#MlrLitFest
  • mlrlitfest@gmail.com

ಪ್ರಾದೇಶಿಕತೆ ಅಳವಡಿಸಿಕೊಂಡಾಗ ಮಾತ್ರ ಸಿನಿಮಾ ಭಾರತೀಯ ಸಿನಿಮಾವಾಗುತ್ತದೆ

Day 2 – 04-11-2018 at 11.30 am @ Two Sides : India in cinema-Representation & Narrative

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಜರುಗಿದ ’ಇಂಡಿಯಾ ಇನ್ ಸಿನಿಮಾ-ರೆಪ್ರಸೆಂಟೇಶನ್ ಆಂಡ್ ನರೇಟಿವ್’ ಎಂಬ ವಿಷಯದ ಸಂವಾದ ಕಾರ್ಯಕ್ರಮ ನಡೆದಿದ್ದು, ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ, ರೋಹಿತ್ ಪದಕಿ ಮತ್ತು ಪ್ರದೀಪ್ ಕೆಂಚನೂರ್ ಇದರಲ್ಲಿ ಭಾಗವಹಿಸಿದ್ದರು.

ಸಿನಿಮಾ ಎಂಬುದು ’ಕಟ್ಟಡ ನಿರ್ಮಾಣ’ದಂತೆ. ಅದಕ್ಕೆ ಅದರದ್ದೇ ಆದ ಭಾಷೆಯಿದೆ. ಬಹು ಭಾಷೆಯ, ಬಹು ಪ್ರದೇಶದ, ಬಹು ಅಭಿವ್ಯಕ್ತಿದ ಸಿನಿಮಾವೇ ಭಾರತೀಯ ಸಿನಿಮಾವಾಗಿದೆ. ಪ್ರತಿ 10 ವರ್ಷಗಳಿಗೊಮ್ಮೆ ಭಾರತದ ಸಿನಿಮಾದಲ್ಲಿ ಪರಿವರ್ತನೆಯನ್ನು ನಾವು ಕಾಣುತ್ತೇವೆ. ವಸಾಹತು ಸಂದರ್ಭದಲ್ಲಿ ಭಾರತೀಯ ಸಿನಿಮಾಗಳ ಉಗಮ ಆರಂಭಗೊಂಡಿರುವುದನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತೀಯ ಮಣ್ಣಿನ ಸೊಗಡನ್ನು ತೋರಿಸುವುದು ಮುಖ್ಯವಾಗಿದೆ. ಆದರೆ ವಾಣಿಜ್ಯೀಕರಣದಿಂದಾಗಿ ಸಿನಿಮಾ ವಿರೂಪಗೊಂಡಿದೆ. ಹಿಂದೂ ತತ್ವದಡಿಯಲ್ಲಿ ಸಿನಿಮಾವನ್ನು ಭಾರತೀಯ ಸಿನಿಮಾವಾಗಿ ಕಾಣಲು ಸಾಧ್ಯ ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಯಿತು.

ರೋಹಿತ್ ಪದಕಿ ಮಾತನಾಡಿ, ಸಿನಿಮಾ ಶುದ್ಧ ಕಲೆ ಆದರೆ ಇದು ಹಣದಿಂದ, ರಾಜಕೀಯದಿಂದ ವಿರೂಪಗೊಂಡಿದೆ. ಹಿಂದೂ ತತ್ವ ಒಂದೇ ಆಗಿರುವುದರಿಂದ ಭಾರತೀಯ ಸಿನಿಮಾದ ಗುರುತಿಸುವಿಕೆ ಸಾಧ್ಯ. ಸಿನಿಮಾ ಮೂಕವಾಗಿದ್ದರೂ, ಅದರ ನಿರೂಪಣೆಯಲ್ಲಿ ಸಂಸ್ಕೃತಿಯಿಂದ ಅದು ಭಾರತೀಯ ಸಿನಿಮಾ ಎಂದು ಗುರುತಿಸಲು ಸಾಧ್ಯವಿದೆ. ಸಂಸ್ಕೃತಿಯ ಸ್ಫೂರ್ತಿ ಗಟ್ಟಿಯಾದಾಗ ಮಾತ್ರ ಸಿನಿಮಾದಲ್ಲಿ ಭಾರತೀಯತೆ ಕಾಣಲು ಸಾಧ್ಯ ಎಂದರು.

ಭಾರತವನ್ನು ಕೆಟ್ಟದಾಗಿ ಚಿತ್ರಿಸಿ ವಿದೇಶದಲ್ಲಿ ಪ್ರದರ್ಶನಕ್ಕಿಡುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾರತೀಯ ತತ್ವ, ನೈತಿಕತೆ ಭಾರತೀಯ ಸಿನಿಮಾಗೆ ಬೇಕು. ಪಂಚೆಯಿಂದ ಭಾರತೀಯ ಎನಿಸಿಕೊಳ್ಳುವುದಿಲ್ಲ. ವರ್ತನೆಯಿಂದ ಭಾರತೀಯನಾಗುತ್ತೇವೆ ಎಂದರು.

ರಿಷಬ್ ಶೆಟ್ಟಿ ಮಾತನಾಡಿ, ಭಾರತೀಯ ಸಿನಿಮಾ ವೀಕ್ಷಕರು ಅತ್ಯಂತ ಮುಗ್ಧರು. ಪ್ರತಿ 10 ವರ್ಷಗಳಿಗೊಮ್ಮೆ ಸಿನಿಮಾ ಪರಿವರ್ತನೆಗೊಳ್ಳುತ್ತದೆ. 60ರ ದಶಕದ 70ರ ದಶಕದ ಸಿನಿಮಾಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಸಿನಿಮಾವನ್ನು ಸಿನಿಮಾವಾಗಿ ನೋಡಿದಾಗ ಮಾತ್ರ ಅಲ್ಲೊಂದು ಜೀವನ ಕಾಣುತ್ತದೆ. ನಮ್ಮ ಜೀವನಕ್ಕೆ ಅದನ್ನು ಹೋಲಿಕೆ ಮಾಡಲು ಸಾಧ್ಯವಾಗುತ್ತದೆ. ಉತ್ತಮ ಸಾಹಿತಿಗಳು, ಬರಹಗಾರರು ಇದ್ದಾಗ ಸಿನಿಮಾ ಉತ್ತಮವಾಗಿ ಬರುತ್ತದೆ. ಇದಕ್ಕೆ ಮಲಯಾಳಂ ಸಿನಿಮಾ ಉತ್ತಮ ಉದಾಹರಣೆ ಎಂದರು.

ಸಿನಿಮಾದಲ್ಲಿ ಪ್ರಾದೇಶಿಕತೆ ಅಳವಡಿಸಿದಾಗ ಮಾತ್ರ ಅದೊಂದು ದಾಖಲೆಯಾಗಲು ಸಾಧ್ಯ. ಬಾಲಿವುಡ್‌ಗಿಂತ ಹೆಚ್ಚಾಗಿ ಪ್ರಾದೇಶಿಕವಾಗಿ ಹೆಚ್ಚು ವಿಷಯಾಧಾರಿತ ಸಿನಿಮಾಗಳು ಬರುತ್ತಿವೆ. 4 ಜನ ಜ್ಯೂರಿಗಳು ನೋಡುವಂತಹ ಸಿನಿಮಾ ಸಿನಿಮಾ ಅಲ್ಲ, ಸಿನಿಮಾ ಎನ್ನುವುದು ಜನರಿಗೆ ಮನ ಮುಟ್ಟುವಂತಹದ್ದಿರಬೇಕು. ಅವಾರ್ಡ್‌ಗೋಸ್ಕರ ಸಿನಿಮಾ ಅಲ್ಲ. ಸಿನಿಮಾ ನೋಡಿದ ಜನ ಸಂತೃಪ್ತರಾಗಿ ಮಾಡಿದ ಕರತಾಡನವೇ ನನ್ನ ಪಾಲಿನ ಅವಾರ್ಡ್ ಎಂದರು.