#MlrLitFest
  • mlrlitfest@gmail.com

ಗೋಷ್ಠಿ 2 : ನೆಲದ ಭಾಷೆ, ಮನದ ಮಾತು : ನವಭಾರತಕೆ ದೇಸೀ ಸೊಗಡಿನ ಬಗ್ಗೆ ದಾಖಲೀಕರಣವಾಗಬೇಕು

ಎರಡನೇ ಗೋಷ್ಠಿಯಲ್ಲಿ ‘ನೆಲದ ಭಾಷೆ, ಮನದ ಮಾತು : ನವಭಾರತಕೆ ದೇಸೀ ಸೊಗಡು ಬಗ್ಗೆ ಅಭ್ಯಾಗತರು ವಿಚಾರ ಮಂಡಿಸಿದರು. ಗೋಷ್ಠಿಯನ್ನು ಡಾ. ರೋಹಿಣಾಕ್ಷ ಶಿರ್ಲಾಲು ಅವರು ನಡೆಸಿಕೊಟ್ಟರು.

ಹಾವೇರಿ ಜಾನಪದ ವಿವಿಯ ಡಾ. ಆನಂದಪ್ಪ ಬಿ. ಎಚ್. ಜೋಗಿ ಮಾತನಾಡಿ, ಹಂಚಿ ಉಣ್ಣುವ ಪದ್ಧತಿ ನಮ್ಮಲ್ಲಿ ಕಡಿಮೆ ಆಗುತ್ತಿವೆಯಾ? ಎಂಬ ಚಿಂತನೆ ಮಾಡಬೇಕಾಗಿದೆ. ದೇಸೀ ಎಂಬುದು ನಿಸರ್ಗ ಜೀವಿಗಳನ್ನು ಸೂಚಿಸುತ್ತದೆ. ಇವರಲ್ಲಿ ಹಂಚಿ ತಿನ್ನುವ ಸೊಬಗನ್ನು ನಾವು ಗಮನಿಸಬಹುದು. ಅಲ್ಲಿ ಬೇಧವಿರಲಿಲ್ಲ. ಎಲ್ಲರಿಗೂ ಪಾಲಿತ್ತು. ದೇಸೀ ಜನರಲ್ಲಿ ಅಂತಹ ಅನ್ಯೋನ್ಯತೆ ಇತ್ತು. ಅದನ್ನು ಗೌರವಿಸಬೇಕಾಗಿದೆ. ದೇಸೀ ಹಿನ್ನೆಲೆಯ ಒಳಗೊಳ್ಳುವಿಕೆಯ, ನೆರವಾಗುವ ಮೂಲಕವೇ ನಾವು ಈ ಸಂಕಷ್ಟ‌ವನ್ನು ಎದುರಿಸಬಹುದಾಗಿದೆ. ಮಾನವೀಯತೆಯ ಮುಂದೆ ಯಾವ ಧರ್ಮ ಸಹ ಮುಖ್ಯ‌ವಲ್ಲ. ಸವಾಲಿಗೆ ಇದೇ ಉತ್ತರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವದ ಮೊಟ್ಟಮೊದಲ ಸಂಸ್ಕೃತಿ ನಿಸರ್ಗ, ಜನಪದ ಸಂಸ್ಕೃತಿ ಎಂದು ತಿಳಿಸಿದರು.

ಜಾನಪದ ವಿಶೇಷವಾದದ್ದು. ಅದಕ್ಕೆ ಒಂದು ಹಿನ್ನೆಲೆ ಇದೆ. ಇವೆಲ್ಲದರ ಬಗ್ಗೆಯೂ ಜನಪದದಲ್ಲಿ ನಾವು ಕಥೆ, ಹಾಡುಗಳನ್ನು ಗಮನಿಸಬಹುದು. ಇದೆಲ್ಲ ದೇಸೀ ಆಹಾರದಂತೆ. ಇದನ್ನು ಸೇವಿಸಿದಲ್ಲಿ ಮಾತ್ರ ಈ ಸಂಸ್ಕೃತಿ, ಕಲೆ ಉಳಿಯಲು ಸಾಧ್ಯ ಎಂದು ಆನಂದಪ್ಪ ಹೇಳಿದರು. ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ, ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳುವ ಕೆಲಸವಾಗಬೇಕು ಎಂದು ಹೇಳಿದರು. ನಮ್ಮದು ವೈಜ್ಞಾನಿಕವಾಗಿ ಚಿಂತನೆ ನಡೆಸುವ ಸಂಸ್ಕೃತಿ. ಈ ಸಂಸ್ಕೃತಿ ನಮ್ಮ ಹಿರಿಯರಾದ ಜನಪದರಲ್ಲಿತ್ತು ಎಂದು ತಿಳಿಸಿದರು. ಭಾರತದ ಸಂವಿಧಾನ‌ದಲ್ಲಿಯೂ ಜನಪದವನ್ನು ಗಮನಿಸಬಹುದು. ಸ್ವಾಮಿ ವಿವೇಕಾನಂದರೂ ಜನಪದದ ಬಗ್ಗೆ ಮಾತನಾಡಿದ್ದಾರೆ. ಇದು ಪಾರಂಪರಿಕ ಜ್ಞಾನ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಏಷ್ಯಾ‌ನೆಟ್ ಸುವರ್ಣ ಬೆಂಗಳೂರು ಇದರ ಕ್ರಿಯೇಟಿವ್ ಹೆಡ್ ಆಗಿರುವ ಸತ್ಯಬೋಧ್ ಜೋಶಿ ಮಾತನಾಡಿ, ತಾಂತ್ರಿಕ‌ತೆಯಿಂದ ಹೆಚ್ಚಿನ ವಿಚಾರಗಳನ್ನು ದಾಖಲೀಕರಿಸಿಡಲು, ಸಮಾಜಕ್ಕೆ ಯಾವುದನ್ನೋ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಮುಖ್ಯವಾಗುತ್ತದೆ. ಯಾವ ಮಹಾಕಾವ್ಯ‌ಗಳಲ್ಲಿ ಗುರುತಿಸಲಾಗಿಲ್ಲವೋ ಅವುಗಳನ್ನು ಜನಪದರು ಗುರುತಿಸಿದ್ದಾರೆ. ಇದನ್ನು ದಾಖಲೀಕರಿಸಲು ಸಾಧ್ಯವಿದೆ. ಗೊತ್ತಿಲ್ಲದ ಹಲವು ಕಥೆಗಳು ಜನಪದದ ಮೂಲಕ ತಿಳಿಯುವುದು ಸಾಧ್ಯವಿದೆ. ಅದು ಈ ನೆಲದ ಮಾತು. ಜನಪದ ಸಂಸ್ಕೃತಿ, ಆಚಾರ, ವಿಚಾರ, ಆಚರಣೆಗಳು ಈ ನೆಲದ ಮಾತು. ಇದನ್ನು ಕೂಡಿಡುವ ಕೆಲಸವನ್ನು ಮಾಡುವ ತುರ್ತು ನಮ್ಮದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನೆಲದ ಮಾತಾಗಿರುವ ಜನಪದ ಮಾಧ್ಯಮವನ್ನು ಜನರಿಗೆ ತಲುಪಿಸುವ, ದಾಖಲಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ ಎಂದು ತಿಳಿಸಿದರು.

ನಾವು ಏನು, ನಮ್ಮ ಸೊಬಗೇನು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ‌ಯ ದಾಖಲೀಕರಣವಾಗಬೇಕಿದೆ. ಎಷ್ಟೋ ಮಹಾಕಾವ್ಯ‌ಗಳು, ಪುಸ್ತಕಗಳು ಹೇಳದ ವಿಚಾರಗಳನ್ನು ಜನಪದದ ಮೂಲಕ ತಿಳಿಯಬಹುದು. ಅದನ್ನು ಮುಂದಿನ ಜನಾಂಗಕ್ಕೆ ತಿಳಿಸಲು ದಾಖಲೀಕರಣ ಪ್ರಕ್ರಿಯೆ ಮುಖ್ಯ‌ವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಯುವಜನತೆ ಗಮನಹರಿಸಬೇಕಿದೆ, ಆ ಇಚ್ಛೆ ಬೆಳೆಯಬೇಕಾಗಿದೆ ಎಂದು ಅವರು ಹೇಳಿದರು. ಜನಪದರ ನೆಲೆಗೇ ಹೋಗಿ ಆ ಸಂಸ್ಕೃತಿ‌ಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಡೆಯಬೇಕು. ಇದು ಇಂದಿನ ತುರ್ತು ಎಂದು ತಿಳಿಸಿದರು.

ಜಾನಪದ ಕಲಾವಿದೆ ಮಂಗಳಾ ಸಿದ್ದಿ ಅವರು ಮಾತನಾಡಿ, ಈ ಸಮಾಜದ ನೆಲದ ಮಾತನ್ನು ಉಳಿಸುವ ಕೆಲಸವನ್ನು ಹಿರಿಯರು ಮಾಡಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಜನಪದ ಎಂಬುದು ಕಳೆದು ಹೋಗುತ್ತದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಡೆಯಬೇಕು. ಆಧುನಿಕ ಶಿಕ್ಷಣ‌ದ ಜೊತೆಗೆ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ನೆಲದ ಸೊಗಡಾಗಿರುವ ಜನಪದವನ್ನು ಬೆಳೆಸುವ ಕೆಲಸ ಮಾಡಬೇಕು. ಆಗ ಇವುಗಳ ಉಳಿವು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನಪದವನ್ನು ದಾಖಲೀಕರಣ ಮಾಡುವ ಕೆಲಸವಾಗಬೇಕು ಎಂದು ನುಡಿದರು.

ನೆಲದ ಸಂಸ್ಕೃತಿ ಮೆರೆಯಬೇಕಾದವರು ಮರೆಯುತ್ತಿದ್ದೇವೆ. ಬೇರೆಯೇ ಲೋಕದಲ್ಲಿ ಬದುಕುತ್ತಿದ್ದೇವೆ. ಇದು ಅಪಾಯದ ಸನ್ನಿವೇಶವೋ, ಸವಾಲೋ ಎಂಬುದು ಇಂದಿನ ಪ್ರಶ್ನೆ. ಇದಕ್ಕೆ ಉತ್ತರ ನೆಲದ ಮಾತಾದ ಜನಪದದಲ್ಲಿ ಸಿಗುತ್ತದೆ. ಅವನ್ನು ಉಳಿಸಬೇಕು ಎಂದು ವಿಚಾರ ಸಂಕೀರ್ಣದ ಸಮನ್ವಯಕಾರ ರೋಹಿಣಾಕ್ಷ ಶಿರ್ಲಾಲು ತಿಳಿಸಿದರು.