#MlrLitFest
  • mlrlitfest@gmail.com

ಮಂಗಳೂರು ಲಿಟ್ ಫೆಸ್ಟ್‌ 2018 ಸಮಾರೋಪ

ದ ಐಡಿಯಾ ಆಫ್ ಭಾರತ್ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ಕಡಲ ನಗರಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಲಿಟ್ ಫೆಸ್ಟ್‌ ಸಾಹಿತ್ಯ ಉತ್ಸವ ನವೆಂಬರ್ 4ರ ಸಂಜೆ ವಿದ್ಯುಕ್ತವಾಗಿ ತೆರೆ ಕಂಡಿತು.

ಎರಡು ದಿನಗಳಲ್ಲಿ ಹದಿನೆಂಟು ತುಂಬಿದ ಸಭೆಗಳನ್ನು ಕಂಡ ಮಂಗಳೂರು ಲಿಟ್ ಫೆಸ್ಟ್‌ ಮಂಗಳೂರಷ್ಟೇ ಅಲ್ಲದೇ ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಸಾಹಿತ್ಯಪ್ರಿಯರ ಮನತಣಿಸಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪದ್ಮಭೂಷಣ ಡಾ. ಬಿ.ಎಂ.ಹೆಗ್ಡೆ ಅವರು ಭಾರತೀಯ ಔಷಧ ಪದ್ಧತಿಯ ಆಯುರ್ವೇದ ವಿಜ್ಞಾನದ ಮಹತ್ವಗಳನ್ನು ವಿವರಿಸಿದರು.

ಭಾರತೀಯ ಆಧ್ಯಾತ್ಮಿಕ, ವೈಜ್ಞಾನಿಕ, ವ್ಯಾವಹಾರಿಕ ಜ್ಞಾನಗಳ ಬಗ್ಗೆ ವಿವರಿಸಿದ ಗೋವಾ NITTE ಗೋವಾದ ಪ್ರಾಂಶುಪಾಲರಾದ ಗೋಪಾಲ್ ಮುಗ್ರೆ ಅವರು, ಇದೀಗ ವಿದ್ಯಾರ್ಥಿಗಳು ಭಾರತದಲ್ಲೇ ಇದ್ದು ಸಾಧಿಸಲು ಮುಂದಾಗುತ್ತಿರುವ ಸಕಾರಾತ್ಮಕ‌ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದರು.

ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಚಾಲಕರಾದ  ಜೆ. ನಂದಕುಮಾರ್ ಅವರು ಮಾತನಾಡುತ್ತಾ, ಭಾರತೀಯ ಪರಿಕಲ್ಪನೆಯೆನ್ನುವುದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ. ಆದ್ದರಿಂದ ಆಂಗ್ಲರು ಬಂದ ನಂತರ ಇಂಡಿಯಾವನ್ನು ಕಟ್ಟಲಾಯಿತು ಎನ್ನುವುದರಲ್ಲಿ ಅರ್ಥವಿಲ್ಲ ಎಂದು ವಿವರಿಸಿದ ಅವರು ಭಾರತ್ ತೇರೇ ತುಕಡೇ ಹೋಂಗೇ ಎನ್ನುವ ಘೋಷಣೆಗಳನ್ನು ಹೊರಡಿಸುತ್ತಿರುವವರ ಹಿಂದಿನ ಆಘಾತಕಾರೀ ಸಂಚುಗಳನ್ನು ವಿವರಿಸಿದರು. ಶ್ರೇಷ್ಠ ಸಂಸ್ಕೃತಿಯುಳ್ಳವನು ಎನ್ನುವ ಅರ್ಥವಿರುವ ಆರ್ಯ ಎನ್ನುವ ಪದದ ಅರ್ಥವನ್ನು ಉದ್ದೇಶವಾಗಿ ಹೇಗೆ ತಿರುಚಲಾಗಿದೆ ಎನ್ನುವುದನ್ನು ಅವರು ಎಳೆ ಎಳೆಯಾಗಿ ಬಿಡಿಸಿಟ್ಟರು. ಮಂಗಳೂರು ಲಿಟ್ ಫೆಸ್ಟ್‌ ಎನ್ನುವ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ ಆಯೋಜಕರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಎರಡು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದ ಎಲ್ಲಾ ಸಾಹಿತ್ಯ ಪ್ರೇಮಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಲಾಯಿತು.