯುತ್ತವೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಎಂಬುದು ನಾವೆಲ್ಲರೂ ಒಂದೇ ಎಂಬ ಭಾವ, ಸಾಂಸ್ಕೃತಿಕ ಸಮಾನತೆಯ ಕಲ್ಪನೆಯಿಂದ ಸೃಜಿಸಬೇಕು. ಇದೇ ಚಿಂತನೆಗಳನ್ನು ಸಂವಿಧಾನದಲ್ಲಿಯೂ ನಾವು ಗಮನಿಸಬಹುದು. ಈ ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಇಂತಹ ಜ್ಞಾನೋದಯವಾದಾಗ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯ. ನಮ್ಮ ಸಮಾಜದಲ್ಲಿ ಕಳೆದ 75 ವರ್ಷಗಳಿಂದ ವೈದ್ಯಕೀಯ, ಶಿಕ್ಷಣ, ಸಮಾನತೆ ಮೊದಲಾದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಅಭಿವೃದ್ಧಿ ಕಂಡಿದ್ದೇವೆ. ಇದು ನಮಗೆ ಹೆಮ್ಮೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರು ವಿವಿಯ ಪ್ರೊಫೆಸರ್ ಡಾ. ಧರ್ಮ ಅವರು ಮಾತನಾಡಿ, ಸ್ವರಾಜ್ಯ, ಸ್ವ ಎಂಬ ಕಲ್ಪನೆಯೇ ವಿಶೇಷ ಮತ್ತು ವಿಸ್ತಾರವಾಗಿದೆ. ಪಾರ್ಲಿಮೆಂಟ್ ಕಲ್ಪನೆಯನ್ನು ಜಾರಿಗೆ ತಂದವರಿಗೂ ಈ ವಿಸ್ತಾರದ ಅರಿವು ಮತ್ತು ಸ್ವ ಎಂದರೇನು ಎಂಬ ಕಲ್ಪನೆ, ಅರಿವು ಇತ್ತೆಂಬುದು ಸ್ಪಷ್ಟ. ಭಾರತದ ಸ್ವಾತಂತ್ರ್ಯಕ್ಕೆ 75 ವರ್ಷಗಳಾಗುತ್ತಿದೆ. ಆದರೆ ಭಾರತದ ಪರಿಕಲ್ಪನೆ ಅದಕ್ಕೂ ಮುನ್ನವೇ ಇತ್ತು ಎಂಬುದನ್ನು ಅರಿಯಬೇಕು. ಬ್ರಿಟಿಷ್‌ರು ಭಾರತದಿಂದ ಹೋದರು. ಆದರೆ ಅವರ ಚಿಃತನೆಗಳ ಜೊತೆಗೆ ನಮ್ಮಲ್ಲೇ ಜೀವಂತವಾಗಿದ್ದಾರೆ. ಅಲ್ಲಿ ನಮ್ಮ ‘ಸ್ವ’ ದ ಪರಿಕಲ್ಪನೆ ಪಾಲನೆಯಾಗಿಲ್ಲ ಎಂಬುದು ಸತ್ಯ ಎಂದು ಹೇಳಿದರು.
ಸ್ವ ಎಂಬುದೇ ಭಾರತದ ಕಲ್ಪನೆಯಾಗಿತ್ತು. ಇವೆಲ್ಲವೂ ವ್ಯಕ್ತಿಗತವಾಗಿ ಬೇರೆಬೇರೆಯಾದರೂ, ಎಲ್ಲರನ್ನೂ ಒಗ್ಗೂಡಿಸಿ ‘ಸ್ವ’ ದ ಪರಿಕಲ್ಪನೆಗೆ ಶಕ್ತಿ ತುಂಬುತ್ತಿದ್ದ ಕೆಲಸ ಪಾರ್ಲಿಮೆಂಟ್‌ನಿಂದಾಗುತ್ತಿತ್ತು ಎಂಬುದನ್ನು ಅರಿಯಬೇಕು. ಇನ್ನೊಂದು’ಸ್ವ’ದ ಪರಿಕಲ್ಪನೆಯ ಬಗ್ಗೆ ಹೇಳುವುದಾದರೆ ನಮ್ಮತನ ಎಂಬುದೇ ಅದರರ್ಥ. ಭಾರತದ ಸತ್ವ ಅರಿತ ಹಿರಿಯರು ಪಾರ್ಲಿಮೆಂಟ್ ಎಂಬ ಕಲ್ಪನೆಯ ಮೂಲಕ ನಮ್ಮತನದ ಕಲ್ಪನೆಗೆ ರೂಪ ನೀಡಿದ್ದಾರೆ. ನಮ್ಮಲ್ಲಿ ಜಾತಿಗೊಂದು, ಧರ್ಮಕ್ಕೊಂದು ಸಾಹಿತ್ಯ ಸೃಷ್ಟಿಯಾಗಿ ಏಕತೆಯ ರಾಷ್ಟ್ರ ನಿರ್ಮಾಣವಾಗುವ ಮಾತೇ ಬಂದಿಲ್ಲ ಎಂಬುದು ದುರಂತ. ಆದ್ದರಿಂದ ಎಲ್ಲಾ ವಿಭಿನ್ನ ನಿಲುವುಗಳನ್ನು ಹೊಂದಿರುವ ಕ್ಷೇತ್ರಗಳೂ ದೇಶದ ವಿಚಾರದಲ್ಲಿ ಒಗ್ಗೂಡುವ ಮೂಲಕ ‘ಸ್ವರಾಜ್ಯ’ ಪರಿಕಲ್ಪನೆಗೆ ಶಕ್ತಿ ತುಂಬುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಿತಿಕಾ ಆಚಾರ್ಯ ಅವರು ಲಿಂಗ ಸಮಾನತೆಯ ಬಗ್ಗೆ ಮಾತನಾಡುತ್ತಾ, ನಮ್ಮ ಸಂಪ್ರದಾಯಗಳ ಬಗ್ಗೆ ಅವುಗಳ ಹಿಂದಿನ ವೈಜ್ಞಾನಿಕತೆಯ ಬಗ್ಗೆ ಯುವಜನತೆ ತಿಳಿಯಬೇಕಿದೆ. ಮಹಿಳೆಗೆ ಆಕೆಯದ್ದೇ ಆದ ಚಿಂತನೆಗಳ ಮೂಲಕ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಪುರುಷರಿಗೆ ಸಿಕ್ಕ ಸ್ವಾತಂತ್ರ್ಯ ಆಕೆಗೆ ಎಲ್ಲಾ ವಿಚಾರಗಳಲ್ಲಿಯೂ ತಿಳಿಯಬೇಕಿದೆ. ಭಾರತದ ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದುಳಿದಿಲ್ಲ. ಮನೆ ನಡೆಸುವುದರಿಂದ ಹಿಡಿದು ಕಾರ್ಪೊರೇಟ್ ಸಂಸ್ಥೆಯಲ್ಲಿ ದುಡಿಯುವ ವರೆಗೆ ಮಹಿಳೆ ಮುಂದುವರಿದಿದ್ದಾಳೆ. ಅವಳನ್ನು ಭಿನ್ನ ದೃಷ್ಟಿಕೋನದಿಂದ ನೋಡುವುದನ್ನು ನಿಲ್ಲಿಸಬೇಕು. ಸಂಪ್ರದಾಯ, ಸಂಸ್ಕೃತಿಗಳ ಹಿಂದಿರು ವೈಜ್ಞಾನಿಕತೆಯನ್ನು ಯುವಜನರಿಗೆ ತಿಳಿಯಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮನ್ವಯಕಾರ ನಂದನ್ ಪ್ರಭು ಅವರು ನಾವು ಸ್ವಾತಂತ್ರ್ಯ ಬಯಸುವುದು ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯಗಳನ್ನು ಉಳಿಸುವುದಕ್ಕಾಗಿ. ಭಾರತದ ಸ್ವಾತಂತ್ರ್ಯಕ್ಕೆ 75 ವರ್ಷಗಳಾಗುವ ಸಂದರ್ಭದಲ್ಲಿ ನಾವೊಮ್ಮೆ ಸಿಂಹಾವಲೋಕನ ಮಾಡಬೇಕಿದೆ. ಭಾರತದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಸೇರಿದಂತೆ ಎಲ್ಲಾ ವಲಯಗಳಲ್ಲಾದ ಬದಲಾವಣೆಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.