#MlrLitFest
  • mlrlitfest@gmail.com

ಕವಿಸಂಗಮ

Day 2 – 04-11-2018 at 11.15 am @ Manthan : ಕವಿಗೋಷ್ಠಿ

ಮಂಗಳೂರು ಲಿಟ್ ಫೆಸ್ಟ್‌ನ ಎರಡನೆಯ ದಿನ ಮಂಥನ ಸಭಾಂಗಣ ಕವಿತೆಗಳ ಸಂಗಮಕ್ಕೆ ಸಾಕ್ಷಿಯಾಯಿತು. ನಾಡಿನ‌ ಖ್ಯಾತ ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಕರತಾಡನಗಳು ಮೊಳಗುತ್ತಿದ್ದವು.

ಸುಬ್ರಾಯ ಚೊಕ್ಕಾಡಿಯವರು ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಯಲ್ಲಿ ಧನಂಜಯ ಕುಂಬ್ಳೆಯವರ ಮೀಟೂ, ನಂದಿನಿ ಹೆದ್ದುರ್ಗ ಅವರ ನೀಲಿ, ಡಾ. ವಸಂತಕುಮಾರ್ ಪೆರ್ಲ ಅವರ ಭೋಜರಾಜನ ಸಿಂಹಾಸನ ಕವಿತೆಗಳು ಸಭಿಕರ ಗಮನಸೆಳೆದವು.

ತಮ್ಮ ತುಂಟತನದ ಲವಲವಿಕೆಯ ಧಾಟಿಯ ಕವಿತೆಗಳಿಂದಲೇ ಜನಮನ ಗೆದ್ದ ಹಿರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್, ನವಿಲು ಮತ್ತು ಮುಳ್ಳುಹಂದಿಗಳನ್ನು ಒಂದಾಗಿಸಿ ತಮ್ಮದೇ ರೀತಿಯಲ್ಲಿ ಐಡಿಯಾ ಆಫ್ ಭಾರತ್ ಪರಿಕಲ್ಪನೆಯನ್ನು ತೆರೆದಿಟ್ಟರು. ಅವರ ಟ್ವಿಂಕಲ್ ಮತ್ತು ಅಂಕಲ್ ಕವಿತೆ ಸಭಿಕರನ್ನು ನಗೆಗಡಲಲ್ಲಿ ತೇಲಿಸುವುದರ ಜೊತೆಗೆ ಗಂಭೀರ ಚಿಂತನೆಗೆ ಹಚ್ಚಿತು. ಅವರ ಹಿಂದುತ್ವ ಕವಿತೆ ಎಲ್ಲರ ಗಮನ ಸೆಳೆಯಿತು.

ಹನಿಗವನಗಳ ರಾಜ ಎಂದೇ ಪ್ರಖ್ಯಾತರಾದ ಡುಂಡಿರಾಜ್ ಅವರು ಐಡಿಯಾ ಆಫ್ ಭಾರತ್ ಪರಿಕಲ್ಪನೆಯ ಗಂಭೀರ ಕವಿತೆಯೊಂದನ್ನು ಓದಿದಾಗ ಸಭಿಕರು ಅಚ್ಚರಿಗೊಳಗಾದರು. ನಂತರ ಅವರ ಹನಿಗವಿತೆಗಳನ್ನು ಕೇಳಿದ ಸಭಿಕರು ನಿಮಿಷಕ್ಕೊಮ್ಮೆ ಬಿದ್ದು ಬಿದ್ದು ನಕ್ಕರು.

ಸುಬ್ರಾಯ ಚೊಕ್ಕಾಡಿಯವರ ಅಧ್ಯಕ್ಷೀಯ ಭಾಷಣ ಮತ್ತು ಕವಿತೆಗಳ ವಾಚನದೊಂದಿಗೆ ಕವಿಗೋಷ್ಠಿ ಮುಕ್ತಾಯವಾಯಿತು.