#MlrLitFest
  • mlrlitfest@gmail.com

ಶ್ರೀ ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನದ ಸಾಧನಾ‌ ಪ್ರಶಸ್ತಿ ಪ್ರದಾನ

Day 1 – 03-11-2018 : Lifetime Achievement Award to Padmashri Dr. S. L. Bhyrappa

ಮಂಗಳೂರು ಲಿಟ್ ಫೆಸ್ಟ್‌ ಸಾಹಿತ್ಯ ಸಂಭ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಪದ್ಮಶ್ರೀ ಎಸ್.ಎಲ್.ಭೈರಪ್ಪ ಅವರು ದೇಶದ ಸಮಗ್ರ ಧನಾತ್ಮಕ ಸುದ್ದಿಗಳನ್ನು ನೀಡಲಿರುವ RIGHT NOW APP ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮೂರು ಸಾವಿರ ಕೋಟಿ ಖರ್ಚು ಮಾಡಿ ನಿರ್ಮಿಸಲಾದ ಪುತ್ಥಳಿಯನ್ನು ವಿರೋಧಿಸುವವರು ಅದಕ್ಕೂ ಮುಂಚೆ ಇದೇ ಭಾರತ ದೇಶದ ಗಡಿಗಳಲ್ಲಿ ರಸ್ತೆಗಳನ್ನು ನಿರ್ಮಿಸಿದೆ, ಎಲ್ಲಾ ಗ್ರಾಮಗಳಿಗೂ ವಿದ್ಯುತ್ತನು ತಲುಪಿಸಿದೆ, ಎಲ್ಲರಿಗೂ ಬ್ಯಾಂಕ್ ಖಾತೆ ತೆರೆಸಿದೆ ಎನ್ನುವುದನ್ನು ಮರೆಯಬಾರದು ಎಂದರು.

ಎಸ್.ಎಲ್.ಭೈರಪ್ಪನವರನ್ನು ಕನ್ನಡದಲ್ಲಿ ಬರೆಯುವ ಭಾರತೀಯ ಸಾಹಿತಿ ಎಂದು ಪರಿಚಯಿಸುತ್ತಾರೆ ಎಂದ ಅವರು, ಭೈರಪ್ಪನವರಲ್ಲಿ ಅವರ ಬದುಕು ಕಟ್ಟಿಕೊಟ್ಟಂತಹಾ ಧಾರಣಾ ಸಾಮರ್ಥ್ಯ ಅಪಾರ ಎಂದು ವಿವರಿಸಿದರು.

ಸೀತೆಯ ಮನಸ್ಸಿನ ಆಳಕ್ಕೆ ಇಳಿದು ಅವಳ ಅಂತರಂಗದ ಸಂವೇದನೆಯನ್ನು ವರ್ಣಿಸುವುದು ಭೈರಪ್ಪ ಅವರಿಂದ ಮಾತ್ರ ಸಾಧ್ಯ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸತ್ಯವನ್ನು ಹೇಳುವ ಎದೆಗಾರಿಕೆಯನ್ನು ಇಟ್ಟುಕೊಂಡವರು ಎಸ್.ಎಲ್.ಭೈರಪ್ಪನವರು ಎಂದು ಅವರನ್ನು ವರ್ಣಿಸಿದರು.

ಈ ಐಡಿಯಾ ಆಫ್ ಭಾರತ್ ಪರಿಕಲ್ಪನೆಯು ಭಾರತದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ಎದೆಯೆತ್ತಿ ನುಡಿಯಲು ಪ್ರೇರಣೆಯಾಗಬೇಕು ಎಂದು ಅವರು ಆಶಿಸಿದರು.

ಶ್ರೀಯುತ ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನದ ಸಾಧನಾ ಪ್ರಶಸ್ತಿಯನ್ನು ನೀಡಲ್ಪಡುತ್ತಿರುವ ಈ ದಿನ ನಮ್ಮೆಲ್ಲರ ಜೀವಮಾನದಲ್ಲಿ‌ ಮರೆಯಲಾಗದಿನವಾಗಿದೆ ಎಂದು ಅವರು ಅಭಿಮಾನದಿಂದ ನುಡಿದರು.

ನಂತರ ಮಂಗಳೂರು ಲಿಟ್ ಫೆಸ್ಟ್‌ ಪರವಾಗಿ ಭೈರಪ್ಪ ಅವರಿಗೆ ಜೀವಮಾನದ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭೈರಪ್ಪ ಅವರು, ನನ್ನ ಭಾರತದ ಪರಿಕಲ್ಪನೆ ಭಾಷಣದಲ್ಲಾಗಲೀ, ಲೇಖನದಲ್ಲಾಗಲೀ ವಿವರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಇಡೀ ಭಾರತದ ಎಲ್ಲಾ ಹಳ್ಳಿಗಳೂ ಒಂದೇ ರೀತಿ ಇವೆ, ಅಲ್ಲಿನ ಜನಜೀವನದಲ್ಲಿ, ರೀತಿ ನೀತಿಗಳಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ ಎನ್ನುವುದನ್ನು ನಾನು ದೇಶದ ಹಳ್ಳಿಹಳ್ಳಿಗಳನ್ನು ತಿರುಗಿ ಕಂಡುಕೊಂಡಿದ್ದೇನೆ ಎಂದು ಅವರು ತಮ್ಮ‌ಅನುಭವವನ್ನು ಹಂಚಿಕೊಂಡರು.

ರಾಮಾಯಣ, ಮಹಾಭಾರತಗಳು ಹೇಗೆ ನಮ್ಮ‌ ಜನಜೀವನದಲ್ಲಿ ಹಾಗೂ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿವೆ ಎನ್ನುವುದನ್ನು ಲಘು ಹಾಸ್ಯಗಳೊಂದಿಗೆ ಉದಾಹರಣೆಗಳ ಸಮೇತ ವಿವರಿಸಿದರು.

ತಮ್ಮ ಕಾದಂಬರಿಗಳನ್ನು ಉಲ್ಲೇಖಿಸಿದ ಅವರು‌ ಇಡೀ ಭಾರತವೇ ಒಂದು ಎನ್ನುವ ಭಾವನೆ‌ ನನ್ನ ಅಂತರಂಗದಲ್ಲಿರುವುದರಿಂದಲೇ ನನ್ನಿಂದ ಅವುಗಳನ್ನು ಎಲ್ಲ ಕಡೆಗಳಿಗೂ ಸಲ್ಲುವಂತೆ ಬರೆಯಲು ಸಾಧ್ಯವಾಯಿತು ಎಂದರು. ಎಲ್ಲ ಭಾಷೆಗಳಲ್ಲೂ ನನ್ನ ಕಾದಂಬರಿಗಳು ಸ್ವೀಕೃತವಾಗಲು ಅದೇ ಕಾರಣ ಎಂದು ಅವರು ವಿಶ್ಲೇಷಿಸಿದರು.

ನನ್ನ ಬರವಣಿಗೆಗಳಿಗೆ ತೂಕವನ್ನು ತಂದುಕೊಟ್ಟಿದ್ದು ನಾನು ಅಧ್ಯಯನ ಮಾಡಿದ ತತ್ವಶಾಸ್ತ್ರಗಳು ಎಂದ ಅವರು ಒಬ್ಬ ಸೃಜನಶೀಲ ಸಾಹಿತಿಯಾದವನು ವಿಮರ್ಶಕನಾಗಲು ಹೋಗಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನನ್ನ ಸಾಹಿತ್ಯ ಭಾರತೀಯ ಪರಂಪರೆಯ ಸಾಹಿತ್ಯ. ಈ ಕಾರ್ಯಕ್ರಮದ ಭಾರತದ ಪರಿಕಲ್ಪನೆಯಯ ಚರ್ಚೆಗಳನ್ನು ಗಮನಿಸಿದ ನನಗೆ ಮತ್ತೊಂದು ಕಾದಂಬರಿಯನ್ನು ಬರೆಯಲು ಇದೇ ಪ್ರೇರಣೆಯಾದರೂ  ಆಶ್ಚರ್ಯವಿಲ್ಲ ಎಂದ ಅವರು ಇಲ್ಲಿ ತೋರಿಸಿದ ಪ್ರೀತಿಗೆ ಕೃತಜ್ಞತೆ ವ್ಯಕ್ತಪಡಿಸುವುದಾಗಿ ತಿಳಿಸಿದರು.