
ಕಲೆ ಮನುಷ್ಯನ ಭಾವವಲಯವನ್ನು ಆವರಿಸಿಕೊಳ್ಳುತ್ತದೆ ಎಂಬುದು ಸಾಮಾನ್ಯ ಜ್ಞಾನ. ಬಹುತೇಕ ಕಲಾವಿದರು ತಮ್ಮ ಭಾವವಲಯವನ್ನು ಆವರಿಸಿಕೊಂಡ ವಿಷಯಗಳಿಂದಲೇ ಕಲಾನಿರ್ಮಾಣ ಮಾಡಿ ರಸಿಕರ ಭಾವವಲಯವನ್ನು ಮುಟ್ಟುತ್ತಾರೆ.
ಆದರೆ ಕೆಲವು ಕಲಾವಿದರಿಗೆ ಈ ವಲಯದ ಅಂತರ್ಭಿತ್ತಿಯ ಬೌದ್ಧಿಕ ಅರಿವಿರುತ್ತದೆ. ಅಂಥವರಿಗೆ ಭಾವಸಾಗರದಲ್ಲಿ ಯಾವ ಅಲೆ ಏಕೆ ಏಳುತ್ತದೆ ಎಂಬುದು ತಿಳಿದಿರುತ್ತದೆ. ಎಷ್ಟು ಏಟು ಹಾಕಿದರೆ ಎಷ್ಟು ಚಿಪ್ಪೇಳುತ್ತದೆ ಎಂಬುದು ಅಂಥವರಿಗೆ ಗೊತ್ತಿರುತ್ತದೆ. ಅಂತಹ ಕಲಾವಿದರನ್ನು ನಮ್ಮ ಪರಂಪರೆಯು ಜ್ಞಾತಶಿಲ್ಪಿ ಎಂದು ಕರೆದಿದೆ.
ಶ್ರೀಮಾನ್ ಭೈರಪ್ಪನವರು ಅಂತಹಾ ಕಲಾವಂತಿಕೆಗೆ ಉದಾಹರಣೆಯಾಗಿ ನಿಲ್ಲುತ್ತಾರೆ.
ದೈವಕೃಪೆಯಿಂದಲೋ, ಜೀವನಾನುಭವದಿಂದಲೋ ಈ ಜ್ಞಾನವನ್ನು ಪಡೆದವರು ಕಲಾನಿರ್ಮಾಣ ಮಾಡಿದಾಗ ರಸಿಕರಿಗೆ ಬುದ್ಧಿಭಾವಗಳೆರಡೂ ಪ್ರಚೋದಿತವಾಗುತ್ತವೆ. ಭೈರಪ್ಪನವರ ಕಾದಂಬರಿಗಳನ್ನು ಓದುವ ಪ್ರತಿ ವ್ಯಕ್ತಿಯೂ ಇದಕ್ಕೆ ಜೀವಂತ ಸಾಕ್ಷಿ.
ತೀರಾ ಎಳೆವೆಯಿಂದಲೇ ಬಾಳಿನ ಕಠಿಣ ಪರೀಕ್ಷೆಗಳನ್ನು ಎದುರಿಸುತ್ತಾ ಬೆಳೆದ ಭೈರಪ್ಪನವರು, ತಮ್ಮ ಕ್ರತುಶಕ್ತಿಯಿಂದ ಜೀವನವನ್ನು ತಹಬಂದಿಗೆ ತಂದುಕೊಂಡವರು. Unfair ಜೀವನಕ್ಕೆ ಪಕ್ಕಾದವರಲ್ಲಿ ಗಾಢವಾದ ಆಲೋಚನೆಗಳು ಏಳುವುದು ಸಹಜವೇ ತಾನೆ. ಆದರೆ ದೈವಕೃಪೆಯಿಂದ ಆ ಆಲೋಚನೆಗಳು ಭೈರಪ್ಪನವರ ಮನಸ್ಸನ್ನು ರೂಕ್ಷವಾಗಿಸದೆ ಸೃಜನಾತ್ಮಕವಾಗಿಸಿತು.
ಬದುಕಿನಲ್ಲಿ ತಮ್ಮನ್ನು ಆಳವಾಗಿ ಕಾಡಿದ ಎಲ್ಲ ಸಂಗತಿಗಳನ್ನೂ ಅವರು ಕಾದಂಬರಿಯಾಗಿಸಿದ್ದಾರೆ. ಕಾದಂಬರಿಯಾಗುವಷ್ಟು ಸತ್ವವಿಲ್ಲದ ಭಾವಗಳು ಅವರ ಜೀವನವನ್ನೂ ಕಾಡಲಾರದೆ ಸೋತಿವೆ. ಹಾಗಾಗಿಯೇ ಅವರನ್ನು ಅರಸಿಕೊಂಡು ಬಂದ ಅಭಿಮಾನ ಮತ್ತು ಬೆರೆಸಿಕೊಂಡು ಬಂದ ಟೀಕೆಗಳೆರಡಕ್ಕೂ ಅವರಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.
ಇದು ಕೇವಲ ನಿರ್ಲಿಪ್ತ ಮನಸ್ಥಿತಿ ಮಾತ್ರವಲ್ಲ. ಇದು ಬೌದ್ಧಿಕ ಸೌಷ್ಠವ ಹೊಂದಿರುವ ವ್ಯಕ್ತಿಯೊಬ್ಬನ ಸಹಜ ನಡವಳಿಕೆ.
ಹೊರಗಿನ ಪ್ರಭಾವಗಳನ್ನು ತನ್ನೊಳಗೆ ಬಿಟ್ಟುಕೊಂಡು ತಾನು ಕಾದಂಬರಿಗಳನ್ನು ರಚಿಸುವುದಿಲ್ಲ ಎಂದು ತೀರ್ಮಾನಿಸಿದ ಮೇಲೆ, ಕಾದಂಬರಿ ಮತ್ತು ಓದುಗನ ನಡುವೆ ತಾನು ಬರುವುದೂ ಹೊರಗಿನ ಪ್ರಭಾವವೇ ಎಂಬ ಅರಿವು ಅವರಿಗಿತ್ತು.
ಹಾಗಾಗಿಯೇ ಭೈರಪ್ಪ ಎಂಬ ವ್ಯಕ್ತಿಯ ಪರಿಚಯದ ಗೋಜೇ ಇಲ್ಲದೆ ಅವರ ಬರಹಗಳೇ ಅಭಿಮಾನಿಗಳನ್ನೂ ವಿರೋಧಿಗಳನ್ನೂ ಹುಟ್ಟುಹಾಕಿತು.
ಮಹಾನ್ ಲೇಖಕ. ಪ್ರತಿಗಾಮಿ ಬರಹಗಾರ, ಸರಸ್ವತಿ ಪುತ್ರ, ಕೋಮುವಾದಿ ಇತ್ಯಾದಿ ಪರಸ್ಪರ ವಿರೋಧಿ ಅಭಿಪ್ರಾಯಗಳು ತನ್ನ ಸುತ್ತಮುತ್ತಲೇ ಓಡಾಡುತ್ತಿದ್ದರೂ, ಭೈರಪ್ಪನವರು ಮಾತ್ರ ತಮ್ಮ ರಸವ್ರತವನ್ನು ಕೆಡಿಸಿಕೊಳ್ಳಲಿಲ್ಲ. ಹಲವು ವರ್ಷ ಕರ್ನಾಟಕದಿಂದ ಹೊರಗಿದ್ದದ್ದೂ ಅವರಿಗೆ ಸಹಕಾರಿಯೇ ಆಯಿತು. ನಿರಂತರವಾಗಿ ಮಹತ್ವದ ಕಲಾಕೃತಿಗಳನ್ನು ಕೊಡುತ್ತಾ ಬಂದರು.
ಹೀಗೆ ತಮ್ಮ ಜೀವನಾನುಭವವನ್ನು ಬುದ್ಧಿಭಾವಗಳ ಮೂಸೆಯಲ್ಲಿ ತೀಡಿ ಅವುಗಳಲ್ಲಿ ಕಲಾವ್ಯಾಪ್ತಿಗೆ ಬರುವ ವಿಷಯಗಳನ್ನು ಕಾದಂಬರಿಯಾಗಿಸುತ್ತಿದ್ದ ಭೈರಪ್ಪನವರಿಗೆ ಒಂದು ಹಂತದಲ್ಲಿ ಅರ್ಥಬಂಧಿಯಾದ ಭಾಷೆಯಲ್ಲಿ ನಿಜವಾದ ಭಾವದ ಔನ್ನತ್ಯವನ್ನು ಮುಟ್ಟಲಾಗದು ಎಂದು ಅನಿಸಿದೆ. ‘ನಾನು ಮುಂದಿನ ಜನ್ಮದಲ್ಲಿ ಸಂಗೀತಗಾರನಾಗುತ್ತೇನೆ’ ಎಂದೂ ಅವರು ಹೇಳಿದ್ದರು.
ಹೀಗೆ ಅನಿಸಿದ ನಂತರ ಅವರು ಭಾಷಾ/ಕಾದಂಬರಿ ಮಾಧ್ಯಮದಲ್ಲಿ ಸೃಷ್ಟಿಸಿದ ಕೃತಿಗಳು ಸತ್ತ್ವದಲ್ಲಿ ಮಕ್ಕಾಗತೊಡಗಿದ್ದೂ ನಿಜ.
ಜೀವನವು ತಮಗೊದಗಿಸಿದ ಸನ್ನಿವೇಶಗಳ ಕಾರಣದಿಂದ ಬದುಕಿನ ಆಳವಾದ ಪ್ರಶ್ನೆಗಳನ್ನು ಕೆದಕಿದ್ದ ಭೈರಪ್ಪನವರು ಶಾಶ್ವತ ಎನ್ನಬಹುದಾದ ಸಾಹಿತ್ಯವನ್ನು ರಚಿಸಿದರು. ಆದರೆ ತಮ್ಮ ಉತ್ತರೋತ್ತರ ಜೀವನದಲ್ಲಿ ಕೇವಲ ಸಾಮಾಜಿಕ, ರಾಜಕೀಯ, ಬೌದ್ಧಿಕ ಚೋದನೆಯಂತಹ ಪ್ರಶ್ನೆಗಳನ್ನು ಮಾತ್ರ ಎದುರುಗೊಂಡ ಭೈರಪ್ಪನವರು ಅದರ ಫಲವಾಗಿ ತೀರಾ ಸಾಧಾರಣ ಎನ್ನಬಹುದಾದ ಕಾದಂಬರಿಗಳನ್ನೂ ರಚಿಸಿದರು.
ಆದರೆ ಈ ಯಾವ ಹಂತದಲ್ಲೂ ಅವರ ಕಾದಂಬರಿಗಳು ಅವರ ಜನಪ್ರಿಯತೆಯನ್ನೂ ಚರ್ಚೆ ಹುಟ್ಟುಹಾಕುವ ಬಲವನ್ನೂ ಕುಂದಿಸಲಿಲ್ಲ.
ಭೈರಪ್ಪನವರಂತಹ ವ್ಯಕ್ತಿಯನ್ನು ನೋಡಿದಾಗ ‘ಇವರದ್ದು ತುಂಬು ಜೀವನ’ ಎಂದು ಹೇಳುವುದೂ ಕಡಿಮೆ ಎನಿಸುತ್ತದೆ.
ಹುಟ್ಟಿನಿಂದಲೇ ನೂರಾರು ಘಟನೆಗಳಿಗೆ ಸಾಕ್ಷಿಯಾದ ಭೈರಪ್ಪನವರು, ನೆನ್ನೆ ಸಾವು ಎಂಬ ಘಟನೆಯನ್ನೂ ಎದುರುಗೊಂಡಿದ್ದಾರೆ. ಅದಕ್ಕಾಗಿ ಈ ಶ್ರದ್ಧಾಂಜಲಿ.
ಉಳಿದಂತೆ ಅವರ ಕಾದಂಬರಿಗಳ ಓದು ಮುಂದುವರೆಯಲಿದೆ.
ಭೈರಪ್ಪನವರು ಎರಡು ಸಾರಿ ನಮ್ಮ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡು, ಬೆರೆತು ಒಡನಾಡಿದ್ದು ನಮಗೆ ಅಚ್ಚಳಿಯದ ನೆನಪು.
ಜಯಂತಿ ತೇ ಸುಕೃತಿನೋ ರಸಸಿದ್ಧಾಃ: ಕವೀಶ್ವರಾಃ: ।
ನಾಸ್ತಿ ತೇಷಾಂ ಯಶ:ಕಾಯೇ ಜರಾಮರಣಜಂ ಭಯಮ್ || ಭರ್ತೃಹರಿ ||
ಅರುಣ ಭಾರದ್ವಾಜ
ಲೇಖಕ