ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಆರ್. ಜಗನ್ನಾಥ್, ಅರವಿಂದನ್ ನೀಲಕಂದನ್ ಮತ್ತು ಜಯ್‌ದೀಪ್ ಶೆಣೈ ಅವರು Idea of Bharath- Hindutva, Dharma and The way forward ಕುರಿತು ಸಂವಾದ ನಡೆಸಿದರು.
ಆರ್. ಜಗನ್ನಾಥ್ ಅವರು ಮಾತನಾಡಿ, ಹಿಂದೂ ಇದ್ದಾಗ ಹಿಂದುತ್ವ ಇದ್ದೇ ಇರುತ್ತದೆ. ನಮ್ಮದು ಧಾರ್ಮಿಕ ರಾಷ್ಟ್ರ. ಸಿಸಿಎ ಬಗೆಗಿನ ಸಂದರ್ಭದಲ್ಲಿ ಕೆಲವೊಂದು ಸಂಗತಿಗಳು ನಮಗೆ ಅರಿವಿಗೆ ಬಂತು. ಅದೇನೆಂದರೆ ಹಿಂದೂವಾಗಿ ನೀವು ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನ್‌ನಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುವಂತಿಲ್ಲ. ಆದರೆ ಪ್ಯಾಲೆಸ್ತೇನ್ ಬಗ್ಗೆ ಮಾತನಾಡಬಹುದು. ಧರ್ಮವೆಂದರೆ ಇದ್ದ ಅವಕಾಶಗಳಲ್ಲಿ ಸೂಕ್ತವಾದ, ಸರಿಯಾದ ಅವಕಾಶವನ್ನು ಬಳಸಿಕೊಳ್ಳುವುದು, ಸರಿಯಾದುದನ್ನು ಮಾಡುವುದು. ರಾಜಧರ್ಮ ಕೂಡ ಸರಿಯಾದ ಕಾರ್ಯ ಮಾಡುವುದೇ ಆಗಿದೆ. ಸ್ವಧರ್ಮ ನಮ್ಮ ಸ್ವಭಾವದಿಂದ ಬರುತ್ತದೆ. ಸರ್ಕಾರಗಳಿಗೆ ಎಲ್ಲರನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಹಿಂದೂಗಳಿಗೆ ಮಾತ್ರವಲ್ಲ ಎಲ್ಲರಿಗೂ ಸೇರಿರುವುದರಿಂದ ಅದು ಸಮತೋಲಿತವಾಗಿ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿ ದೇಗುಲಗಳನ್ನು ಸರ್ಕಾರ ನಡೆಸುವುದು ಸಮಂಜಸವಾದ ಕಾರ್ಯವಲ್ಲ. ಮತಾಂತರಗಳು ಹಿಂದೂಗಳ ಸಂಖ್ಯೆಯನ್ನು ಸಾಕಷ್ಟು ಕುಗ್ಗಿಸಿದೆ. ಆಂಧ್ರದ ಉದಾಹರಣೆ ತೆಗೆದುಕೊಂಡರೆ 2 ಶೇಕಡಾ ಕ್ರೈಸ್ಥರಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಅಲ್ಲಿನ ಚರ್ಚ್‌ಗಳ ದಾಖಲೆ ನೋಡಿದರೆ ಶೇ.12ರಷ್ಟು ಕ್ರೈಸ್ಥರಿರುವ ಸಾಧ್ಯತೆ ಇದೆ. ಹೀಗಾಗಿ ಹಿಂದೂಗಳು ಬಹುಸಂಖ್ಯಾತರು ಎಂಬುದು ವಾಸ್ತವದಲ್ಲಿ ಇಲ್ಲ. 90% ಹಿಂದೂಗಳು ಭಾರತದಲ್ಲೇ ಇದ್ದಾರೆ. ಹೀಗಾಗಿ ಹೊರಗಿನ ಹಿಂದೂಗಳ ಹಕ್ಕಿನ ಬಗ್ಗೆ ಮಾತನಾಡುವುದಕ್ಕೆ ಮಹತ್ವ ಸಿಗುತ್ತಿಲ್ಲ ಎಂದರು.
ಅರವಿಂದನ್ ನೀಲಕಂದನ್ ಅವರು ಮಾತನಾಡಿ, ಹಿಂದೂಗಳು ಕೇವಲ ಧಾರ್ಮಿಕ ಬಹುಸಂಖ್ಯಾತರು, ರಾಜಕೀಯ ಬಹುಸಂಖ್ಯಾತರಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತಿಲ್ಲ. ಪ್ರಸ್ತುತ ಹಿಂದೂಗಳು ಅಪಾಯದಲ್ಲಿದ್ದಾರೆ. ಬಾಂಗ್ಲಾ, ಪಾಕಿಸ್ಥಾನದಲ್ಲಿ ಹಿಂದೂಗಳು ಅಳಿವಿನಂಚಿನಲ್ಲಿದ್ದಾರೆ. ಭಾರತದಲ್ಲಿ ಕಾರ್ಯಾಚರಿಸುತ್ತಿರುವ ವಿದೇಶಿ ಸಂಘಟನೆಗಳಿಂದ ಹಿಂದೂಗಳಿಗೆ ಅಪಾಯ ಎದುರಾಗುತ್ತಿದೆ. ಅಲ್ಪಸಂಖ್ಯಾತರನ್ನು ಭಾಷೆ, ಜನಾಂಗ, ಲಿಂಗ ಆಧಾರಿತವಾಗಿ ನಿರ್ಧರಿಸಬೇಕೇ ಹೊರತು ಧಾರ್ಮಿಕವಾಗಿ ಅಲ್ಲ. ಸಂವಿಧಾನದ ಪ್ರಕಾರ ಧರ್ಮ ಎಂದರೆ ನ್ಯಾಸ ಸ್ಥಾಪನೆ. ರಾಜಧರ್ಮವೆಂದರೆ ಅಧಿಕಾರವಿಲ್ಲದವರಿಗೆ ನ್ಯಾಯ ದೊರಕಿಸುವುದು. ಜನಾಂದೋಲನ ನಡೆದಾಗ ಮಾತ್ರ ವಿಷಯದ ಬಗ್ಗೆ ಗಮನ ನೀಡುತ್ತದೆ. ಉದಾಹರಣೆಗೆ ರಾಮ ಜನ್ಮಭೂಮಿ, 370ನೇ ವಿಧಿ ವಿಷಯದಲ್ಲಿ ಚಳುವಳಿಗಳು ನಡೆದಿತ್ತು. ಹೀಗಾಗಿ ಸರ್ಕಾರ ಆ ವಿಷಯಕ್ಕೆ ಒತ್ತು ನೀಡಿ ಸಮಸ್ಯೆ ಬಗೆಹರಿಸಿತು. ಆದರೆ ಪಠ್ಯ ಪುಸ್ತಕ ವಿಷಯದಲ್ಲಿ ಸಾಮೂಹಿಕ ಚಳುವಳಿ ಇಲ್ಲದ ಕಾರಣ ಸರ್ಕಾರ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸರ್ಕಾರವನ್ನು ರಾಜಕೀಯ ಪಕ್ಷಗಳು ನಡೆಸುವ ಕಾರಣ ಜನರ ಒತ್ತಡವಿದ್ದಾಗ ಮಾತ್ರ ಅವು ಬದಲಾವಣೆಯನ್ನು ತರಲು ಮುಂದಾಗುತ್ತವೆ. ಒಂದು ಸರ್ಕಾರದಲ್ಲಿ ಆದ ಕಾರ್ಯವನ್ನು ಇನ್ನೊಂದು ಸರ್ಕಾರ ಅಳಿಸಿ ಹಾಕುತ್ತದೆ. ಆದರೆ ಜನರ ಬೆಂಬಲವಿರುವ ವಿಷಯಗಳಲ್ಲಿ ಇದು ಸಾಧ್ಯವಾಗುವುದಿಲ್ಲ ಎಂದರು.