#MlrLitFest
  • mlrlitfest@gmail.com

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಗಮನ ಸೆಳೆದ ಅರ್ಬನ್‌ ನಕ್ಸಲ್ಸ್ ಚರ್ಚೆ

Day 1 – 03-11-2018 at 2.15 pm @ Two Sides : Urban Naxals

ದೇಶದ ಗಮನ ಸೆಳೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವದ ಸಂವಾದ ಕಾರ್ಯಕ್ರಮದಲ್ಲಿ ಅರ್ಬನ್ ನಕ್ಸಲ್ ವಿಷಯವಾಗಿ ನಡೆದ ಸಂವಾದ ಎಲ್ಲರ ಗಮನ ಸೆಳೆಯಿತು.

ವಿವೇಕ್ ಅಗ್ನಿಹೋತ್ರಿಯವರೊಂದಿಗೆ ಆರ್. ಜಗನ್ನಾಥನ್ ಅವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅರ್ಬನ್ ನಕ್ಸಲರಿಗೆ ಕಳ್ಳಸಾಗಾಣಿಕೆಯೇ ಪ್ರಮುಖ ಆದಾಯಮೂಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಸಮಾಜ ಸೇವಕಿಯೆನ್ನುವ ಸೋಗಿನಲ್ಲಿ ಅರ್ಬನ್ ನಕ್ಸಲ್ ಮಹಿಳೆಯೊಬ್ಬರು ನಡೆಸುತ್ತಿರುವ NGO ಒಂದು ನೂರು ಪ್ರತಿಶತ ನಕ್ಸಲರಿಗಾಗಿಯೇ ಕೆಲಸ ಮಾಡುತ್ತಿರುವುದನ್ನು ನಾನು ಬಲ್ಲೆ ಎಂದು ಅವರು ತಿಳಿಸಿದರು.

ಯಾವುದೇ ಪೋಷಕರೂ ವಿದ್ಯಾರ್ಜನೆಗೆ ತೆರಳುವ ತಮ್ಮ ಮಕ್ಕಳಿಗೆ ವಿದ್ಯಾವಂತನಾಗಿ ದೇಶದ ವಿರುದ್ಧ ಮಾತನಾಡು ಎಂದು ಹೇಳುವುದಿಲ್ಲ. ಆದರೆ ವಿಶ್ವವಿದ್ಯಾಲಯಗಳಲ್ಲಿ ಓದಿದ ಕೆಲವರು ದೇಶದ ವಿರುದ್ಧ ಮಾತನಾಡುತ್ತಾರೆ ಎಂದರೆ ಸಮಸ್ಯೆಯ ಮೂಲ‌ ಎಲ್ಲಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಲಾಲ್ ಬಹಾದುರ್ ಶಾಸ್ತ್ರೀಜಿಯವರ ಮರಣದ ಕೆಲವೇ ಸಮಯದಲ್ಲಿ ದೇಶದಲ್ಲಿ ನಕ್ಸಲ್ ಚಟುವಟಿಕೆ ಆರಂಭವಾಯಿತು ಎನ್ನುವ ಮೂಲಕ ಹೊಸ ವಿಚಾರವೊಂದರ ಬಗ್ಗೆ ಬೆಳಕು ಚೆಲ್ಲಿದ ಅವರು ಶಾಸ್ತ್ರೀಜಿಯವರ ಸಾವಿನ‌ ಕುರಿತಾಗಿ ಬರುತ್ತಿರುವ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ವಿವರಿಸಿದರು.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಉಂಟಾದ ಹತ್ಯೆಗಳಿಗಿಂತಲೂ ಹಲವು ಪಟ್ಟು ಹೆಚ್ಚು ಹತ್ಯೆಗಳು ನಕ್ಸಲರಿಂದಾಗಿವೆ. ಆದರೆ ಅವು ಹೆಚ್ಚು ಸುದ್ದಿಯಾಗುತ್ತಿಲ್ಲ. ಮೊನ್ನೆ‌ತಾನೇ ನಕ್ಸಲರಿಂದ ಹತ್ಯೆಯಾದ ದೂರದರ್ಶನದ ಸಿಬ್ಬಂದಿಯ ಸುದ್ದಿ ಇಂದಿನ ಮಾಧ್ಯಮಗಳಿಗೆ ಸುದ್ದಿಯೇ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊನೆಯಲ್ಲಿ ನಡೆದ ಸಭಿಕರೊಂದಿಗಿನ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಸಭಿಕರು ಅತ್ಯಾಸಕ್ತಿಯಿಂದ ಭಾಗವಹಿಸಿದ್ದರು.