#MlrLitFest
  • mlrlitfest@gmail.com

ಕಡಲ ನಗರಿಯಲ್ಲಿ ಆರಂಭಗೊಂಡ ಮಂಗಳೂರು ಲಿಟ್‌ಫೆಸ್ಟ್

Day 1 – 03-11-2018 : Genesis  at Chaavadi

ಮಂಗಳೂರು: ದ ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಸಾಹಿತ್ಯ ಉತ್ಸವ ಮಂಗಳೂರು ಲಿಟ್ ಫೆಸ್ಟ್ ನವೆಂಬರ್ 3 ರಂದು ಡಾ.ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಅಪಾರ ಸಾಹಿತ್ಯಾಸಕ್ತರ ಉಪಸ್ಥಿತಿಯೊಂದಿಗೆ ಚಾಲನೆಗೊಂಡಿತು.

ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಡಾ. ವಿನಯ್ ಹೆಗ್ಡೆ, ಆರ್ಗನೈಸರ್‌ನ ಸಂಪಾದಕರಾದ ಪ್ರೊ. ಪ್ರಫುಲ್ಲ ಕೇತ್ಕರ್ ಮತ್ತು ತುಷಾರ, ತರಂಗ ಮತ್ತು ತುಂತುರು ವಾರಪತ್ರಿಕೆಗಳ ಸಂಪಾದಕರಾದ ಶ್ರೀಮತಿ ಸಂಧ್ಯಾ ಪೈ ಅವರು ದೀಪ ಬೆಳಗುವ ಮೂಲಕ ಪ್ರತಿಷ್ಠಿತ ಸಾಹಿತ್ಯ ಹಬ್ಬವನ್ನು ಉದ್ಘಾಟಿಸಿದರು.

ಶ್ರೀಮತಿ ಸಂಧ್ಯಾ ಪೈ ಅವರು ಮಾತನಾಡುತ್ತಾ, ಭಾರತ ಪ್ರಪಂಚದ ಯಾವ ನಾಗರೀಕತೆಯೂ ಸಾಧಿಸದಷ್ಟು ಸಾಧಿಸಿದೆ. ನಮಗೇ ತಿಳಿಯದ ಇತಿಹಾಸ ಮತ್ತು ಜ್ಞಾನ ಇಲ್ಲಿದೆ. ಆದರೆ ಅವುಗಳನ್ನು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕಿದೆ ಎಂದು ವಿಶ್ಲೇಷಿಸಿದರು.

ಭಾರತ ಎಂದರೆ ತೇಜಸ್ಸು ಮತ್ತು ಅರಿವು ಎನ್ನುವ ಪರಿಕಲ್ಪನೆಯೊಂದಿಗೆ ನಮ್ಮ ಹಿರಿಯರು ಭಾರತವನ್ನು ಕಟ್ಟಿದ್ದರು. ನಾವು ಕಳೆದುಕೊಂಡ ಅದೇ ತೇಜಸ್ಸು ಮತ್ತು ಅರಿವನ್ನು ಈ ಮೂಲಕ ಮತ್ತೊಮ್ಮೆ ಪಡೆಯೋಣ ಎಂದು ಅವರು ಹಾರೈಸಿದರು. ಭಾರತ ಕಳೆದುಕೊಂಡ ಸುಗಂಧವನ್ನು ಮತ್ತೆ ನಾವು ಪಡೆಯಬೇಕಾಗಿದ್ದು ಭಾರತ ಎಂದಿಗೂ ಕಾಗದದ ಹೂವಾಗಬಾರದು. ಈ ನೆಲದ ಆಧ್ಯಾತ್ಮ, ವೇದಾಂತ, ವೈಜ್ಞಾನಿಕತೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಆರ್ಗನೈಸರ್ ಪತ್ರಿಕೆಯ ಸಂಪಾದಕರಾದ ಪ್ರೊ. ಪ್ರಫುಲ್ಲ ಕೇತ್ಕರ್ ಅವರು ಮಾತನಾಡಿ “ನಮ್ಮ ಅನುಭವ ಮತ್ತು ಅನುಭೂತಿಯೇ ಭಾರತ” ಎಂದು ಭಾರತದ ಪರಿಕಲ್ಪನೆಯನ್ನು ವ್ಯಾಖ್ಯಾನಿಸಿದರು.

ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ಇಂಡಿಯಾ ತನ್ನನ್ನು ಭಾರತ ಎಂದು ಗುರುತಿಸಿಕೊಂಡ ನಂತರ ವಿಶ್ವಸಂಸ್ಥೆ ಸೇರಿದಂತೆ ಯಾವುದೇ ಅಂತಾರಾಷ್ಟ್ರೀಯ ಚುನಾವಣೆಗಳಲ್ಲೂ ಸೋತಿಲ್ಲ ಎನ್ನುವುದನ್ನು ಸ್ಮರಿಸಿದರು.

ಭಾರತೀಯ ಧರ್ಮ ಪರಿಕಲ್ಪನೆಯನ್ನು ಸೆಮಿಟಿಕ್ ಧರ್ಮಗಳಿಗಿಂತಲೂ ಕೆಳಗಿಡುವಲ್ಲಿ ವಸಾಹತುಶಾಹಿ ವ್ಯವಸ್ಥೆಯಲ್ಲೇ ಓದಿ ಬೆಳೆದ ಬಹುತೇಕ ಬೌದ್ಧಿಕರ ಪ್ರಭಾವವಿದೆ ಎನ್ನುವುದನ್ನು ತಿಳಿಸಿದ ಅವರು ಆ ಬಗೆಗಿನ ಇತಿಹಾಸಗಳನ್ನು ತೆರೆದಿಟ್ಟರು.

ಆಧ್ಯಾತ್ಮ ಪ್ರಜಾಪ್ರಭುತ್ವ ಪ್ರಪಂಚಕ್ಕೆ ನೀಡಿದ್ದೇ ಭಾರತ ಎನ್ನುವುದನ್ನು ತಿಳಿಸಿದ ಅವರು ನಮಗೆ ನಮ್ಮದೇ ಆದ ಆರಾಧನೆ, ಪೂಜಾ ಕ್ರಮವನ್ನು ಆಯ್ದುಕೊಳ್ಳುವ ಹಕ್ಕಿದೆ. ಜಗತ್ತಿನ ಯಾವುದೇ ಮೂಲೆಯಲ್ಲೂ ಇಂತಹ ಹಕ್ಕು ಇಲ್ಲ. ಬೇರೆ ಬೇರೆ ಕಾರಣಗಳಿಗಾಗಿ ಇತರ ಧರ್ಮೀಯರು ಭಾರತಕ್ಕೆ ಕಾಲಿಟ್ಟಾಗ ಭಾರತೀಯ ರಾಜರುಗಳು ಅವರ ರೀತಿ ರಿವಾಜುಗಳಿಗನುಗುಣವಾಗಿ ಪ್ರಾರ್ಥಿಸಲು ಜಾಗಗಳನ್ನೊದಗಿಸಿದರು, ಪ್ರಾರ್ಥನಾಮಂದಿರಗಳನ್ನು ನಿರ್ಮಿಸಿಕೊಟ್ಟರು ಎನ್ನುವುದನ್ನು ಉದಾಹರಿಸಿದರು.

ಭಾರತದ ನೈಜ ಸ್ಫೂರ್ತಿಯೊಂದಿಗೆ ನಾವು ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಮಂಗಳೂರಿನ ಈ ಸಾಹಿತ್ಯ ಹಬ್ಬ ದೇಶದಲ್ಲಿ ಇನ್ನಷ್ಟು ಮೇಳಗಳು, ಹಬ್ಬಗಳು ಜರುಗಲು ಸ್ಫೂರ್ತಿಯಾಗಲಿದೆ. ನಿಜವಾದ ಭಾರತೀಯ ಪರಿಕಲ್ಪನೆಯನ್ನು ನೆನಪಿಸಲು ಈ ರೀತಿಯ ಇನ್ನಷ್ಟು ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಅವರು ಆಶಿಸಿದರು.

ಡಾ. ವಿನಯ್ ಹೆಗ್ಡೆಯವರು ಮಾತನಾಡುತ್ತಾ ಮಂಗಳೂರು ನಗರ ದೇಶಕ್ಕೇ ಮಾದರಿಯಾದ ನಗರವಾಗಿದೆ ಈ ದೇಶದಲ್ಲಿ ಜನಿಸಿರುವುದಕ್ಕೆ ಹೆಮ್ಮೆಯಿದೆ ಎಂದರು. ಈ ದೇಶದಲ್ಲಿ ಎಲ್ಲರಿಗೂ ಆದರ್ಶವಾಗಿರುವ ಪುರುಷೋತ್ತಮನ ದೇವಾಲಯವನ್ನು ನಿರ್ಮಿಸುವುದಕ್ಕೂ ವಿರೋಧ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ ಎಂದ ಅವರು ನಂಬಿಕೆಗಳಲ್ಲಿ ನ್ಯಾಯಾಲಯಗಳು ಮೂಗು ತೂರಿಸಬಾರದು, ರಾಜಕೀಯದಲ್ಲಿ ಧಾರ್ಮಿಕ ವಿಷಯಗಳು ಮೂಗು ತೂರಿಸಬಾರದು, ಧಾರ್ಮಿಕ ವಿಚಾರಗಳಲ್ಲಿ ರಾಜಕೀಯವೂ ಮೂಗು ತೂರಿಸಬಾರದು. ಆದರೆ ಅವೆಲ್ಲವೂ ಈಗ ನಡೆಯುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದರು.

ವೇದಿಕೆಯ ಮೇಲೆ ತಾಳೆ ಗರಿಗಳ ಬರಹಗಳನ್ನು ಹೊತ್ತಿದ್ದ ವ್ಯಾಸಪೀಠ ಎಲ್ಲರ ಗಮನ ಸೆಳೆಯಿತು.