#MlrLitFest
  • mlrlitfest@gmail.com

ಆಳವಾದ ಪಾರಂಪರಿಕ ದೃಷ್ಟಿಯಿಂದ ಹಿಂದೂ ಧರ್ಮವನ್ನು ನೋಡಬೇಕಿದೆ : ಡೇವಿಡ್ ಫ್ರಾಲಿ

Day 1 – 03-11-2018 at 11.30 am @ Two Sides : Reclaiming the True Hindu Narrative

’ಮಂಗಳೂರು ಲಿಟ್ ಫೆಸ್ಟ್’ನಲ್ಲಿ ಖ್ಯಾತ ಹಿಂದೂ ಚಿಂತಕ ಡೇವಿಡ್ ಫ್ರಾಲಿಯವರು, ’ರಿಕ್ಲೇಮಿಂಗ್ ದಿ ಟ್ರೂ ಹಿಂದೂ ನರೇಟಿವ್’ ಎಂಬ ವಿಷಯದ ಬಗ್ಗೆ ಸಂವಾದ ನಡೆಸಿದರು. ಈ ಸೆಷನ್‌ನನ್ನು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರಿಸರ್ಚ್ ಫೌಂಡೇಶನ್ ನಿರ್ದೇಶಕ ಅನಿರ್ಬನ್ ಗಂಗೂಲಿ ನಡೆಸಿಕೊಟ್ಟರು.

200 ವರ್ಷಗಳ ಹಿಂದೆ ತಿರುಗಿ ನೋಡಿದರೆ ಭಾರತೀಯ ಸಂಸ್ಕೃತಿ, ಧಾರ್ಮಿಕತೆಯನ್ನು ತುಳಿಯುವ ಕಾರ್ಯ ನಿರಂತರ ನಡೆದಿರುವುದನ್ನು ನಾವು ಕಾಣಬಹುದು. 1947ರ ಬಳಿಕವೂ ಕಮ್ಯೂನಿಸಂ ಮಾದರಿಯಲ್ಲಿ ಬ್ರಿಟಿಷರು ಭಾರತದಲ್ಲಿ ಅಸ್ತಿತ್ವದಲ್ಲಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆಯೊಳಗೂ ಮಾರ್ಕ್ಸ್‌ವಾದ ನುಸುಳಿದೆ ಎಂದರು.

ಭಾರತ ಕೇವಲ ಒಂದು ರಾಜಕೀಯ ದೇಶವಲ್ಲ, ಅದು ಭಾರತೀಯ ಧಾರ್ಮಿಕ ಏಕತೆಯಾಗಿದೆ. ಹಿಂದೂ ಧರ್ಮದೊಳಗೆ ಹಲವಾರು ಧರ್ಮಗಳಿವೆ. ಎಲ್ಲಾ ಬಗೆಯ ಆಧ್ಯಾತ್ಮ, ಎಲ್ಲಾ ಬಗೆಯ ಸಾಧನಗಳು ಹಿಂದೂ ಧರ್ಮದೊಳಗಿದೆ. ಆಧ್ಯಾತ್ಮ ಪ್ರಜಾಪ್ರಭುತ್ವ, ಯೋಗ ಪ್ರಮುಖ ಅಂಶಗಳಾಗಿವೆ. ವೇದ ಎಂದರೆ ಜ್ಞಾನದ ಮಾರ್ಗ, ವಿಶ್ವದ ಅನೇಕ ವಿಜ್ಞಾನಗಳು ಹಿಂದೂ ವೇದಿಕ ಪರಂಪರೆಯಲ್ಲಿವೆ. ಈ ಪರಂಪರೆ ಎಲ್ಲಾ ವಿಧದ ಜ್ಞಾನಗಳನ್ನು ಉತ್ತೇಜಿಸುತ್ತದೆ ಎಂದರು.

ವೇದ ಎಂದರೆ ಜ್ಞಾನ, ಯೋಗ ಎಂದರೆ ಅಭ್ಯಾಸ. ಹಿಂದೂ ಧರ್ಮ ಎಂದರೆ ಕೇವಲ ಜೀವನ ಮಾರ್ಗವಲ್ಲ, ಅದು ಅರಿವಿನ ಮಾಗ, ಯೋಗದ ಮಾರ್ಗ. ಭಾರತೀಯ ಸಂಸ್ಕೃತಿಯಲ್ಲಿ, ಪರಂಪರೆಯಲ್ಲಿ ಹಿಂದೂ ಗುರುತಿಸುವಿಕೆ ಇದೆ. ಇಂಡೋನೇಷ್ಯಾ, ಹಿಂದೂ ಮಹಾಸಾಗರ, ಇಂಡೋ-ಚೀನಾ ಹೀಗೆ ಎಲ್ಲಾ ಕಡೆಯೂ ಹಿಂದೂ ಸಾರವಿದೆ ಎಂದರು.

ಆಳವಾದ ಪಾರಂಪರಿಕ ದೃಷ್ಟಿಯಿಂದ ಹಿಂದೂ ಧರ್ಮವನ್ನು ನೋಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಭಾರತದಲ್ಲಿ ಅತಿಶ್ರೇಷ್ಠ ಧಾರ್ಮಿಕ ನಾಗರಿಕತೆ ಇದೆ, ಇದು ಜಗತ್ತಿನ ಅತೀ ಶ್ರೇಷ್ಠ ನಾಗರಿಕತೆಯಾಗಿದೆ. ಹಲವಾರು ದಾಳಿಗಳನ್ನು ಎದುರಿಸಿ ಬದುಕುಳಿದಿರುವ ನಾಗರಿಕತೆ ಇದಾಗಿದೆ. ವಿದೇಶಿಯರೂ ನೆನಪಿನ ಶಕ್ತಿಗಾಗಿ, ಉತ್ತಮ ಬದುಕಿಗಾಗಿ ಧ್ಯಾನ, ಯೋಗಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು.

ಕೆಲವರ್ಷಗಳ ಹಿಂದೆ ಭಾರತದಲ್ಲಿನ ಕೆಲ ರಾಜಕಾರಣಿಗಳು ತಮ್ಮನ್ನು ಹಿಂದೂ ಎನ್ನಲು ನಾಚಿಕೆಪಡುತ್ತಿದ್ದರು, ಆದರೆ ಇಂದು ಅವರು ಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ, ದೇಗುಲ ದರ್ಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಯಾರು ಕೆಟ್ಟ ಹಿಂದೂ, ಯಾರು ಒಳ್ಳೆಯ ಹಿಂದೂ ಎಂಬ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದಾರೆ ಎಂದ ಅವರು, ನರೇಂದ್ರ ಮೋದಿಯವರು ಸಾರ್ವಜನಿಕವಾಗಿ ಹಿಂದೂ ಧರ್ಮವನ್ನು ಗೌರವಿಸಿದರು. ಈ ಮೂಲಕ ಭಾರತದ ಪರಂಪರೆಯನ್ನು ಪಾಲಿಸಿದರು ಎಂದರು.

ಮಾರ್ಕ್ಸ್ ಸಿದ್ಧಾಂತಗಳಿಂದ ಭಾರತವನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಶಿಕ್ಷಣದಲ್ಲಿ ಹಿಂದೂ ಧರ್ಮದ ಬೋಧನೆಗಳನ್ನು ಅಳವಡಿಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಅನಿರ್ಬನ್ ಗಂಗೂಲಿ ಮಾತನಾಡಿ, ಸರ್ದಾರ್ ವಲ್ಲಭಾಬಾಯ್ ಪಟೇಲರು ಕೇವಲ ಭಾರತವನ್ನು ಒಗ್ಗೂಡಿಸಿಲ್ಲ, ಹಿಂದೂಗಳ ಭಾವನೆಯನ್ನು ಅರ್ಥೈಸಿದ್ದರು. ಮೊಘಲರ ದಾಳಿಯಿಂದ ಧ್ವಂಸವಾಗಿದ್ದ ಸೋಮನಾಥ ದೇಗುಲವನ್ನು ಮರಳಿ ನಿರ್ಮಿಸಬೇಕು, ಆಗ ಮಾತ್ರ ಹಿಂದೂಗಳಿಗೆ ನಿಜವಾದ ಸ್ವತಂತ್ರರಾಗಿದ್ದೇವೆ ಎಂಬ ಭಾವ ಬರುತ್ತದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. ನೆಹರೂ ಇದನ್ನು ವಿರೋಧಿಸಿದ್ದರು ಎಂದರು.

ಅಲ್ಲದೇ ಲಿಟರೇಚರ್ ಫೆಸ್ಟ್‌ಗಳಲ್ಲಿ ಸೀತಾರಾಮ್ ಗೋಯಲ್ ಮತ್ತು ರಾಮ್ ಸ್ವರೂಪ್ ಅವರ ಚಿಂತನೆಗಳ ಬಗ್ಗೆ ಸೆಷನ್‌ಗಳು ನಡೆಯಬೇಕು, ಭಾರತದ ಪರಿಕಲ್ಪನೆಯನ್ನು ಅವರು ಚೆನ್ನಾಗಿ ಅರಿತಿದ್ದರು ಎಂದರು.

ಅಲ್ಲದೇ ಫೆಸ್ಟ್‌ಗಳನ್ನು ಜೈಶ್ರೀರಾಮ್ ಎಂಬ ಉದ್ಘೋಷದೊಂದಿಗೆ ಆರಂಭಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.